ಪ್ರವಾದಿ ನಿಂದನೆ ವಿರುದ್ಧದ ಹೋರಾಟಗಾರರಿಂದ ಪೊಲೀಸ್‌ ಹತ್ಯೆ ಎಂದು ತಿರುಚಿದ ಸುದ್ದಿ ಹರಡಿದ ಬಲಪಂಥೀಯರು

Update: 2022-06-16 14:06 GMT

ಹೊಸದಿಲ್ಲಿ: ಕೊಲ್ಕತ್ತಾದಲ್ಲಿ ರಸ್ತೆಯೊಂದರಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಸತ್ತು ಬಿದ್ದಿರುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರು ಸೇರಿದಂತೆ ಹಲವರು ಶೇರ್ ಮಾಡಿ ಪ್ರವಾದಿ ವಿರುದ್ಧ ಬಿಜೆಪಿಯ ಉಚ್ಛಾಟಿತ ಬಿಜೆಪಿ ನಾಯಕಿ ನೂಪುರ್ ಶರ್ಮ ನೀಡಿದ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದವರು ಈತನನ್ನು  ಹತ್ಯೆಗೈದಿದ್ದಾರೆ ಎಂಬ ವಿವರಣೆಯೊಂದಿಗೆ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ಆದರೆ ಇದು ಹಳೆಯ ವೀಡಿಯೋ ಆಗಿದ್ದು, ಸುಳ್ಳುಸುದ್ದಿಯನ್ನು ಹರಡಲಾಗಿದೆ ಎಂದು Altnews.in ಸತ್ಯಶೋಧನಾ ವರದಿ ಪ್ರಕಟಿಸಿದೆ.

ವೀಡಿಯೋದಲ್ಲಿ ಮೃತ ಪೊಲೀಸ್ ಸಿಬ್ಬಂದಿ ಪಕ್ಕದಲ್ಲಿ ಒಂದು ರೈಫಲ್ ಇರುವುದು ಹಾಗೂ ರಕ್ತ ಹರಿದಿರುವುದು ಮತ್ತು ಜನ ಸುತ್ತುವರಿದು ನೋಡುತ್ತಿರುವುದು ಕಾಣಿಸುತ್ತದೆ.

ಸದ್ಯ ಈ ವೀಡಿಯೋ ಫೇಸ್ಬುಕ್ ಮತ್ತು ಟ್ವಿಟ್ಟರ್‍ನಲ್ಲಿ ವೈರಲ್ ಆಗಿದೆ.

ಈ ಕುರಿತು ಆಲ್ಟ್ ನ್ಯೂಸ್ ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ಮಾಡಿದಾಗ ಜೂನ್ 10, 2022ರ ಎನ್‍ಡಿಟಿವಿ ವರದಿಯೊಂದು ಕಣ್ಣಿಗೆ ಬಿದ್ದಿದೆ. ವೀಡಿಯೋವನ್ನು ಇದರಲ್ಲಿ ಮಬ್ಬಾಗಿಸಲಾಗಿದೆ. ಕೊಲ್ಕತ್ತಾದಲ್ಲಿರುವ ಬಾಂಗ್ಲಾದೇಶ ಡೆಪ್ಯುಟಿ ಹೈಕಮಿಷನ್‍ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಚೊಡುಪು ಲೆಪ್ಚಾ ಎಂಬಾತ ಹಲವಾರು ಸುತ್ತು ಗುಂಡು ಹಾರಿಸಿ ಕೊನೆಗೆ ತನ್ನ ಸರ್ವಿಸ್ ರೈಫಲ್‍ನಿಂದ ತನಗೆ ತಾನೇ ಗುಂಡಿಕ್ಕಿಕೊಂಡು ಆತ್ಮಹತ್ಯೆಗೈದಿದ್ದಾನೆ ಎಂದು ಅದರಲ್ಲಿ  ಬರೆಯಲಾಗಿದೆ.

ಈತ ಪೊಲೀಸ್ ಕಾನ್‍ಸ್ಟೇಬಲ್ ಆಗಿದ್ದು ಯದ್ವಾತದ್ವಾ ಗುಂಡು ಹಾರಿಸಿದ್ದರಿಂದ ಆ ದಾರಿಯಲ್ಲಿ ಸಾಗುತ್ತಿದ್ದ 28 ವರ್ಷದ ಯುವತಿಯೊಬ್ಬಳು ಕೂಡ ಸಾವಿಗೀಡಾಗಿದ್ದರೆ ಇನ್ನಿಬ್ಬರು ಗಾಯಗೊಂಡಿದ್ದರು.

Full View

ಈ ಘಟನೆಗೂ ನೂಪುರ್ ಶರ್ಮ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಗಳಿಗೂ ಸಂಬಂಧವಿಲ್ಲ ಎಂದು ಕೊಲ್ಕತ್ತಾದ ಹೆಚ್ಚುವರಿ ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಕಾನ್‍ಸ್ಟೇಬಲ್‍ನ ಈ ಕೃತ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಆತ ಖಿನ್ನತೆಯಿಂದ ಬಳಲುತ್ತಿದ್ದಿರಬಹುದು ಎಂಬ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಪೆ:  Altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News