ಸಚಿನ್ ತೆಂಡೂಲ್ಕರ್‌ರಿಂದ ಪ್ರಶಂಸಾ ಪತ್ರ ಪಡೆದ ಉಡುಪಿಯ ಚಿತ್ರ ಕಲಾವಿದ
ಉಡುಪಿ: ಕ್ರಿಕೆಟ್ ಲೋಕದ ದಂತಕತೆ ಸಚಿನ್ ತೆಂಡೂಲ್ಕರ್, ಉಡುಪಿಯ ವಿಶಿಷ್ಟ ಚಿತ್ರ ಕಲಾವಿದನೊಬ್ಬನನ್ನು ಹಾಡಿ ಹೊಗಳಿದ್ದಾರೆ. ಆತನ ಬೆನ್ನು ತಟ್ಟಿ ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರನ್ನೇ ವಿಷಯವಾಗಿ ಇಟ್ಟುಕೊಂಡು ಉಡುಪಿ ಮರ್ಣೆಯ ಕಲಾವಿದ ಮಹೇಶ್, ಒಂದು ಕಲಾಕೃತಿ ರಚಿಸಿದ್ದರು. ಈ ಕಲಾಕೃತಿಗೆ ವ್ಯಾಪಕ ಮನ್ನಣೆ ದೊರಕಿದ ಹಿನ್ನೆಲೆಯಲ್ಲಿ ಸಚಿನ್ ತೆಂಡೂಲ್ಕರ್ ಕಲಾವಿದನಿಗೆ ಪ್ರಶಂಸಾ ಪತ್ರ ಕಳುಹಿಸಿದ್ದಾರೆ.
ಅಶ್ವತ್ಥದ ಎಲೆಯಲ್ಲಿ ಮೂಡಿದ ತೆಂಡೂಲ್ಕರ್
ಕಲಾವಿದ ಮಹೇಶ್ ಮರ್ಣೆ ಅಶ್ವತ್ಥದ ಎಲೆಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ರಚಿಸುವ ಮೂಲಕ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ್ದಾರೆ. ಅಶ್ವತ್ಥ ಎಲೆಯಲ್ಲಿ ಭಾವಚಿತ್ರಗಳನ್ನು ಮೂಡಿಸುವಲ್ಲಿ ಮಹೇಶ್ ಸಿದ್ಧಹಸ್ತ ಕಲಾವಿದ. 2015ರಲ್ಲಿ ಐಸ್ ಕ್ರೀಮ್ ಕಡ್ಡಿಗಳು ಮತ್ತು ಬೆಂಕಿ ಕಡ್ಡಿಗಳಿಂದ ರಚಿಸಿದ ಗಣಪತಿಯ ಕಲಾಕೃತಿಯ ಮೂಲಕ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಕೂಡಾ ಸೇರ್ಪಡೆಯಾಗಿದ್ದರು.
ಅತ್ಯಂತ ಸೂಕ್ಷ್ಮವಾಗಿ ಅಶ್ವತ್ಥದ ಎಲೆಯಲ್ಲಿ ವಿವಿಧ ಮುಖಗಳ ಪಡೆಯಚ್ಚು ಮೂಡಿಸುವುದರಲ್ಲಿ ಮಹೇಶ್ ನೈಪುಣ್ಯತೆ ಸಾಧಿಸಿದ್ದಾರೆ. ಕೇವಲ ಏಳು ನಿಮಿಷಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ರಚಿಸುವ ಮೂಲಕ ಇವರ ಈ ಕಲಾಕೃತಿ ಎಕ್ಸ್ ಕ್ಲೂಸಿವ್ ವಲ್ಡ್ ರೆಕಾರ್ಡ್ ಪುಟ ಸೇರಿತ್ತು.
ಉತ್ತರಪ್ರದೇಶದ ಬರೇಲಿಯ ಲಾಟ ಪ್ರತಿಷ್ಠಾನಕ್ಕೆ ಅಶ್ವತ್ಥ ಎಲೆಯ ಮೂಲಕ ರಚಿಸಿದ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರದ ವಿಡಿಯೋವನ್ನು ಕಳುಹಿಸಲಾಗಿತ್ತು. ಈ ಸೂಕ್ಷ್ಮ ಕಲಾಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಂಸ್ಥೆ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಗೆ ಮರ್ಣೆ ಅವರ ಹೆಸರನ್ನು ಸೇರ್ಪಡೆಗೊಳಿಸಿತ್ತು.
