ಪ್ರೊ.ಕೆ.ರಾಮದಾಸ್ ನೆನಪಿನಲ್ಲಿ...

Update: 2022-06-19 04:37 GMT

ಪ್ರಗತಿಪರ ಚಿಂತಕರೂ, ಮಾನವ ಮಂಟಪವನ್ನು ಹುಟ್ಟು ಹಾಕುವ ಮೂಲಕ ನೂರಾರು ಅಂತರ್ಜಾತಿ ಮತ್ತು ಅಂತರ್‌ಧರ್ಮೀಯ ಮದುವೆಗಳನ್ನು ಅತ್ಯಂತ ಸರಳವಾಗಿ ಮಾಡಿಸುವ ಮೂಲಕ ಸರಳ ಮತ್ತು ಜಾತಿ ಮತ್ತು ಧರ್ಮ ನಿರಪೇಕ್ಷ ಮದುವೆಗಳಿಗೆ ನಾಂದಿ ಹಾಡಿದವರು ದಿ.ಕೆ.ರಾಮದಾಸ್. ಅವರ 15ನೇ ವರ್ಷದ ಸ್ಮರಣಾರ್ಥ ‘ಪ್ರೇಮ ವಿವಾಹಗಳಿಂದ ಸಾಮಾಜಿಕ ಬದಲಾವಣೆ: ಸಾಧಕ-ಬಾಧಕಗಳು’ ಎಂಬ ವಿಷಯದ ಕುರಿತು ವಿಶೇಷವಾದ ಸಂವಾದವನ್ನು ಇಂದು ಮೈಸೂರಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಪೌರೋಹಿತ್ಯವನ್ನು ದಿಕ್ಕರಿಸಿ ಅಂತರ್‌ಜಾತಿ ಮತ್ತು ಅಂತರ್‌ಧರ್ಮೀಯ ಮದುವೆಗಳನ್ನು ಅತ್ಯಂತ ಸರಳವಾಗಿ ಮಾಡಿಕೊಂಡು ಸುಖ ಸಂಸಾರ ನಡೆಸುತ್ತಿರುವ 20ಕ್ಕೂ ಹೆಚ್ಚು ದಂಪತಿಗಳು ಭಾಗವಸಹಿಸುತ್ತಿರುವುದು ಮತ್ತು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳಲಿರುವುದು ಕಾರ್ಯಕ್ರಮದ ವಿಶೇಷವಾಗಿದೆ.

ಸಂವಾದದ ಜೊತೆಗೆ ಪುಸ್ತಕ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನವನ್ನು ಹಮ್ಮಿಕೊಳ್ಳಲಾಗಿದೆ. ಕೆ.ರಾಮದಾಸ್‌ರವರು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ಆಗಸ್ಟ್ 15, 1975ರಂದು ನಿರ್ಮಲಾ ಅವರನ್ನು ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಧಿಕ್ಕರಿಸಿ ಅತ್ಯಂತ ಸರಳವಾಗಿ ಮದುವೆಯಾಗಿದ್ದರು. ಮದುವೆಗೆ ಆಹ್ವಾನ ಪತ್ರಿಕೆಯನ್ನೂ ಮಾಡಿಸಿರಲಿಲ್ಲ. ಕೆ.ರಾಮದಾಸ್‌ರವರ ಚಿಂತನೆಗಳು ಇಂದಿಗೂ ಮತ್ತು ಮುಂದಿಗೂ ಯುವಜನಾಂಗಕ್ಕೆ ಮಾದರಿಯಾಗಿ ಹಾಗೂ ಆದರ್ಶಪ್ರಾಯವಾಗಿವೆ. ಕೆ.ರಾವದಾಸ್‌ರವರು ಉಗ್ರನರಸಿಂಹೇಗೌಡ, ಕಾಳೇಗೌಡ ನಾಗವಾರ, ಧನಂಜಯ ಎಲಿಯೂರು, ಸ್ವಾಮಿ ಆನಂದ್ ಮುಂತಾದ ಪ್ರಗತಿಪರ ಚಿಂತಕರೊಂದಿಗೆ ಸೇರಿ ಮೈಸೂರಿನಲ್ಲಿ ಹುಟ್ಟು ಹಾಕಿದ ಮಾನವ ಮಂಟಪ ಹಲವು ಸರಳ ಹಾಗೂ ಅಂತರ್ಜಾತಿ ಮತ್ತು ಅಂತರ್‌ಧರ್ಮೀಯ ಮದುವೆಗಳಿಗೆ ಸಾಕ್ಷಿಯಾಗಿದೆ. ಪ್ರೊ.ಕೆ.ರಾಮದಾಸ್‌ರವರು ಮೈಸೂರಿನ ಬುದ್ಧಿಜೀವಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು. ಮಾರ್ಚ್ 26, 1941ರಲ್ಲಿ ಜನಿಸಿದ ಅವರು ಪಿ.ಲಂಕೇಶ್, ಪ್ರೊ.ನಂಜುಂಡಸ್ವಾಮಿ ಮತ್ತು ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಹಲವು ಪ್ರಗತಿಪರರೊಂದಿಗೆ ಒಡನಾಟವನ್ನು ಇಟ್ಟುಕೊಂಡಿದ್ದರು. ಮೈಸೂರಿನ ಯುವರಾಜ ಮತ್ತು ಮಹಾರಾಜ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಅವರು ರಾಮ ಮನೋಹರ್ ಲೋಹಿಯಾ ಮತ್ತು ಗಾಂಧೀಜಿಯವರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಎಲ್ಲಿ ಏನೇ ಅನ್ಯಾಯ, ಅಕ್ರಮಗಳು ನಡೆದರೂ ಅದನ್ನು ಪ್ರತಿಭಟಿಸುವ ಆತ್ಮಸ್ಥೈರ್ಯವನ್ನು ಅವರು ಹೊಂದಿದ್ದರು. 70ರ ದಶಕದಲ್ಲಿಯೇ ದಲಿತ ಮತ್ತು ಮುಸ್ಲಿಮರ ನಡುವೆ ಅಂತರ್‌ಧರ್ಮೀಯ ಮದುವೆಯನ್ನು ಮಾಡಿಸುವ ಮೂಲಕ ನವ ಸಮಾಜದಲ್ಲಿ ಕ್ರಾಂತಿಗೆ ಕಾರಣರಾದರು.

