ಹಲವು ರಾಜ್ಯಗಳಿಗೆ ವ್ಯಾಪಿಸಿದ ‘ಅಗ್ನಿಪಥ’ ಪ್ರತಿಭಟನೆ: ಬಿಜೆಪಿ ಕಚೇರಿ ಧ್ವಂಸ, ಬಸ್, ರೈಲುಗಳ ಮೇಲೆ ದಾಳಿ ಈ ಯೋಜನೆಗೆ

Update: 2022-06-16 16:56 GMT
PHOTO: ANI

ಹೊಸದಿಲ್ಲಿ,ಜೂ.16: ಕೇಂದ್ರ ಸರಕಾರದ ಅಲ್ಪಾವಧಿಯ ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ್’ ಅನ್ನು ವಿರೋಧಿಸಿ ಸಶಸ್ತ್ರ ಪಡೆಗಳಲ್ಲಿ ಉದ್ಯೋಗಾಕಾಂಕ್ಷಿಗಳು ಸತತ ಎರಡನೇ ದಿನವಾದ ಗುರುವಾರವೂ ವ್ಯಾಪಕ ಪ್ರತಿಭಟನೆಯನ್ನು ನಡೆಸಿದರು. ಬಿಹಾರದಲ್ಲಿ ಭುಗಿಲೆದ್ದಿದ್ದ ಪ್ರತಿಭಟನೆ ಗುರುವಾರ ಉತ್ತರ ಪ್ರದೇಶ,ಮಧ್ಯಪ್ರದೇಶ,ಹರ್ಯಾಣ ಮತ್ತು ರಾಜಸ್ಥಾನದ ಹಲವಾರು ಭಾಗಗಳಿಗೂ ವ್ಯಾಪಿಸಿದೆ. 

ಬಸ್ ಹಾಗೂ ರೈಲುಗಳ ಮೇಲೆ ಕಲ್ಲುತೂರಾಟ ನಡೆಸಿದ ಉದ್ರಿಕ್ತ ಪ್ರತಿಭಟನಾಕಾರರು ರೈಲು ಬೋಗಿಗಳಿಗೂ ಬೆಂಕಿ ಹಚ್ಚಿದ್ದಾರೆ. ಕಲ್ಲುತೂರಾಟದಲ್ಲಿ ಬಿಹಾರದ ಬಿಜೆಪಿ ಶಾಸಕಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. 22 ರೈಲುಗಳನ್ನು ರದ್ದುಗೊಳಿಸಲಾಗಿದ್ದು,ಐದು ರೈಲುಗಳು ಅರ್ಧದಲ್ಲಿಯೇ ಸ್ಥಗಿತಗೊಂಡಿವೆ. ಬಿಹಾರದಲ್ಲಿ ಪ್ರತಿಭಟನೆಗಳನ್ನು ನಿಯಂತ್ರಿಸಲು ನೆರೆಯ ಉತ್ತರ ಪ್ರದೇಶದಿಂದ ಪೊಲೀಸ್ ಪಡೆಗಳನ್ನು ಕರೆಸಲಾಗಿದೆ.

ಪ್ರತಿಭಟನೆಗಳ ಕೇಂದ್ರಬಿಂದುವಾಗಿರುವ ಬಿಹಾರದ ಹಲವೆಡೆ ಹಿಂಸಾಚಾರಗಳು ನಡೆದಿದ್ದು,ಪ್ರತಿಭಟನಾಕಾರರು ರೈಲುಗಳು ಮತ್ತು ಬಸ್ಸುಗಳ ಕಿಟಕಿ ಗಾಜುಗಳನ್ನು ಒಡೆದಿದ್ದಾರೆ. ಭಬುವಾ ಮತ್ತು ಛಾಪ್ರಾಗಳಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಲಾಗಿದೆ. ಭಬುವಾ ರೋಡ್ ರೈಲು ನಿಲ್ದಾಣದಲ್ಲಿ ಲಾಠಿಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಕಿಟಕಿ ಗಾಜುಗಳನ್ನು ಒಡೆದುಹಾಕಿ,ಬೊಗಿಯೊಂದಕ್ಕೆ ಬೆಂಕಿಯನ್ನು ಹಚ್ಚಿದ್ದಾರೆ. ‘ಇಂಡಿಯನ್ ಆರ್ಮಿ ಲವರ್ಸ್ ’ಎಂಬ ಬ್ಯಾನರ್ ಹಿಡಿದುಕೊಂಡಿದ್ದ ಅವರು ಅಗ್ನಿಪಥ್ ಯೋಜನೆಯನ್ನು ಧಿಕ್ಕರಿಸಿ ಘೋಷಣೆಗಳನ್ನು ಕೂಗುತ್ತಿದ್ದರು.