ಮಹೇಶ್ ಮರ್ಣೆಗೆ ಅಮೂಲ್ಯ ಗಿಫ್ಟ್ ಕಳುಹಿಸಿದ ಸಚಿನ್ ತೆಂಡೂಲ್ಕರ್
ಈ ದಾಖಲೆಯ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಸಚಿನ್ ತೆಂಡೂಲ್ಕರ್ ಮಹೇಶ್ ಮರ್ಣೆ ಅವರಿಗೆ ಪ್ರಶಂಸಾ ಪತ್ರವನ್ನು ಕಳುಹಿಸಿದ್ದಾರೆ.
"ನನ್ನ ಮೇಲೆ ಪ್ರೀತಿ ಇಟ್ಟು ನೀವು ರಚಿಸಿರುವ ಕಲಾಕೃತಿ ಕಂಡು ನಾನು ಬೆರಗಾಗಿದ್ದೇನೆ. ನೀವು ನನ್ನ ಮೇಲೆ ತೋರಿಸಿರುವ ಪ್ರೀತಿಗೆ ಪ್ರತಿಯಾಗಿ ನನ್ನ ಸಂಗ್ರಹದಲ್ಲಿರುವ ಎರಡು ಅಮೂಲ್ಯ ಫೋಟೋಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ. ನನ್ನ ಎರಡನೇ ಇನ್ನಿಂಗ್ಸ್ ಗೂ ಕೂಡಾ ನೀವು ತೋರಿಸುತ್ತಿರುವ ಪ್ರೀತಿ ಮತ್ತು ಬೆಂಬಲ ನನಗೆ ಪ್ರೇರಣೆಯಾಗಿದೆ" ಹೀಗೆಂದು ಬರೆದು, ಹಸ್ತಾಕ್ಷರ ಮಾಡಿದ ಪತ್ರವನ್ನು ಕಳುಹಿಸಿದ್ದಾರೆ.
ತನ್ನ ವೃತ್ತಿಜೀವನದಲ್ಲಿ 100ನೇ ಸೆಂಚುರಿ ಬಾರಿಸಿರುವ ಕ್ಷಣದ ಅಮೂಲ್ಯ ಭಾವಚಿತ್ರದ ಜೊತೆಗೆ ವರ್ಲ್ಡ್ ಕಪ್ ಎತ್ತಿರುವ ಮತ್ತೊಂದು ಚಿತ್ರವನ್ನು ಕೂಡ ಪತ್ರದ ಜೊತೆ ಲಗತ್ತಿಸಿ ಕಳುಹಿಸಿದ್ದಾರೆ.
ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶವಾಗಿರುವ ಮರ್ಣೆ ಎಂಬಲ್ಲಿ ಇದ್ದುಕೊಂಡು, ಮಹೇಶ್ ಅಪರೂಪದ ಪ್ರತಿಭೆಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ನೂರಾರು ಸೆಲೆಬ್ರಿಟಿಗಳ ಚಿತ್ರವನ್ನು ಅಶ್ವತ್ಥದ ಎಲೆಯಲ್ಲಿ ಮೂಡಿಸುವ ಮೂಲಕ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪುನೀತ್ ರಾಜ್ ಕುಮಾರ್ ನಿಧನರಾದಾಗ, ಮಹೇಶ್ ಮರ್ಣೆ ಬಿಡಿಸಿದ ಚಿತ್ರ ತುಂಬಾ ವೈರಲ್ ಆಗಿತ್ತು. ಕಾಲ ಕಾಲಕ್ಕೆ ಹೊಂದಿಕೊಳ್ಳುವಂತೆ, ವಿವಿಧ ಸೆಲೆಬ್ರಿಟಿಗಳ ಚಿತ್ರವನ್ನ ಮೂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಮಹೇಶ್ ಮರ್ಣೆ ಪಾತ್ರರಾಗುತ್ತಾ ಬಂದಿದ್ದಾರೆ.