ಪಾಕಿಸ್ತಾನಕ್ಕೆ ಸೇನಾ ಮಾಹಿತಿ ಸೋರಿಕೆ ಆರೋಪ: ಡಿಆರ್‌ಡಿಒ ಲ್ಯಾಬ್‍ ಇಂಜಿನಿಯರ್ ಮಲ್ಲಿಕಾರ್ಜುನ ರೆಡ್ಡಿ ಬಂಧನ

Update: 2022-06-18 09:51 GMT

ಹೈದರಾಬಾದ್: ಭಾರತದ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ಶಂಕಿತ ಪಾಕಿಸ್ತಾನಿ ಗೂಢಚಾರಿಣಿಗೆ ಮಾಹಿತಿ ನೀಡಿದ ಆರೋಪದ ಮೇಲೆ ಹೈದರಾಬಾದ್‍ನ ಡಿಆರ್‌ಡಿಒ ಲ್ಯಾಬೊರೇಟರಿ- ಡಿಫೆನ್ಸ್ ರಿಸರ್ಚ್ ಎಂಡ್ ಡೆವಲೆಪ್ಮೆಂಟ್ ಲ್ಯಾಬೊರೇಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಂಜಿನಿಯರ್ ಒಬ್ಬರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು indianexpress.com ವರದಿ ಮಾಡಿದೆ.

ಇಂಗ್ಲೆಂಡ್ ಮೂಲದ ರಕ್ಷಣಾ ಜರ್ನಲ್ ಒಂದಕ್ಕೆ ಕೆಲಸ ಮಾಡುತ್ತಿರುವ ಮಹಿಳೆ ಎಂಬಂತೆ ಪಾಕಿಸ್ತಾನಿ ಗೂಢಚಾರಿಣಿ ತನ್ನನ್ನು ಈ ಇಂಜಿನಿಯರ್ ಗೆ ಪರಿಚಯಿಸಿಕೊಂಡಿದ್ದಳೆಂದು ಪೊಲೀಸರು ಹೇಳಿದ್ದಾರೆ.

ಆರೋಪಿ ದುಕ್ಕ ಮಲ್ಲಿಕಾರ್ಜುನ ರೆಡ್ಡಿ (29) ಮೂಲತಃ ವಿಶಾಖಪಟ್ಣಂನವನಾಗಿದ್ದು ಬಾಲಾಪುರ್‍ನಲ್ಲಿರುವ ರಿಸರ್ಚ್ ಸೆಂಟರ್ ಇಮಾರತ್‍ನಲ್ಲಿ ಡಿಆರ್‍ಡಿಎಲ್‍ನ ಅಡ್ವಾನ್ಸ್ ನೇವಲ್ ಸಿಸ್ಟಂ ಪ್ರೋಗ್ರಾಂನ ಗುಣಮಟ್ಟ ನಿರ್ವಹಣೆ ಇಂಜಿನಿಯರ್ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ.

ಆತನನ್ನು ಮೀರ್ಪತೆ ಎಂಬಲ್ಲಿರುವ ಆತನ ನಿವಾಸದಿಂದ ರಚಕೊಂಡ ಪೊಲೀಸ್ ಹಾಗೂ ಬಾಲಾಪುರ್ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಬಂಧಿಸಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 409,  ಅಧಿಕೃತ ಗೌಪ್ಯತೆಗಳ ಕಾಯಿದೆ, 1923 ಅನ್ವಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಎರಡು ಮೊಬೈಲ್ ಫೋನ್‍ಗಳು, ಒಂದು ಸಿಮ್ ಕಾರ್ಡ್ ಮತ್ತು ಒಂದು ಲ್ಯಾಪ್‍ಟಾಪ್ ಅನ್ನು ವಶಕಪಡಿಸಿಕೊಳ್ಳಲಾಗಿದೆ.

ಡಿಆರ್‍ಡಿಎಲ್ ಯೋಜನೆಗಾಗಿ ಖಾಸಗಿ ಕಂಪನಿಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿದ್ದ ನಂತರ ಆತ 2020ರಲ್ಲಿ ಡಿಆರ್‍ಡಿಎಲ್ ಸೇವೆಗೆ ಸೇರ್ಪಡೆಗೊಂಡಿದ್ದ ಹಾಗೂ ನಟಾಶ ರಾವ್ ಆಲಿಯಾಸ್ ಸಿಮ್ರಾನ್ ಚೋಪ್ರಾ ಆಲಿಯಾಸ್ ಒಮಿಶಾ ಅಡ್ಡಿ ಎಂಬಾಕೆಯೊಂದಿಗೆ  ಆತ ಎರಡು ವರ್ಷಗಳಿಂದ ಸಂಪರ್ಕದಲ್ಲಿದ್ದ ಹಾಗೂ ಹನಿ ಟ್ರ್ಯಾಪ್‍ಗೊಳಗಾದ ನಂತರ ಮಹತ್ವದ ಮಾಹಿತಿಯನ್ನು ಆಕೆಗೆ ಸೋರಿಕೆ ಮಾಡುತ್ತಿದ್ದ ಎನ್ನಲಾಗಿದೆ.

ಕ್ಷಿಪಣಿ ಅಭಿವೃದ್ಧಿ ಯೋಜನೆಯ ಫೋಟೋಗಳು ಮತ್ತು ದಾಖಲೆಗಳನ್ನು ಆತ ಫೇಸ್ಬುಕ್ ಸಂವಾದದ ನಡುವೆ ಹಂಚಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆತನಿಗೆ ಮಾರ್ಚ್ 2020ರಲ್ಲಿ ನಟಾಶ ರಾವ್ ಎಂಬಾಕೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು ಹಾಗೂ ಆತ ಅದನ್ನು ಒಪ್ಪಿದ್ದ ಆಕೆ ತಾನು ಒಂದೊಮ್ಮೆ ಬೆಂಗಳೂರಿನಲ್ಲಿ ವಾಸವಾಗಿದ್ದು ನಂತರ ತನ್ನ ತಂದೆ ಭಾರತೀಯ ವಾಯು ಪಡೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹಾಗೂ ಇಂಗ್ಲೆಂಡ್‍ಗೆ ತಾನು ಸ್ಥಳಾಂತರಗೊಂಡಿದ್ದಾಗಿ ತಿಳಿಸಿದ್ದಳು. ಆರೋಪಿ ಆಕೆಯೊಂದಿಗೆ ತನ್ನ ಬ್ಯಾಂಕ್ ಖಾತೆ ವಿವರಗಳನ್ನೂ ಹಂಚಿಕೊಂಡಿದ್ದ ಹಾಗೂ ಡಿಸೆಂಬರ್ 2021ರ ತನಕ ಆಕೆಯೊಂದಿಗೆ  ಸಂಪರ್ಕದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News