ʼಬ್ರಹ್ಮಾಸ್ತ್ರʼ ಬಹಿಷ್ಕರಿಸಲು ಅಭಿಯಾನ: ಬಲಪಂಥೀಯರ ಆಕ್ರೋಶಕ್ಕೆ ತುತ್ತಾದ ರಣಬೀರ್‌-ಆಲಿಯಾ ನಟನೆಯ ಸಿನಿಮಾ

Update: 2022-06-15 18:32 GMT

ಮುಂಬೈ: ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬಹು ನಿರೀಕ್ಷಿತ 'ಬ್ರಹ್ಮಾಸ್ತ್ರ' ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಭಾರೀ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಅದಾಗ್ಯೂ, ಸಿನೆಮಾದಲ್ಲಿ ಹಿಂದೂ ಧಾರ್ಮಿಕ ಭಾವನೆಯನ್ನು ಕೆರಳಿಸಲಾಗಿದೆ ಎಂದು ಬಲಪಂಥೀಯರು '#BoycottBrahmastra' ಹ್ಯಾಷ್‌ಟ್ಯಾಗ್‌ ಅನ್ನು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಮಾಡಿದ್ದಾರೆ.

ಸದ್ಯ, ಬಿಡುಗಡೆಯಾಗಿರುವ ಟ್ರೇಲರಿನ ವಿವಿಧ ದೃಶ್ಯಗಳಲ್ಲಿ ಹಿಂದೂ ನಂಬಿಕೆಗಳಿಗೆ ಅಗೌರವ ತೋರುವ ಸನ್ನಿವೇಶಗಳಿವೆಯೆಂದು ಪ್ರತಿಪಾದಿಸಲಾಗುತ್ತಿದೆ. ಅದರಲ್ಲೂ, ಚಿತ್ರದ ನಾಯಕನಟ ರಣಬೀರ್‌ ಕಪೂರ್‌ ಹಾರಿ ಗಂಟೆ ಬಾರಿಸುವ ದೃಶ್ಯವು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಆ ದೃಶ್ಯದಲ್ಲಿ ಪಾದರಕ್ಷೆ ಧರಿಸಿರುವುದು ಕಂಡು ಬಂದಿದ್ದು, ದೇವಸ್ಥಾನದೊಳಗೆ ಪಾದರಕ್ಷೆ ಧರಿಸಿ, ನಂಬಿಕೆಗಳಿಗೆ ಘಾಸಿ ಮಾಡಲಾಗಿದೆ ಎಂದು ಚಿತ್ರ ನಿಷೇಧದ ಅಭಿಯಾನದಲ್ಲಿ ಪಾಲ್ಗೊಂಡಿರುವವರು ಆರೋಪಿಸಿದ್ದಾರೆ.

ಅದಾಗ್ಯೂ, ʼಬ್ರಹ್ಮಾಸ್ತ್ರʼ ಚಿತ್ರದ ಟ್ರೇಲರ್‌ ಬಹುತೇಕ ಸಿನೆಮಾ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ. ಅದರಲ್ಲೂ ಫ್ಯಾಂಟಸಿ ಸಿನೆಮಾ ಪ್ರೇಮಿಗಳಿಗೆ ಈ ಚಿತ್ರವು ತೀವ್ರ ನಿರೀಕ್ಷೆಯನ್ನು ನೀಡಿದೆ. ಟ್ರೇಲರಿನಲ್ಲಿ ಚಿತ್ರದ ದೃಶ್ಯಗಳು, ವಿಎಫ್‌ಎಕ್ಸ್‌ ಅದ್ಭುತವಾಗಿ ಮೂಡಿ ಬಂದಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.  ಚಿತ್ರವು ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಳೆಯಾಲಂ ಭಾಷೆಯಲ್ಲಿ ತೆರೆ ಕಾಣಲಿದೆ.

 ಚಿತ್ರದಲ್ಲಿ ರಣಬೀರ್ ಮತ್ತು ಆಲಿಯಾ ಮುಖ್ಯಭೂಮಿಕೆಯಲ್ಲಿದ್ದರೆ, ಅಮಿತಾಬ್ ಬಚ್ಚನ್, ತೆಲುಗಿನ ಹಿರಿಯ ನಟ ನಾಗಾರ್ಜುನ ಮೊದಲಾದವರು ಟ್ರೇಲರಿನಲ್ಲಿ ಕಾಣಿಸಿಕೊಂಡಿದ್ದಾರೆ. ಬಿ-ಟೌನ್‌ನಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ ದೀಪಿಕಾ ಪಡುಕೋಣೆ ಹಾಗೂ ಶಾರುಖ್‌ ಖಾನ್‌ ಕೂಡಾ ಈ ಚಿತ್ರದಲ್ಲಿ ಪಾತ್ರ ಮಾಡಿರುವ ಸಾಧ್ಯತೆ ಇದೆ. ಟ್ರೇಲರಿನ ಒಂದು ದೃಶ್ಯವು ಶಾರುಖ್‌ ಖಾನ್‌ ನಂತೆ ಕಂಡಿದ್ದು, ಹಲವು ನೆಟ್ಟಿಗರು ಅದನ್ನು ಶಾರುಖ್‌ ಎಂದು ಗುರುತಿಸಿ, ಆ ದೃಶ್ಯವನ್ನು ಹಂಚಿಕೊಂಡಿದ್ದಾರೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News