ಒಂದೇ ಸಿನೆಮಾಕ್ಕೆ ತೆರಿಗೆ ವಿನಾಯಿತಿ ನೀಡುವುದು ಅಣ್ಣಾವ್ರ ಆಶಯಕ್ಕೆ ತದ್ವಿರುದ್ಧ: ಸಿಎಂಗೆ ನಿರ್ದೇಶಕ ಮಂಸೋರೆ ಪತ್ರ

Update: 2022-06-19 05:18 GMT

ರಕ್ಷಿತ್ ಶೆಟ್ಟಿ ಅಭಿನಯದ ಕನ್ನಡ ಸಿನಿಮಾ ‘777 ಚಾರ್ಲಿ’ಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ವಿನಾಯಿತಿ ನೀಡಿ ಕರ್ನಾಟಕ ಸರಕಾರ ಶನಿವಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಫೇಸ್ ಬುಕ್ ಪೋಸ್ಟ್ ಮೂಲಕ ಬಹಿರಂಗ ಪತ್ರ ಬರೆದಿರುವ ಕನ್ನಡ ಸಿನೆಮಾ ನಿರ್ದೇಶಕ ಮಂಸೋರೆ, ಒಂದು ಸಿನೆಮಾಕ್ಕೆ ಮಾತ್ರ ತೆರಿಗೆ ವಿನಾಯಿತಿ ನೀಡುವ ಸರಕಾರದ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.

ಬಿಜೆಪಿ ಸರಕಾರ ಬರುವ ಮೊದಲು ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ (ಹೊರ ರಾಜ್ಯದಲ್ಲಿ ಚಿತ್ರೀಕರಣವಾಗಿದ್ದರೆ ಅದಕ್ಕೆ ಸೂಕ್ತ ಕಾರಣ ನೀಡಬೇಕಿತ್ತು) ಎಲ್ಲ ಕನ್ನಡ ಸಿನೆಮಾಗಳಿಗೆ 100 ಶೇ. ತೆರಿಗೆ ವಿನಾಯಿತಿ ನೀಡಲಾಗುತ್ತಿತ್ತು. ಆದರೆ ಈ ವಿನಾಯಿತಿಯನ್ನು ಜಿಎಸ್‌ಟಿ ಹೆಸರಲ್ಲಿ ರದ್ದುಗೊಳಿಸಿದ್ದು ಬಿಜೆಪಿ ಸರಕಾರ ಎಂದು ಮಂಸೋರೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿಂದೆ ಯಾವುದೋ ಅನ್ಯ ಭಾಷೆಯ ಸಿನೆಮಾಕ್ಕೂ ತಾವು 100 ಶೇ. ಜಿಎಸ್‌ಟಿ ತೆರಿಗೆ ವಿನಾಯಿತಿ ನೀಡಿದ್ದೀರಿ ಎಂದು ಯಾವುದೋ ಸುದ್ದಿ ಪತ್ರಿಕೆಯಲ್ಲಿ ಓದಿದ್ದೆ. ಇದೀಗ ಶ್ವಾನದ ಕಾಳಜಿಯಿಂದ 'ಒಂದು' ಕನ್ನಡ ಸಿನೆಮಾಗೆ ಮಾತ್ರ 100 ಶೇ. ಜಿಎಸ್‌ಟಿ ತೆರಿಗೆ ವಿನಾಯಿತಿ ನೀಡಲು ಆ ಹಣವನ್ನು ತಾವು ತಮ್ಮ ಜೇಬಿನಿಂದ ನೀಡುತ್ತಿದ್ದೀರಾ ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿರುವ ಮಂಸೋರೆ, ಶ್ವಾನದಷ್ಟೇ ಅಮೂಲ್ಯವಾದ ಜೀವ ಪಡೆದಿರುವ ಮಾನವೀಯ, ಮನುಷ್ಯತ್ವದ ಅಂಶ ಎತ್ತಿ ಹಿಡಿಯುವ ನೂರಾರು ಕನ್ನಡ ಸಿನೆಮಾಗಳು ಪ್ರತೀ ವರ್ಷ ತಯಾರಾಗುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವಾಗುತ್ತಿರುವ ಅನೇಕ ಕನ್ನಡ ಚಿತ್ರಗಳು ಕನ್ನಡ ನೆಲದಲ್ಲಿ ತಯಾರಾಗುತ್ತಿವೆ. ಆದರೆ ಅದ್ಯಾವುದಕ್ಕೂ ನೀಡದ 100 ಶೇ. ತೆರಿಗೆ ವಿನಾಯಿತಿ ಕೇವಲ ಒಂದು ಸಿನೆಮಾಕ್ಕೆ ಮಾತ್ರ ನೀಡುವುದು ನಮ್ಮೆಲ್ಲರ ಮೆಚ್ಚಿನ ಅಣ್ಣಾವ್ರು ಡಾ.ರಾಜ್ ಕುಮಾರ್ ಅವರ ಆಶಯಕ್ಕೆ ತದ್ವಿರುದ್ಧವಾದದ್ದು ಎಂಬುದನ್ನು ತಮಗೆ ಮನವರಿಕೆ ಮಾಡಲು ಇಚ್ಛಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.