ನವಾಡಾದಲ್ಲಿ ಪ್ರತಿಭಟನಾಕಾರರು ನ್ಯಾಯಾಲಯಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕಿ ಅರುಣಾ ದೇವಿಯವರ ಕಾರಿಗೆ ಕಲ್ಲುತೂರಾಟ ನಡೆಸಿದ್ದು,ಶಾಸಕಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ತನ್ನ ಕಾರಿಗೆ ಅಳವಡಿಸಿದ್ದ ಪಕ್ಷದ ಧ್ವಜವನ್ನು ಕಂಡು ಕೆರಳಿದ್ದಂತೆ ಕಂಡು ಬಂದಿದೆ,ಅವರು ಧ್ವಜವನ್ನು ಹರಿದುಹಾಕಿದ್ದಾರೆ ಎಂದು ದೇವಿ ಸುದ್ದಿಗಾರರಿಗೆ ತಿಳಿಸಿದರು. ಪೊಲೀಸ್ ದೂರನ್ನು ದಾಖಲಿಸಲೂ ತನಗೆ ಭಯವಾಗುತ್ತಿದೆ ಎಂದರು. ನವಾಡಾದಲ್ಲಿಯ ಬಿಜೆಪಿ ಕಚೇರಿಯನ್ನೂ ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ. 

ನಗರದಲ್ಲಿ ಅಲ್ಲಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿದ್ದ ಪ್ರತಿಭಟನಾಕಾರರು ಯೋಜನೆಯನ್ನು ಹಿಂದೆಗೆದುಕೊಳ್ಳುವಂತೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.

ಬಿಹಾರದ ಕೆಲವೆಡೆಗಳಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮತ್ತು ಲಾಠಿ ಪ್ರಹಾರ ನಡೆಸಿದರು. ಆರಾ ರೈಲು ನಿಲ್ದಾಣದಲ್ಲಿ ತಮ್ಮತ್ತ ಕಲ್ಲುತೂರಾಟ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ. ಪ್ರತಿಭಟನಾಕಾರರು ನಿಲ್ದಾಣದಲ್ಲಿಯ ಪೀಠೋಪಕರಣಗಳನ್ನು ಹಳಿಗಳ ಮೇಲೆ ಎಸೆದು ಬೆಂಕಿ ಹಚ್ಚಿದ್ದಾರೆ.

ಜೆಹಾನಾಬಾದ್‌ನಲ್ಲಿ ರೈಲ್ವೆ ಹಳಿಗಳನ್ನು ಆಕ್ರಮಿಸಿಕೊಂಡಿದ್ದ ವಿದ್ಯಾರ್ಥಿಗಳ ಕಲ್ಲುತೂರಾಟದಿಂದ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಪೊಲೀಸರು ಕೊನೆಗೂ ಅವರನ್ನು ಬೆನ್ನಟ್ಟಿ ಓಡಿಸಿ ರೈಲು ಹಳಿಗಳನ್ನು ಮುಕ್ತಗೊಳಿಸುವಲ್ಲಿ ಸಫಲರಾಗಿದ್ದಾರೆ. ಪೊಲೀಸರು ಮತ್ತು ವಿದ್ಯಾರ್ಥಿಗಳು ಪರಸ್ಪರ ಕಲ್ಲುತೂರಾಟದಲ್ಲಿ ನಿರತರಾಗಿದ್ದನ್ನು ವೀಡಿಯೊ ದೃಶ್ಯಾವಳಿಗಳು ತೋರಿಸಿವೆ. ಪ್ರತಿಭಟನಾಕಾರರನ್ನು ಬೆದರಿಸಲು ಪೊಲೀಸರು ಅವರತ್ತ ಬಂದೂಕುಗಳನ್ನೂ ಗುರಿ ಮಾಡಿದ್ದರು.

ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಹಳೆಯ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ಕೆಲವು ಪ್ರತಿಭಟನಾಕಾರರು ಹೇಳಿದರೆ, ಅಗ್ನಿಪಥ್ ಯೋಜನೆಯಡಿ ನಾಲ್ಕು ವರ್ಷಗಳ ಸೇವಾವಧಿಯ ಬಳಿಕ ಇತರ ಉದ್ಯೋಗಗಳಲ್ಲಿ ಮೀಸಲಾತಿ ನೀಡಬೇಕು ಎಂದು ಇತರ ಕೆಲವರು ಹೇಳಿದರು.

ಏನಿದು ನಾಲ್ಕು ವರ್ಷಗಳ ಸೇವೆ? ಅವರು ಯುವಕರನ್ನು ನೇಮಿಸಿಕೊಳ್ಳುತ್ತಾರೆ ಮತ್ತು ಇನ್ನೂ ಯುವಕರಾಗಿದ್ದಾಗಲೇ ನಿವೃತ್ತಿಗೊಳಿಸಲು ಯೋಜಿಸಿದ್ದಾರೆ ಎಂದು ಭಾಗಲ್ಪುರದಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಮನೋಜ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಹರ್ಯಾಣದ ಗುರುಗ್ರಾಮ,ರೇವಾರಿ ಮತ್ತು ಪಲ್ವಾಲ್‌ಗಳಲ್ಲಿಯೂ ಪ್ರತಿಭಟನೆಗಳು ನಡೆದಿವೆ. ಪಲ್ವಾಲ್‌ನಲ್ಲಿ ಪ್ರತಿಭಟನಾಕಾರರ ಕಲ್ಲುತೂರಾಟದಿಂದ ಪೊಲೀಸ್ ವಾಹನವೊಂದು ಹಾನಿಗೀಡಾಗಿದೆ. ಗುರುಗ್ರಾಮದಲ್ಲಿ ಪ್ರತಿಭಟನಾಕಾರರು ಬಸ್ ನಿಲ್ದಾಣಗಳಿಗೆ ಮುತ್ತಿಗೆ ಹಾಕಿ ರಸ್ತೆ ತಡೆಗಳನ್ನು ನಿರ್ಮಿಸಿದ್ದರಿಂದ ಗುರುಗ್ರಾಮ-ಜೈಪುರ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಗ್ವಾಲಿಯರ್‌ನಲ್ಲಿ ಪ್ರತಿಭಟನಾಕಾರರ ದಾಳಿಯಿಂದ ಬಿರ್ಲಾನಗರ ನಿಲ್ದಾಣಕ್ಕೆ ಭಾರೀ ಹಾನಿಯಾಗಿದೆ.

ಉ.ಪ್ರದೇಶದ ಬುಲಂದಶಹರ್ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಗುಂಪೊಂದು ಜಿ.ಟಿ.ರೋಡ್‌ನಲ್ಲಿ  ತಡೆಯನ್ನೊಡ್ಡಿ ಅಗ್ನಿಪಥ್ ಯೋಜನೆಯನ್ನು ಹಿಂದೆಗೆದುಕೊಳ್ಳುವಂತೆ ಘೋಷಣೆಗಳನ್ನು ಕೂಗಿತು. ಗೊಂಡಾ,ಉನ್ನಾವೊ ಮತ್ತು ಬಲಿಯಾ ಜಿಲ್ಲೆಗಳಲ್ಲಿಯೂ ಪ್ರತಿಭಟನೆಗಳು ನಡೆದಿವೆ.