ಗೋಕಾಕ್ ಚಳವಳಿ, ಬೂಸಾ ಚಳವಳಿ, ನವ ನಿರ್ಮಾಣ ಚಳವಳಿ, ಜಾತಿ ವಿನಾಶ ಸಮ್ಮೇಳನಗಳು ಸೇರಿದಂತೆ ಹಲವು ಚಳವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ತಮ್ಮ ಮಾನವ ಮಂಟಪದಲ್ಲಿ ಬಹಳಷ್ಟು ಅಂತರ್ಜಾತಿ ವಿವಾಹಗಳನ್ನು ಮಾಡಿಸಿದ್ದರು. ಅಂದು ರಾಮ್‌ದಾಸ್‌ರವರು ಹುಟ್ಟು ಹಾಕಿದ ಮಾನವ ಮಂಟಪ ಇಂದಿಗೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಅಂತರ್ಜಾತಿಯ ಮದುವೆಗಳು ನಡೆಯುತ್ತಿದ್ದರೂ ಒಂದೆಡೆ ಮರ್ಯಾದೆ ಹತ್ಯೆಗಳೆಂಬ ಅಮಾನವೀಯ ಘಟನೆಗಳು ಮರುಕಳಿಸುತ್ತಿವೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದೊರೈ, ಪೆರಿಯಾರ್, ಬಸವಣ್ಣ ಮುಂತಾದವ ದಾರ್ಶನಿಕರು ಅಂತರ್ಜಾತಿಯ ವಿವಾಹಗಳನ್ನು ಬೆಂಬಲಿಸಿದರು. ಅಂತರ್ಜಾತಿಯ ವಿವಾಹಗಳು ಜಾತೀಯತೆಯನ್ನು ಹೋಗಲಾಡಿಸುವ ದಿಕ್ಕಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರೆ, ಅಂತರ್‌ಧರ್ಮೀಯ ವಿವಾಹಗಳು ದೇಶದ ಏಕತೆ ಮತ್ತು ಸಮಗ್ರತೆಗೆ ಇಂಬು ನೀಡುತ್ತವೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕಾರ್ಯಕ್ರಮವನ್ನು ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್‌ರವರು ಉದ್ಘಾಟಿಸಲಿದ್ದು ಸಾಮಾಜಿಕ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕರು ಮತ್ತು ಅಂಕಣಕಾರರಾದ ಸನತ್ ಕುಮಾರ್ ಬೆಳಗಲಿಯವರು ಪುಸ್ತಕ ಬಿಡುಗಡೆ ಮಾಡಲಿದ್ದು ಸಾಹಿತಿ ಮತ್ತು ಚಿಂತಕಿ ಡಾ. ವಸುಂಧರಾ ಭೂಪತಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಚಿಂತಕ ರುದ್ರಪ್ಪ ಹನಗವಾಡಿ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.

Writer - ಡಾ.ಅಮ್ಮಸಂದ್ರ ಸುರೇಶ್

contributor

Editor - ಡಾ.ಅಮ್ಮಸಂದ್ರ ಸುರೇಶ್

contributor

Similar News