ಉಡುಪಿಯ ಭವ್ಯ ನಾಯಕ್‌ಗೆ ಪಿಯು ಸೈನ್ಸ್‌ನಲ್ಲಿ ದ್ವಿತೀಯ ಸ್ಥಾನ
ಉಡುಪಿ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿಯೇ ಟಾಪರ್ ಆಗಿ ಮೂಡಿಬಂದಿದ್ದ ಅಂಬಾಗಿಲು ಪುತ್ತೂರಿನ ಭವ್ಯ ನಾಯಕ್, ಈ ಬಾರಿಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 597 ಅಂಕ ಗಳಿಸುವ ಮೂಲಕ ಇಡೀ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದು ಕೊಂಡಿದ್ದಾರೆ.
ಕಳೆದ ೩೫-೪೦ವರ್ಷಗಳಿಂದ ಮನೆಯಲ್ಲಿಯೇ ಹಪ್ಪಳ ತಯಾರಿಸಿ ಮಾರಾಟ ಮಾಡುತ್ತಿರುವ ನಾರಾಯಣ ನಾಯಕ್ ಹಾಗೂ ಗೃಹಿಣಿ ಉಮಾ ನಾಯಕ್ ದಂಪತಿ ಪುತ್ರಿ ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಭವ್ಯ ನಾಯಕ್, ಈ ಸಾಧನೆ ಮಾಡಿದ್ದಾರೆ. ಇವರ ತಂದೆ ಇಬ್ಬರು ಕೂಡ ಬಿಕಾಂ ಪದವೀಧರರು. ಈಕೆಯ ಸಹೋದರಿ ಪವಿತ್ರಾ ನಾಯಕ್ ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದಾರೆ.
ಉಡುಪಿಯ ವಳಕಾಡು ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿ ರುವ ಭವ್ಯ, ಎಸೆಸೆಲ್ಸಿ ಪರೀಕ್ಷೆಯಲ್ಲಿ ೬೨೨ ಅಂಕ ಗಳಿಸುವ ಮೂಲಕ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಅತ್ಯಂತ ಅಧಿಕ ಅಂಕ ಪಡೆದ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪಿಯುಸಿಯಲ್ಲಿ ಇವರು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಸಂಸ್ಕೃತ ಹಾಗೂ ಕಂಪ್ಯೂಟರ್ ಸೈನ್ಸ್‌ನಲ್ಲಿ ತಲಾ 100 ಮತ್ತು ಇಂಗ್ಲಿಷ್‌ನಲ್ಲಿ 97 ಅಂಕವನ್ನು ಪಡೆದಿದ್ದಾರೆ.
‘ನನ್ನ ಸಾಧನೆಯ ಕ್ರೆಡಿಟ್‌ನ್ನು ತಂದೆತಾಯಿ ಸಲ್ಲಿಸುತ್ತೇನೆ. ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಬಂದಾಗ, ಪಿಯುಸಿಯಲ್ಲಿ ಇದಕ್ಕಿಂತಲೂ ಉತ್ತಮ ಅಂಕ ಪಡೆದು ಸಾಧನೆ ಮಾಡಬೇಕೆಂದು ನಿರ್ಧಾರ ಮಾಡಿದ್ದೆ. ಅದಕ್ಕೆ ನನ್ನ ತಂದೆತಾಯಿ ತುಂಬಾ ಪ್ರೋತ್ಸಾಹ ನೀಡಿದರು. ಅಲ್ಲದೆ ಕಾಲೇಜಿನವರು ಕೂಡ ಆರಂಭದಿಂದಲೂ ತುಂಬಾ ಪ್ರೋತ್ಸಾಹ ನೀಡಿದ್ದಾರೆ ಎಂದು ಭವ್ಯ ನಾಯಕ್ ತಿಳಿಸಿದರು.