ಅತ್ತ ರಾಜಸ್ಥಾನದ ಜೋಧಪುರ‌, ಸಿಕಾರ್, ಜೈಪುರ, ನಾಗೌರ್, ಅಜ್ಮೇರ್ ಮತ್ತು ಝುನ್ಝುನು ಜಿಲ್ಲೆಗಳೂ ಪ್ರತಿಭಟನೆಗೆ ಸಾಕ್ಷಿಯಾಗಿದ್ದು, ಹನಮಾನ್ ಬೇನಿವಾಲ್ ನೇತೃತ್ವದ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಗಳು ನಡೆಯುತ್ತಿದ್ದ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.‘ಪ್ರತಿಭಟನೆಗಳು ನಡೆದ ಪ್ರದೇಶಗಳಿಂದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಪರಿಸ್ಥಿತಿ ಶಾಂತಿಯುತವಾಗಿದೆ ’ಎಂದು ಎಡಿಜಿಪಿ ಹವಾಸಿಂಗ್ ಘುಮರಿಯಾ ತಿಳಿಸಿದರು.

ಪಾಟ್ನಾ-ಗಯಾ,ಬರೌನಿ-ಕಥಿಹಾರ ಮತ್ತು ದಾನಾಪುರ-ದೀನದಯಾಳ ಉಪಾಧ್ಯಾಯ ಜಂಕ್ಷನ್ ಸೇರಿದಂತೆ ಹಲವಾರು ನಿಬಿಡ ರೈಲು ಮಾರ್ಗಗಳು ಪ್ರತಿಭಟನೆಗಳಿಂದ ತೀವ್ರ ಬಾಧಿತಗೊಂಡಿದ್ದವು. ಬಿಹಾರದ ಬಕ್ಸರ್‌ನಲ್ಲಿ ಪ್ರತಿಭಟನಾಕಾರರು ಹಳಿಗಳಲ್ಲಿ ತಡೆಗಳನ್ನೊಡ್ಡಿದ್ದರಿಂದ ಹಲವಾರು ರೈಲುಗಳು ನಿಲ್ದಾಣದ ಹೊರ ಸಿಗ್ನಲ್ ಬಳಿ ಸಿಕ್ಕಿಹಾಕಿಕೊಂಡಿದ್ದವು.

ಬಕ್ಸರ್,ಜೆಹಾನಾಬಾದ್,ಕಥಿಹಾರ,ಸರನ್,ಭೋಜಪುರ ಮತ್ತು ಕೈಮುರ್ ಜಿಲ್ಲೆಗಳಲ್ಲಿ ರಸ್ತೆ ಸಂಚಾರ ವ್ಯತ್ಯಯಗೊಂಡಿತ್ತು. ಕೆಲವೆಡೆ ಕಲ್ಲು ತೂರಾಟದಿಂದಾಗಿ ಕೆಲವರು ಗಾಯಗೊಂಡಿದ್ದಾರೆ.

ಅಗ್ನಿಪಥ್ ವಿರುದ್ಧ ಏಕಿಷ್ಟು ಆಕ್ರೋಶ? 

