ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳಾಗಿ ಹೊರಹೊಮ್ಮಿದ ಗೋಪಾಲ್ ಗಾಂಧಿ, ಫಾರೂಕ್ ಅಬ್ದುಲ್ಲಾ

Update: 2022-06-16 05:20 GMT
ಗೋಪಾಲ್ ಗಾಂಧಿ, Photo:PTI

ಹೊಸದಿಲ್ಲಿ: ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವ ಪ್ರಸ್ತಾಪವನ್ನು ಶರದ್ ಪವಾರ್ ಬುಧವಾರ ನಿರಾಕರಿಸಿದ್ದು, "ತನ್ನಲ್ಲಿ  ಇನ್ನೂ ಸಕ್ರಿಯ ರಾಜಕೀಯ ಇನಿಂಗ್ಸ್ ಬಾಕಿ ಇದೆ" ಎಂದು ಪ್ರತಿಪಕ್ಷಗಳ ಸಭೆಯಲ್ಲಿ ಹೇಳಿದ್ದಾರೆ. ಮಾಜಿ ಗವರ್ನರ್ ಗೋಪಾಲ್ ಗಾಂಧಿ ಹಾಗೂ ಮಾಜಿ ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ ಸಂಭಾವ್ಯ ಅಭ್ಯರ್ಥಿಗಳಾಗಿ ಹೊರಹೊಮ್ಮಿದ್ದಾರೆ.

ಐದು ಪ್ರಮುಖ ಪಕ್ಷಗಳು  ಗೈರು ಹಾಜರಿದ್ದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸರಕಾರವನ್ನು ಟೀಕಿಸುವ ಮೂರು ಪುಟಗಳ ಹೇಳಿಕೆಯ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳು ಕಂಡುಬಂದವು. ಮಾಧ್ಯಮಗಳಿಗೆ ತಮ್ಮ ಹೇಳಿಕೆಗೆ  ಅಂತಿಮವಾಗಿ ನಾಲ್ಕು ಸಾಲುಗಳನ್ನು ತೆಗೆದುಕೊಳ್ಳಲು ಪಕ್ಷಗಳು ಒಪ್ಪಿಕೊಂಡವು.

ಸಭೆಯನ್ನು ಕರೆದಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ದೇಶದಲ್ಲಿ ನಡೆಯುತ್ತಿರುವ ಬುಲ್ಡೋಜಿಂಗ್" ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳು ಒಟ್ಟಾಗಿ ಕುಳಿತುಕೊಳ್ಳುವ ಅಗತ್ಯವಿದೆ'' ಎಂದು ಹೇಳಿದರು.

ಬ್ಯಾನರ್ಜಿ ಅವರು 22 ಪಕ್ಷಗಳನ್ನು ಆಹ್ವಾನಿಸಿದ್ದರು. ಆದರೆ 16 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.

"ಬಿಜೆಪಿ ಹಾಗೂ  ಅದರ ಮಿತ್ರಪಕ್ಷಗಳ ನಾಮನಿರ್ದೇಶನದ ವಿರುದ್ಧ ರಾಷ್ಟ್ರಪತಿ ಅಭ್ಯರ್ಥಿಯನ್ನು ಹೆಸರಿಸಲು ಅವರು ಜೂನ್ 21 ರ ಗಡುವನ್ನು ನಿರ್ಧರಿಸಿದರು. ಮಮತಾ ಬ್ಯಾನರ್ಜಿ, ಶರದ್ ಪವಾರ್ ಹಾಗೂ  ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು  ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಒಮ್ಮತ ಮೂಡಿಸಲು ವಿವಿಧ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ'' ಎಂದು ಡಿಎಂಕೆ ನಾಯಕ ಟಿ.ಆರ್. ಬಾಲು ಹೇಳಿದ್ದಾರೆ.

ಜುಲೈ 18 ರಂದು ರಾಷ್ಟ್ರಪತಿ  ಚುನಾವಣೆ ನಡೆಯಲಿದ್ದು, ಜುಲೈ 21 ರಂದು ಫಲಿತಾಂಶ ಪ್ರಕಟವಾಗಲಿದೆ. ಜೂನ್ 29 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News