ಪ್ರಧಾನಿ ಮೋದಿ ತನ್ನ ಬ್ಲಾಗ್ ಪೋಸ್ಟ್‌ ನಲ್ಲಿ ಉಲ್ಲೇಖಿಸಿದ್ದ ಸ್ನೇಹಿತ ʼಅಬ್ಬಾಸ್‌ʼ ಪತ್ತೆ‌

Update: 2022-06-19 13:35 GMT
Photo: Indiatoday

ಹೊಸದಿಲ್ಲಿ: ತನ್ನ ತಾಯಿ ಹೀರಾಬೆನ್‌ ಮೋದಿಯವರ ನೂರನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತನ್ನ ಬ್ಲಾಗ್‌ ಪೋಸ್ಟ್‌ ನಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ, ತನ್ನ ತಂದೆಯ ಸ್ನೇಹಿತನ ಮಗ ಅಬ್ಬಾಸ್‌ ಎಂಬಾತ ತಮ್ಮ ಮನೆಯಲ್ಲೇ ಉಳಿದುಕೊಂಡಿದ್ದ ಮತ್ತು ಈದ್‌ ದಿನ ತನ್ನ ತಾಯಿ ವಿಶೇಷ ಅಡುಗೆ ತಯಾರಿಸುತ್ತಿದ್ದರು ಎಂಬ ಉಲ್ಲೇಖ ಹಲವರ ಗಮನಸೆಳೆದಿತ್ತು. ಸಾಮಾಜಿಕ ತಾಣದಲ್ಲೂ ಅಬ್ಬಾಸ್‌ ಯಾರು? ಎಂಬ ಕುರಿತು ಹಲವರು ಪ್ರಶ್ನೆಗಳನ್ನೆತ್ತಿದ್ದರು, ವ್ಯಂಗ್ಯವಾಡಿದ್ದರು.

ಇದೀಗ ಎಲ್ಲರ ಪ್ರಶ್ನೆಗಳಿಗೆ ಉತ್ತರವೆಂಬಂತೆ indiatoday.in ಅಬ್ಬಾಸ್‌ ರನ್ನು ಪತ್ತೆಹಚ್ಚಿದೆ. ಅಬ್ಬಾಸ್‌ ರವರು ಸದ್ಯ ಆಸ್ಟ್ರೇಲಿಯಾದಲ್ಲಿದ್ದು, ಅವರ ಫೋಟೊವನ್ನು ನರೇಂದ್ರ ಮೋದಿಯವರ ಸಹೋದರ ದೃಢಪಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಅಬ್ಬಾಸ್ ಭಾಯ್ ಗುಜರಾತ್ ಸರ್ಕಾರದ ಕ್ಲಾಸ್ 2 ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಕೆಲವು ತಿಂಗಳ ಹಿಂದೆ ಸೇವೆಯಿಂದ ನಿವೃತ್ತರಾಗಿದ್ದರು. ಆಹಾರ ಮತ್ತು ಸರಬರಾಜು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿ ಉಲ್ಲೇಖಿಸಿದೆ.

ಅಬ್ಬಾಸ್‌ ಭಾಯ್‌ಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಖೇರಾಲು ತಹಶೀಲ್‌ನಲ್ಲಿ ವಾಸಿಸುತ್ತಿದ್ದರೆ, ಕಿರಿಯ ಮಗ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.  ಅಬ್ಬಾಸ್‌ ರವರು ಪ್ರಸ್ತುತ ಸಿಡ್ನಿಯಲ್ಲಿ ತನ್ನ ಕಿರಿಯ ಮಗನೊಂದಿಗೆ ವಾಸವಾಗಿದ್ದಾರೆ. 

"ಅಬ್ಬಾಸ್‌ ನನ್ನ ತಂದೆಯ ಸ್ನೇಹಿತನ ಮಗನಾಗಿದ್ದ. ತಂದೆಯ ಸ್ನೇಹಿತ ಮರಣ ಹೊಂದಿದಾಗ ಅಬ್ಬಾಸ್‌ ರನ್ನು ನಮ್ಮ ಮನೆಗೆ ತಂದೆ ಕರೆತಂದಿದ್ದರು. ಅವರನ್ನು ಯಾವತ್ತೂ ನಮ್ಮ ತಾಯಿ ತಾರತಮ್ಯದಿಂದ ನೋಡಿಕೊಂಡಿಲ್ಲ. ನಮ್ಮೆಲ್ಲರನ್ನು ಪ್ರೀತಿಸುವಂತೆಯೇ ಆತನನ್ನೂ ಪ್ರೀತಿಸುತ್ತಿದ್ದರು. ಈದ್‌ ದಿನದಂದು ವಿಶೇಷ ಅಡುಗೆ ತಯಾರಿಸುತ್ತಿದ್ದರು. ಅಬ್ಬಾಸ್‌ ತಮ್ಮ ವಿದ್ಯಾಭ್ಯಾಸವನ್ನು ನಮ್ಮ ಮನೆಯಲ್ಲಿಯೇ ಪೂರೈಸಿದ್ದರು" ಎಂದು ಪ್ರಧಾನಿ ಮೋದಿ ತಮ್ಮ ಬ್ಲಾಗ್‌ ಪೋಸ್ಟ್‌ ನಲ್ಲಿ ಉಲ್ಲೇಖಿಸಿದ್ದರು.

ಗುಜರಾತ್‌ ನಲ್ಲಿರುವ ಅಬ್ಬಾಸ್‌ ರ ಮನೆ

ಕೃಪೆ: indiatoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News