ಪ್ರಥಮ ಪಿಯುಸಿಯಲ್ಲಿರುವಾಗ ಕೋವಿಡ್ ಸಂದರ್ಭದಲ್ಲೂ ಉಪನ್ಯಾಸ ಕರು ಆನ್‌ಲೈನ್ ತರಗತಿಯಲ್ಲಿ ಎಲ್ಲ ಪಾಠ ಅರ್ಥ ಆಗುವ ರೀತಿಯಲ್ಲಿ ಸಹಕಾರ ಮಾಡಿದ್ದರು. ಎಲ್ಲ ಸಂಶಯಗಳನ್ನು ಕೂಡ ನಿವಾರಣೆ ಮಾಡುತ್ತಿದ್ದರು. ನಾನು ಓದಲು ತುಂಬಾ ಸ್ಟ್ರೇಸ್ ತೆಗೆದುಕೊಳ್ಳುತ್ತಿರಲಿಲ್ಲ. ಪಾಠ ಒಮ್ಮೆ ನನಗೆ ಸರಿಯಾಗಿ ಅರ್ಥವಾದರೆ ಮುಂದೆ ನೆನಪು ಹೋಗುವುದಿಲ್ಲ. ಅಂದಿನ ಪಾಠ ಅದೇ ದಿನ ಓದುತ್ತಿದ್ದೆ. ಅದರೊಂದಿಗೆ ಪ್ರಾಕ್ಟ್ರಿಸ್ ಕೂಡ ಮಾಡುತ್ತಿದ್ದೆ ಎಂದು ಅವರು ಹೇಳಿದರು.
‘ನಾನು ಸಿಇಟಿಗೆ ಟ್ಯೂಷನ್ ಮಾತ್ರ ಪಡೆದುಕೊಂಡಿದೆ. ಓದಲು ಯಾವುದೇ ಟೈಮ್‌ಟೇಬಲ್ ಫಾಲೋ ಮಾಡುತ್ತಿರಲಿಲ್ಲ. ಮನಸ್ಸು ಬಂದಾಗ ನಿರಂತರ ಓದುತ್ತಿದ್ದೆ. ಯೂಟ್ಯೂಬ್‌ನಲ್ಲಿ ಸಾಮಾನ್ಯ ಜ್ಞಾನ ಹಾಗೂ ವಿಜ್ಞಾನಕ್ಕೆ ಸಂಬಂಧಿ ಸಿದ ವಿಡಿಯೋವನ್ನು ವಿಕ್ಷೀಸುತ್ತಿದ್ದೆ. ಈಗಾಗಲೇ ಸಿಇಟಿ ಪರೀಕ್ಷೆ ಬರೆದಿದ್ದೇನೆ. ಮುಂದೆ ಇಂಜಿನಿಯರ್ ಆಗಬೇಕೆಂಬುದು ನನ್ನ ಆಸೆ. ಅದೇ ರೀತಿ ಜೆಇಇ ಪರೀಕ್ಷೆ ಕೂಡ ಬರೆಯುತ್ತಿದ್ದೇನೆ ಎಂದು ಭವ್ಯ ನಾಯಕ್ ತಿಳಿಸಿದರು.
"ಮಗಳ ಸಾಧನೆ ಬಗ್ಗೆ ತುಂಬಾ ಖುಷಿಯಾಗುತ್ತಿದೆ. ನಮ್ಮ ಪರಿಶ್ರಮಕ್ಕೆ ಫಲ ಕೊಟ್ಟಿದ್ದಾಳೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಭವಿಷ್ಯ ರೂಪಿಸುವುದೇ ನಮ್ಮ ಜೀವನ. ಅದಕ್ಕೆ ಬೇಕಾದ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಉದ್ಯೋಗ ಅತೀ ಅಗತ್ಯ. ಅದಕ್ಕಾಗಿ ಆಕೆ ಮುಂದೆ ಎಲ್ಲಿಯವರೆಗೆ ಕಲಿಯುತ್ತಾಳೆಯೋ ಅಲ್ಲಿಯವರೆಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತೇವೆ".
-ನಾರಾಯಣ ನಾಯಕ್, ಭವ್ಯಳ ತಂದೆ
"ಮಗಳು ಓದಿ ಸಾಧನೆ ಮಾಡಲಿ ಎಂದು ಆಕೆಗೆ ಯಾವುದೇ ಕೆಲಸ ಕೊಡದೆ ಎಲ್ಲ ರೀತಿಯಲ್ಲೂ ಪ್ರೋತ್ಸಾಹ ನೀಡಿದೆ. ಅದಕ್ಕೆ ತಕ್ಕಂತೆ ಓದಿ ಸಾಧನೆ ಮಾಡಿ ತೋರಿಸಿದ್ದಾಳೆ. ಇದು ತುಂಬಾ ಖುಷಿಯಾಗುತ್ತಿದೆ".
-ಉಮಾ ನಾಯಕ್, ಭವ್ಯಾಳ ತಾಯಿ