ಪ್ರತಿ ಈದ್‌ ದಿನದಂದು ನನ್ನ ತಾಯಿ ವಿಶೇಷ ಅಡುಗೆ ಮಾಡುತ್ತಿದ್ದರು: ಪತ್ರದಲ್ಲಿ ಉಲ್ಲೇಖಿಸಿದ ಪ್ರಧಾನಿ ಮೋದಿ

Update: 2022-06-18 16:12 GMT
Photo: Twitter/Narendramodi

ಹೊಸದಿಲ್ಲಿ: ತನ್ನ ಎಳವೆಯಲ್ಲಿನ ಸ್ಮರಣೀಯ ಕ್ಷಣಗಳನ್ನು ಬ್ಲಾಗ್ ಲೇಖನದಲ್ಲಿ ಪ್ರಮುಖವಾಗಿ ಬಿಂಬಿಸಿರುವ ಮೋದಿ,ಇತರರ ಸಂತೋಷಗಳಲ್ಲಿ ಸುಖವನ್ನು ಹುಡುಕುವುದರ ಮಹತ್ವವನ್ನು ತನ್ನ ಕುಟುಂಬಕ್ಕೆ ಕಲಿಸಿದ್ದಕ್ಕಾಗಿ ತಾಯಿ ಹೀರಾಬೆನ್‌ರನ್ನು ಪ್ರಶಂಸಿಸಿದ್ದಾರೆ.

ತನ್ನ ತಂದೆಯ ಸ್ನೇಹಿತ ನಿಧನರಾದ ಬಳಿಕ ಅವರ ಪುತ್ರ ಅಬ್ಬಾಸ್ ತನ್ನ ಮನೆಯಲ್ಲಿ ವಾಸವಾಗಿದ್ದನ್ನೂ ಮೋದಿ ನೆನಪಿಸಿಕೊಂಡಿದ್ದಾರೆ.

‘ನನ್ನ ಅಮ್ಮ ಇತರರ ಸಂತೋಷಗಳಲ್ಲಿ ತನ್ನ ಸುಖವನ್ನು ಕಾಣುತ್ತಿದ್ದಳು, ನಮ್ಮ ಮನೆ ಸಣ್ಣದಾಗಿದ್ದಿರಬಹುದು,ಆದರೆ ನನ್ನ ಅಮ್ಮ ವಿಶಾಲ ಹೃದಯಿಯಾಗಿದ್ದರು. ನಮ್ಮ ತಂದೆಯ ಆಪ್ತಸ್ನೇಹಿತರೋರ್ವರು ಸಮೀಪದ ಗ್ರಾಮದಲ್ಲಿ ವಾಸವಾಗಿದ್ದರು. ಅವರ ಅಕಾಲಿಕ ನಿಧನದ ಬಳಿಕ ನನ್ನ ತಂದೆ ಅವರ ಪುತ್ರ ಅಬ್ಬಾಸ್‌ನನ್ನು ನಮ್ಮ ಮನೆಗೆ ಕರೆತಂದಿದ್ದರು. ಆತ ನಮ್ಮಾಂದಿಗೇ ಉಳಿದುಕೊಂಡು ತನ್ನ ವ್ಯಾಸಂಗವನ್ನು ಪೂರ್ಣಗೊಳಿಸಿದ್ದ. ಅಮ್ಮ ನಮ್ಮಷ್ಟೇ ಅಬ್ಬಾಸ್‌ನನ್ನೂ ಪ್ರೀತಿಸುತ್ತಿದ್ದರು. ಪ್ರತಿವರ್ಷ ಈದ್‌ನಂದು ಆತನ ಇಷ್ಟದ ಅಡಿಗೆಯನ್ನು ಮಾಡುತ್ತಿದ್ದರು. ಹಬ್ಬದ ದಿನಗಳಲ್ಲಿ ನೆರೆಕರೆಯ ಮಕ್ಕಳು ಅಮ್ಮನ ವಿಶೇಷ ಸವಿರುಚಿಗಳಿಗಾಗಿ ನಮ್ಮ ಮನೆಗೆ ಬರುವುದು ಸಾಮಾನ್ಯವಾಗಿತ್ತು’ಎಂದು ಮೋದಿ ಬರೆದಿದ್ದಾರೆ.

‘ನಮ್ಮ ಬಡಾವಣೆಗೆ ಸಾಧುಸಂತರು ಆಗಮಿಸಿದಾಗ ಅಮ್ಮ ಅವರನ್ನು ಊಟಕ್ಕಾಗಿ ತನ್ನ ಬಡಕುಟೀರಕ್ಕೆ ಆಹ್ವಾನಿಸುತ್ತಿದ್ದಳು. ಆಕೆ ತನಗಾಗಿ ಏನನ್ನೂ ಕೇಳಿಕೊಳ್ಳುತ್ತಿರಲಿಲ್ಲ, ಮಕ್ಕಳನ್ನು ಆಶೀರ್ವದಿಸುವಂತೆ ಅವರನ್ನು ಕೋರಿಕೊಳ್ಳುತ್ತಿದ್ದಳು. ನನ್ನ ಮಕ್ಕಳು ಇತರರ ಸಂತೋಷಗಳಲ್ಲಿ ಸುಖವನ್ನು ಕಾಣುವಂತೆ ಮತ್ತು ಅವರ ದುಃಖಗಳಿಗೆ ಸಹಾನುಭೂತಿಯನ್ನು ಹೊಂದಿರುವಂತೆ ಅವರನ್ನು ಆಶೀರ್ವದಿಸಿ,ಅವರಲ್ಲಿ ಭಕ್ತಿ ಮತ್ತು ಸೇವಾಭಾವ ಬೆಳೆಯಲಿ ಎಂದು ಅಮ್ಮ ಹೇಳುತ್ತಿದ್ದರು ’ಎಂದೂ ಮೋದಿ ನೆನಪಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News