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅನಾವರಣಗೊಳಿಸಿರುವ ಅಗ್ನಿಪಥ್ ಯೋಜನೆಯು ವೇತನ ಮತ್ತು ಪಿಂಚಣಿಗಳ ಮೊತ್ತವನ್ನು ಕಡಿಮೆಗೊಳಿಸುವ ಹಾಗೂ ಶಸ್ತ್ರಾಸ್ತ್ರಗಳ ತುರ್ತು ಖರೀದಿಗೆ ಹಣವನ್ನು ಮುಕ್ತವಾಗಿಸುವ ಉದ್ದೇಶವನ್ನು ಹೊಂದಿದೆ. ಯೋಜನೆಯಡಿ 17.5ರಿಂದ 21 ವರ್ಷಗಳ ವಯೋಮಿತಿಯಲ್ಲಿಯ ಸುಮಾರು 45,000 ಜನರನ್ನು ಆರು ತಿಂಗಳ ತರಬೇತಿ ಸೇರಿದಂತೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. ‌

ಆಯ್ಕೆಗೊಂಡವರನ್ನು ‘ಅಗ್ನಿವೀರರು’ ಎಂದು ಕರೆಯಲಾಗುವುದು. ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಅಗ್ನಿವೀರರಿಗೆ ಮಾಸಿಕ 30,000 ರೂ.ನಿಂದ 40,000 ರೂ.ವೇತನ ಮತ್ತು ಭತ್ಯೆಗಳನ್ನು ನೀಡಲಾಗುವುದು. ವೈದ್ಯಕೀಯ ಮತ್ತು ವಿಮೆ ಸೌಲಭ್ಯಗಳನ್ನೂ ಅವರು ಪಡೆಯಲಿದ್ದಾರೆ. ನಾಲ್ಕು ವರ್ಷಗಳ ಬಳಿಕ ಕೇವಲ ಶೇ.25ರಷ್ಟು ಅಗ್ನಿವೀರರನ್ನು ಉಳಿಸಿಕೊಳ್ಳಲಾಗುವುದು ಮತ್ತು ಅವರು ಸಾಮಾನ್ಯ ಕೇಡರ್ಗೆ ಸೇರ್ಪಡೆಗೊಂಡು ಅಧಿಕಾರಿಯೇತರ ದರ್ಜೆಗಳಲ್ಲಿ ಸಂಪೂರ್ಣ 15 ವರ್ಷಗಳ ಸೇವೆಯನ್ನು ಸಲ್ಲಿಸುತ್ತಾರೆ. 

ಉಳಿದವರು 11ಲ.ರೂ.ನಿಂದ 12 ಲ.ರೂ.ವರೆಗಿನ ಪ್ಯಾಕೇಜ್‌ನೊಂದಿಗೆ ಸಶಸ್ತ್ರ ಪಡೆಗಳಿಂದ ನಿರ್ಗಮಿಸುತ್ತಾರೆ,ಆದರೆ ಯಾವುದೇ ಪಿಂಚಣಿಗೆ ಅವರು ಅರ್ಹರಾಗಿರುವುದಿಲ್ಲ. ನಾಲ್ಕು ವರ್ಷಗಳ ನಂತರ ತಾವೇನು ಮಾಡಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ. ‘ಕೇವಲ ನಾಲ್ಕು ವರ್ಷಗಳ ಸೇವಾವಧಿ ಎಂದರೆ ನಾವು ನಂತರ ಇತರ ಉದ್ಯೋಗಗಳಿಗಾಗಿ ಅಧ್ಯಯನ ಮಾಡಬೇಕು ಮತ್ತು ನಮ್ಮ ವಯಸ್ಸಿನ ಇತರರಿಗಿಂತ ಹಿಂದುಳಿಯುತ್ತೇವೆ ’ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಸೇನೆಯಲ್ಲಿ ಭರ್ತಿಯಾಗಲು ವರ್ಷಗಳಿಂದಲೂ ಸಿದ್ಧತೆಗಳನ್ನು ನಡೆಸುತ್ತಿದ್ದೇವೆ. ಇಷ್ಟೆಲ್ಲ ಮಾಡಿ ಕೇವಲ ನಾಲ್ಕು ವರ್ಷಗಳಿಗಾಗಿ ಸೇನೆಯನ್ನು ಸೇರಬೇಕೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ಸರಕಾರದ ಸಮಜಾಯಿಷಿ