ಮಂಸೋರೆ ಅವರ ಫೇಸ್ ಬುಕ್ ಪೋಸ್ಟ್

ಕರ್ನಾಟಕದ ಮುಖ್ಯಮಂತ್ರಿಗಳಾದ  ಬಸವರಾಜ ಬೊಮ್ಮಾಯಿ ಅವರಿಗೆ ನಮಸ್ಕಾರ.

ನನ್ ಹೆಸರು
ಮಂಸೋರೆ
ಕನ್ನಡ ಸಿನೆಮಾ ನಿರ್ದೇಶಕ.

ತಾವು ಕನ್ನಡ ಸಿನೆಮಾ '777 ಚಾರ್ಲಿ'ಗೆ ನಿರ್ಮಾಪಕರ ಕೋರಿಕೆಯ ಮೇರೆಗೆ, ಸದರಿ ಸಿನೆಮಾಗೆ 100 ಶೇ. ಜಿಎಸ್‌ಟಿ ಇಂದ ವಿನಾಯಿತಿ ಕೊಟ್ಟಿರುವುದು ತುಂಬಾ ಸಂತೋಷದ ವಿಷಯ. ಕನ್ನಡ ಸಿನೆಮಾಗಳ ಏಳಿಗೆಗೆ ಇದು ಅತ್ಯವಶ್ಯಕ. ಜೊತೆಗೆ ಈ ಹಿಂದೆ ಯಾವುದೋ ಅನ್ಯ ಭಾಷೆಯ ಸಿನೆಮಾಗು ತಾವು 100 ಶೇ. ಜಿಎಸ್‌ಟಿ ತೆರಿಗೆ ವಿನಾಯಿತಿ ಕೊಟ್ಟಿದ್ದೀರಿ ಎಂದು ಯಾವುದೋ ಸುದ್ದಿ ಪತ್ರಿಕೆಯಲ್ಲಿ ಓದಿದ ನೆನಪು. ಈಗ ಈ ಪತ್ರವನ್ನು ತಮಗೆ ಬರೆಯುತ್ತಿರುವುದರ ಕಾರಣವನ್ನು ಮೊದಲಿಗೆ ತಮಗೆ ವಿವರಿಸುತ್ತೇನೆ.

ತಾವು ಮುಖ್ಯಮಂತ್ರಿ ಆಗುವ ಮೊದಲು, ತಮ್ಮ ಬಿಜೆಪಿ ಸರಕಾರ ಬರುವ ಮೊದಲು ಕನ್ನಡದ ಸಿನೆಮಾಗಳಿಗೆ ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ (ಹೊರ ರಾಜ್ಯದಲ್ಲಿ ಚಿತ್ರೀಕರಣವಾಗುವುದಾದರೆ ಅದಕ್ಕೆ ಸೂಕ್ತ ಕಾರಣ ಕೊಡಬೇಕಿತ್ತು) ಎಲ್ಲ ಕನ್ನಡ ಸಿನೆಮಾಗಳಿಗೆ 100 ಶೇ. ತೆರಿಗೆ ವಿನಾಯಿತಿ ಇತ್ತು ಎಂಬ ವಿಷಯ ತಮಗೆ ಗೊತ್ತಿತ್ತೇ?

ಕನ್ನಡದ ಸಿನೆಮಾಗಳಿಗೆ ಇದ್ದ ಈ ವಿನಾಯಿತಿಯನ್ನು ಕನ್ನಡಿಗರ ಕೈಯಿಂದ (ಕನ್ನಡದ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದು ಕಿತ್ತುಕೊಂಡಿದ್ದು) ನಿಮ್ಮದೇ ಆದ ಬಿಜೆಪಿ ಸರಕಾರ ಎಂಬುದು ನಿಮಗೆ ತಿಳಿದಿದೆಯೇ? ಅದು ಜಿಎಸ್‌ಟಿ ಎಂಬ ಹೆಮ್ಮಾರಿಯ ಹೆಸರಲ್ಲಿ ಎಂಬುದು ತಮಗೆ ತಿಳಿದಿದೆಯೇ?

ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಕನ್ನಡ ಸಿನೆಮಾಗಳ ಮೇಲೆ ಮನೋರಂಜನಾ ತೆರಿಗೆ ವಿಧಿಸಲು ಹೋದಾಗ, ನಮ್ಮೆಲ್ಲರ ಪಾಲಿನ ಅಣ್ಣಾವ್ರು, ಡಾ.ರಾಜ್ ಕುಮಾರ್ ಕನ್ನಡ ಚಿತ್ರರಂಗವನ್ನೇ ತ್ಯಜಿಸಿ ತಮ್ಮ ಹಳ್ಳಿಗೆ ಹೋಗುವ ನಿರ್ಧಾರ ಮಾಡುತ್ತಾರೆ, ಆಗ ಮುಖ್ಯಮಂತ್ರಿಯವರೇ ಅಣ್ಣಾವ್ರ ಮನೆಗೆ ಹೋಗಿ ಅವರ ನಿರ್ಧಾರವನ್ನು ಹಿಂದೆಗೆದುಕೊಳ್ಳುವಂತೆ ಅವರ ಮನವೊಲಿಸಿ ಅವರು ತಮ್ಮ ನಿರ್ಧಾರವನ್ನು ಹಿಂದೆಗೆದುಕೊಳ್ಳುವಂತೆ ಒಪ್ಪಿಸುತ್ತಾರೆ ಹಾಗೂ ತೆರಿಗೆ ವಿಧಿಸುವ ತಮ್ಮ ನಿಲುವನ್ನು ಹಿಂದೆಗೆದುಕೊಳ್ಳುತ್ತಾರೆ. (ಹಿರಿಯ ಪತ್ರಕರ್ತರಾದ ಬಿ.ವಿ.ವೈಕುಂಠರಾಜು ರವರ ಸಿನೆಮಾತು ಪುಸ್ತಕದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ) ಅದೇ ಮುಂದೆ ಕನ್ನಡ ಹಾಗೂ ಕನ್ನಡ ನೆಲದಲ್ಲಿ ತಯಾರಾಗುವ ಎಲ್ಲಾ ಸಿನೆಮಾಗಳಿಗೂ 100 ಶೇ. ತೆರಿಗೆ ವಿನಾಯಿತಿ ನೀಡಲಾಗುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಂತಹ ಮಹಾನುಭಾವರ ನಿರ್ಧಾರದಿಂದ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದ ಸೌಲಭ್ಯವನ್ನು ಕಿತ್ತುಕೊಂಡಿದ್ದು ಜಿಎಸ್‌ಟಿ ನೆಪದಲ್ಲಿ ನಿಮ್ಮದೇ ಬಿಜೆಪಿ ಸರಕಾರ ಎಂಬುದು ತಮಗೆ ತಿಳಿದಿದೆಯೇ?

ಈಗ ವಾಪಸ್ಸು ನಿಮ್ಮ ಆಡಳಿತದ ಸರಕಾರದ ವಿಷಯಕ್ಕೆ ಬರುವುದಾದರೆ, ಶ್ವಾನದ ಕಾಳಜಿಯಿಂದ ತಾವು ಆ 'ಒಂದು' ಕನ್ನಡ ಸಿನೆಮಾಗೆ ಮಾತ್ರ 100 ಶೇ. ಜಿಎಸ್‌ಟಿ ತೆರಿಗೆ ವಿನಾಯಿತಿ ನೀಡಲು ಆ ಹಣವನ್ನು ತಾವು ತಮ್ಮ ಜೇಬಿನಿಂದ ನೀಡುತ್ತಿದ್ದೀರಾ ಎಂದು ತಿಳಿಯಲು ಡಾ.ಬಿ.ಆರ್.ಅಂಬೇಡ್ಕರ್ ಸರ್ ಬರೆದಿರುವ, ಸಾಂವಿಧಾನಿಕ ಹಕ್ಕನ್ನು ಪಡೆದಿರುವ ಕರ್ನಾಟಕದ ಪ್ರಜೆಯಾಗಿ ಕೇಳುತ್ತಿದ್ದೇನೆ, ದಯವಿಟ್ಟು ತಿಳಿಸಿ.

