ಪ್ರದರ್ಶನಕ್ಕೆ ಮೊದಲೇ ಚಿತ್ರದ ಮೂಲ ಬಜೆಟ್ 15 ಕೋಟಿ ರೂ. ಗಳಿಸಿದ ಸಾಯಿಪಲ್ಲವಿ‌ ನಟನೆಯ "ವಿರಾಟಪರ್ವಂ"

Update: 2022-06-19 02:13 GMT
(Photo: PR Handout)

ಹೈದರಾಬಾದ್: ಬಹುಭಾಷಾ ನಟಿ ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ಅಭಿನಯದ 'ವಿರಾಟ ಪರ್ವಂ' ಚಿತ್ರವು ನಿನ್ನೆ ತೆರೆ ಕಂಡಿದ್ದು, ವ್ಯಾಪಕ ಮೆಚ್ಚುಗೆ ಪಡೆಯುತ್ತಿದೆ.

ವಿರಾಟ ಪರ್ವಂ ಸೇರಿದಂತೆ ಸಾಯಿ ಪಲ್ಲವಿ ಅಭಿನಯದ ಚಿತ್ರಗಳನ್ನು ಬಹಿಷ್ಕರಿಸುವಂತೆ ಬಲಪಂಥೀಯರು ಸೋಶಿಯಲ್‌ ಮೀಡಿಯಾ ಅಭಿಯಾನ ನಡೆಸಿದ್ದರೂ ಇದರ ಪರಿಣಾಮಗಳು ಚಿತ್ರದ ಮೇಲೆ ಬಿದ್ದಿಲ್ಲ ಎಂದು ಆರಂಭಿಕ ವರದಿಗಳು ತೋರಿಸಿವೆ.

1990ರ ದಶಕದಲ್ಲಿ ತೆಲಂಗಾಣದಲ್ಲಿ ನಡೆದ ನಕ್ಸಲೀಯ ಚಳುವಳಿಯ ಹಿನ್ನೆಲೆಯಲ್ಲಿ ಚಿತ್ರಕತೆಯನ್ನು ಹೆಣೆಯಲಾಗಿದೆ. 'ಬಾಹುಬಲಿ' ಚಿತ್ರದಲ್ಲಿ ಭಲ್ಲಾಲ್‌ ದೇವ್ ಪಾತ್ರದಲ್ಲಿ ನಟಿಸಿ ಜನಪ್ರಿಯಗೊಂಡಿರುವ ರಾಣಾ ದಗ್ಗುಬಾಟಿ ಚಿತ್ರದಲ್ಲಿ ಹಳ್ಳಿ ಹುಡುಗಿಯನ್ನು ಪ್ರೀತಿಸುವ ನಕ್ಸಲೈಟ್ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಕಾಮ್ರೇಡ್ ರಾವಣನ (ರಾಣಾ ದಗ್ಗುಬಾಟಿ) ಪಾತ್ರವು ನಿಜವಾದ ಪಾತ್ರವಾಗಿದ್ದು, ಸಾಯಿ ಪಾತ್ರವು ಕಾಲ್ಪನಿಕವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಹು ನಿರೀಕ್ಷಿತ ಚಿತ್ರವನ್ನು ವೇಣು ಉಡುಗುಲ ನಿರ್ದೇಶಿಸಿದ್ದು, ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಚಿತ್ರದಲ್ಲಿ ರಾಣಾ ದಗ್ಗುಬಾಟಿ ಮತ್ತು ಸಾಯಿ ಪಲ್ಲವಿ ಮಾತ್ರವಲ್ಲದೆ, ಪ್ರಿಯಾಮಣಿ, ನಂದಿತಾ ದಾಸ್, ನವೀನ್ ಚಂದ್ರ, ಝರೀನಾ ವಹಾಬ್, ಈಶ್ವರಿ ರಾವ್ ಮತ್ತು ಸಾಯಿ ಚಂದ್ ಮೊದಲಾದವರು ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