ಅಗ್ನಿಪಥ್ ಯೋಜನೆಯ ಕುರಿತು ಉದ್ವಿಗ್ನತೆ ಹೆಚ್ಚುತ್ತಿದ್ದಂತೆಯೇ ಸರಕಾರವು ನಾಲ್ಕು ವರ್ಷಗಳ ಸೇವಾವಧಿಯ ಬಳಿಕ ತಮ್ಮ ಮುಂದಿನ ದಾರಿಯೇನು ಎಂಬ ಬಗ್ಗೆ ಯುವಜನರಲ್ಲಿಯ ಕಳವಳಗಳನ್ನು ನಿವಾರಿಸಲು ಗುರುವಾರ ಮುಂದಾಗಿದೆ.
 
ನಾಲ್ಕು ವರ್ಷಗಳ ಸೇವೆಯ ಬಳಿಕ ಅಗ್ನಿವೀರರಿಗೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್ನಲ್ಲಿ ನೇಮಕಾತಿಗೆ ಆದ್ಯತೆ ನೀಡುವ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಮಾತುಕತೆಗಳನ್ನು ನಡೆಸಿದೆ ಎಂದು ಸರಕಾರವು ಹೇಳಿದೆ.

21 ಮತ್ತು 24 ವರ್ಷ ವಯೋಮಾನದ ಎಷ್ಟು ಜನರು 12 ಲಕ್ಷ ರೂ.ಗಳ ನಿಧಿಯನ್ನು ಹೊಂದಿರುತ್ತಾರೆ? 24 ವರ್ಷ ವಯಸ್ಸಿನಲ್ಲಿ ಜೀವನದಲ್ಲಿ ನೆಲೆ ಕಂಡುಕೊಳ್ಳಲು ಎಷ್ಟು ಜನರಿಗೆ ಸಾಧ್ಯವಾಗುತ್ತದೆ ಎಂದು ಸರಕಾರವು ಪ್ರಶ್ನಿಸಿದೆ.

ಯುವಜನರ ತಾಳ್ಮೆಯ ‘ಅಗ್ನಿಪರೀಕ್ಷೆ ’ಬೇಡ:ರಾಹುಲ್ ಗಾಂಧಿ

ನಿರುದ್ಯೋಗಿ ಯುವಜನರ ಧ್ವನಿಯನ್ನು ಆಲಿಸುವಂತೆ ಮತ್ತು ಅವರನ್ನು ‘ಅಗ್ನಿಪಥ’ದಲ್ಲಿ ನಡೆಸುವ ಮೂಲಕ ಅವರ ತಾಳ್ಮೆಯ ‘ಅಗ್ನಿಪರೀಕ್ಷೆ’ಯನ್ನು ನಡೆಸದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.

‘ಯಾವುದೇ ದರ್ಜೆಯಿಲ್ಲ,ಪಿಂಚಣಿಯೂ ಇಲ್ಲ. ಎರಡು ವರ್ಷಗಳಿಂದ ಸೇನೆಗೆ ನೇಮಕಾತಿ ನಡೆದಿಲ್ಲ. ನಾಲ್ಕು ವರ್ಷಗಳ ನಂತರ ಸ್ಥಿರವಾದ ಭವಿಷ್ಯವಿಲ್ಲ. ಸರಕಾರವು ಸೇನೆಗೆ ಗೌರವ ತೋರಿಸುತ್ತಿಲ್ಲ’ ಎಂದು ರಾಹುಲ್ ಟ್ವೀಟಿಸಿದ್ದಾರೆ.