ಶ್ವಾನದಷ್ಟೇ ಅಮೂಲ್ಯವಾದ ಜೀವ ಪಡೆದಿರುವ ಮಾನವೀಯ, ಮನುಷ್ಯತ್ವದ ಅಂಶ ಎತ್ತಿ ಹಿಡಿಯುವ ನೂರಾರು ಕನ್ನಡ ಸಿನೆಮಾಗಳು ಪ್ರತೀ ವರ್ಷ ತಯಾರಾಗುತ್ತಿವೆ. ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವಾಗುತ್ತಿರುವ ಅನೇಕ ಕನ್ನಡ ಚಿತ್ರಗಳು ಕನ್ನಡ ನೆಲದಲ್ಲಿ ತಯಾರಾಗುತ್ತಿವೆ. ಉದಾ: ಪೆಡ್ರೋ, ಕೋಳಿತಾಲ್, ಡೊಳ್ಳು, ದಾರಿ ಯಾವುದಯ್ಯ ವೈಕುಂಟಕ್ಕೆ, ಅಮೃತಮತಿ, ನೀಲಿ ಹಕ್ಕಿ ಇನ್ನೂ ಬಹಳಷ್ಟು ಸಿನೆಮಾ ಇದೆ. ಜೊತೆಗೆ ಅಂತಾರ್ರಾಷ್ಟ್ರೀಯ ಚಿತ್ರೋತ್ಸವಕ್ಕೆ ಹೋಗದಿದ್ದರೂ ಸಹ, ಅನೇಕ ಕನ್ನಡ ಸಿನೆಮಾಗಳು ಅತ್ತ್ಯುತ್ತಮವಾದ ಮಾನವೀಯ ಗುಣವುಳ್ಳ ಸಿನೆಮಾಗಳು ಕಳೆದ ನಾಲ್ಲೈದು ವರ್ಷಗಳಲ್ಲೇ ಸಾಕಷ್ಟಿವೆ, ಅದು ಯಾವುದಕ್ಕೂ ನೀಡದ 100 ಶೇ. ತೆರಿಗೆ ವಿನಾಯಿತಿ ಕೇವಲ ಒಂದು ಸಿನೆಮಾಗೆ ನೀಡುವುದು ನಮ್ಮೆಲ್ಲರ ಮೆಚ್ಚಿನ ಅಣ್ಣಾವ್ರ ಆಶಯಕ್ಕೆ ತದ್ವಿರುದ್ಧವಾದದ್ದು ಎಂದು ತಮಗೆ ಮನವರಿಕೆ ಮಾಡಲು ಇಚ್ಛಿಸುತ್ತೇನೆ.

ಚಾರ್ಲಿ ಸಿನೆಮಾದ ನಿರ್ಮಾಪಕರೂ ಸೇರಿದಂತೆ ಕನ್ನಡದ ಯಾರೊಬ್ಬ ನಿರ್ಮಾಪಕರು ಅಣ್ಣಾವ್ರ ಆಶಯ ಮೀರಿ, ಕನ್ನಡ ಚಿತ್ರರಂಗವನ್ನು ಹೊರಗಿಟ್ಟು, ಸ್ವಾರ್ಥಿಗಳಂತೆ ತಮ್ಮ ಸಿನೆಮಾಗೆ ಮಾತ್ರ 100 ಶೇ. ತೆರಿಗೆ ವಿನಾಯಿತಿ ಕೊಡಬೇಕೆಂದು ಹಂಬಲಿಸಲಾರರು, ತಮ್ಮಲ್ಲಿ ಬೇಡಿಕೊಳ್ಳಲಾರರು ಎಂದು ನನ್ನ ಬಲವಾದ ನಂಬಿಕೆ. ಇದು ಕನ್ನಡ ಚಿತ್ರರಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ನಿರ್ಮಾಪಕರ, ತಂತ್ರಜ್ಞ, ಶ್ರಮಿಕ ಹಾಗೂ ಕಲಾವಿದರ ಅನ್ನದ ಪ್ರಶ್ನೆಯಾಗಿರುವುದರಿಂದ ಹಾಗೂ ನಮ್ಮ ನೆಚ್ಚಿನ ಅಣ್ಣಾವ್ರು ಡಾ.ರಾಜ್ ಕುಮಾರ್ ಅವರ ಆಶಯವೂ ಆಗಿರುವ ಕಾರಣದಿಂದಾಗಿ ಕನ್ನಡದ, ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ ಪ್ರತೀ ಸಿನೆಮಾಗೂ ಈ ಹಿಂದೆ ಇದ್ದಂತೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುತ್ತೀರಾ ಎಂಬ ನಂಬಿಕೆಯಿಂದ ಈ ಪತ್ರ ಬರೆಯುತ್ತಿದ್ದೇನೆ.

-ಸಿನೆಮಾ ನಿರ್ದೇಶಕ ಮಂಸೋರೆ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News