ವರದಿಗಳ ಪ್ರಕಾರ, ಚಿತ್ರವನ್ನು 15 ಕೋಟಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಚಿತ್ರವು ಬಿಡುಗಡೆಗೆ ಮುನ್ನವೇ ಸುಮಾರು 14 ಕೋಟಿ ವ್ಯವಹಾರವನ್ನು ಮಾಡಿದೆ. ಚಲನಚಿತ್ರವು ತನ್ನ ಆರಂಭಿಕ ದಿನದಂದು ಆನ್‌ಲೈನ್ ಪೋರ್ಟಲ್ ಮೂಲಕ ಮುಂಗಡ ಬುಕಿಂಗ್‌ನಿಂದ ರೂ 2 ರಿಂದ 3 ಕೋಟಿಗಳಿಗಿಂತ ಹೆಚ್ಚು ಗಳಿಸಿದ್ದು, ವಿದೇಶದಲ್ಲೂ ಚೆನ್ನಾಗಿ ಗಳಿಸಿದೆ ಎನ್ನಲಾಗಿದೆ.

ಮುಖ್ಯವಾಗಿ, ಅಮೆರಿಕಾದ 245 ಸ್ಥಳಗಳಲ್ಲಿ ಪ್ರೀಮಿಯರ್ ಶೋ ಮಾಡಿದ್ದು, 60 ಸಾವಿರ ಅಮೆರಿಕನ್‌ ಡಾಲರ್‌ ಗಳಿಸಿಕೊಂಡಿದೆ ಎಂದು ವರದಿಗಳು ಹೇಳಿವೆ. ಶನಿವಾರ ಮತ್ತು ರವಿವಾರ ಚಿತ್ರದ ಕಲೆಕ್ಷನ್‌ ಇನ್ನಷ್ಟು ಹೆಚ್ಚಳಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಲಭ್ಯವಾಗಿರುವ ಮಾಹಿತಿಯ ಪ್ರಕಾರ, 'ವಿರಾಟ್ ಪರ್ವಂ' ನ OTT ಸ್ಟ್ರೀಮಿಂಗ್ ಹಕ್ಕುಗಳನ್ನು ಅಂತರರಾಷ್ಟ್ರೀಯ OTT ಕಂಪೆನಿ ನೆಟ್‌ಫ್ಲಿಕ್ಸ್‌ ದೊಡ್ಡ ಮೊತ್ತಕ್ಕೆ ಖರೀದಿಸಿದೆ, ಚಿತ್ರಮಂದಿರಗಳಲ್ಲಿ ನಾಲ್ಕು ವಾರಗಳ ಕಾಲ ಪ್ರದರ್ಶನಗೊಂಡ ಬಳಿಕ ನಂತರ ಡಿಜಿಟಲ್ ಪರದೆಯಲ್ಲಿ ಚಿತ್ರ ಪ್ರಸಾರವಾಗಲಿದೆ ಎಂದು teluguspot ವರದಿ ಮಾಡಿದೆ.

ಕಾಶ್ಮೀರ ಪಂಡಿತರ ಹತ್ಯೆ ಹಾಗೂ ದನದ ಹೆಸರಿನಲ್ಲಿ ʼಜೈ ಶ್ರೀ ರಾಮ್‌ʼ ಕೂಗಿ ನಡೆಸುವ ಹತ್ಯೆಗಳಿಗೆ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿ ಬಲಪಂಥೀಯ ಹಿಂದುತ್ವವಾದಿಗಳ ಕೆಂಗಣ್ಣಿಗೆ ಸಾಯಿ ಪಲ್ಲವಿ ಗುರಿಯಾಗಿದ್ದರು. ಅವರ ಎಲ್ಲಾ ಸಿನೆಮಾಗಳನ್ನು ಬಹಿಷ್ಕರಿಸುವಂತೆ ಬಲಪಂಥೀಯರು ಅಭಿಯಾನ ಮಾಡಿದ್ದರೆ, ಸದಾ ವಿವಾದದಲ್ಲಿರುವ ಬಿಜೆಪಿ ಶಾಸಕ ರಾಜಾ ಸಿಂಗ್‌ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಸಾಯಿ ಪಲ್ಲವಿ ವಿರುದ್ಧ ದೂರು ದಾಖಲಿಸುವಂತೆ ಕರೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News