ಸೇನಾ ನೇಮಕಾತಿ ಸರಕಾರದ ಪ್ರಯೋಗಶಾಲೆ: ಪ್ರಿಯಾಂಕಾ ಗಾಂಧಿ

 ಅಗ್ನಿಪಥ್ ಯೋಜನೆಯು ಸಶಸ್ತ್ರ ಪಡೆಗಳ ಕಾರ್ಯಾಚರಣೆ ಪರಿಣಾಮಕಾರಿತ್ವವನ್ನು ಕುಗ್ಗಿಸುತ್ತದೆ ಎಂದು ಹೇಳಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,ಸಶಸ್ತ್ರ ಪಡೆಗಳ ಘನತೆ ಮತ್ತು ಪರಾಕ್ರಮದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವಂತಿಲ್ಲ ಎಂದು ಸರಕಾರಕ್ಕೆ ನೆನಪಿಸಿದ್ದಾರೆ. ಸರಕಾರವೇಕೆ ಸೇನೆಗೆ ನೇಮಕಾತಿಯನ್ನು ತನ್ನ ‘ಪ್ರಯೋಗಶಾಲೆ’ಯನ್ನಾಗಿ ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಕನಸುಗಳಿಗೆ ಸಮಯಮಿತಿ ಹಾಕಬೇಡಿ:ಕೇಜ್ರಿವಾಲ್

ಅಗ್ನಿಪಥ್ ಯೋಜನೆಯಡಿ ಸೇವಾವಧಿಯನ್ನು ಕೇವಲ ನಾಲ್ಕು ವರ್ಷಗಳಿಗೆ ಸೀಮಿತಗೊಳಿಸುವ ಮೂಲಕ ನಿರುದ್ಯೋಗಿ ಯುವಜನರ ಕನಸುಗಳಿಗೆ ಸಮಯಮಿತಿಯನ್ನು ಹೇರಬೇಡಿ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಆಗ್ರಹಿಸಿದ್ದಾರೆ. ಯೋಜನೆಯ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿರುವ ಸೇನೆಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸಂಪೂರ್ಣ ಬೆಂಬಲವನ್ನು ಕೇಜ್ರಿವಾಲ್ ವ್ಯಕ್ತಪಡಿಸಿದ್ದಾರೆ.

ಅಗ್ನಿಪಥ್ ಯೋಜನೆಯು ಸರಕಾರದ ನಿರ್ಲಕ್ಷದ ಪರಮಾವಧಿಯಾಗಿದೆ ಮತ್ತು ದೇಶದ ಭವಿಷ್ಯಕ್ಕೆ ಮಾರಕವಾಗಿದೆ

ಅಖಿಲೇಶ ಯಾದವ್,‌ ಎಸ್ಪಿ ಮುಖ್ಯಸ್ಥ

ಸರಕಾರವು ಐದು ವರ್ಷಗಳ ಅವಧಿ ಹೊಂದಿದೆ,ಹೀಗಿರುವಾಗ... ವರುಣ ಗಾಂಧಿ

ಅಗ್ನಿಪಥ್ ಯೋಜನೆಯನ್ನು ಟೀಕಿಸಿರುವ ಬಿಜೆಪಿ ಸಂಸದ ವರುಣ ಗಾಂಧಿಯವರು, ಚುನಾಯಿತ ಸರಕಾರವು ಐದು ವರ್ಷಗಳ ಅಧಿಕಾರಾವಧಿ ಹೊಂದಿರುತ್ತದೆ,ಹೀಗಿರುವಾಗ ದೇಶಸೇವೆ ಮಾಡಲು ಯುವಜನರಿಗೆ ಕೇವಲ ನಾಲ್ಕು ವರ್ಷಗಳನ್ನು ನೀಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಯೋಜನೆಯಡಿ ನೇಮಕಗೊಳ್ಳುವ ಅಗ್ನಿವೀರರಿಗೆ ದೊರೆಯಲಿರುವ ವೇತನಗಳ ವಿವರಗಳನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ವರುಣ,ಈ ಯೋಜನೆಯ ಬಗ್ಗೆ ಅಭಿಪ್ರಾಯಗಳನ್ನು ಆಹ್ವಾನಿಸಿದ್ದಾರೆ. ಯೋಜನೆಯ ಬಗ್ಗೆ ಯುವಜನರ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮತ್ತು ಶಂಕೆಗಳಿವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News