ʼಮಗುವಿನ ಅತ್ಯಾಚಾರ ಮಾಡಿದ ಬ್ರಾಹ್ಮಣ ಪಂಡಿತʼ ಎಂದು ಪ್ರಶ್ನೆಪತ್ರಿಕೆಯಲ್ಲಿ ಉಲ್ಲೇಖ: ಪ್ರಕಾಶಕನಿಂದ ಕ್ಷಮೆಯಾಚನೆ

Update: 2022-06-19 14:10 GMT

ಹೊಸದಿಲ್ಲಿ: ಸಾಮಾನ್ಯ ಕಾನೂನು ಆಡಳಿತ ಪರೀಕ್ಷೆ (CLAT) ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಯೊಂದು ಸದ್ಯ ವಿವಾದಕ್ಕೀಡಾಗಿದೆ. ಕಾನೂನು ವಿದ್ಯಾರ್ಥಿಗಳು ದೇಶಾದ್ಯಂತ ಸರ್ಕಾರಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳಿಗೆ (NLUs) ಪ್ರವೇಶಕ್ಕಾಗಿ ನಡೆಯುವ ಈ ಪರೀಕ್ಷೆಯ ಅಣಕು ಪತ್ರಿಕೆಯಲ್ಲಿʼಬ್ರಾಹ್ಮಣ ವ್ಯಕ್ತಿಯೊಬ್ಬ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವʼ ಕುರಿತು ಕಾಲ್ಪನಿಕ ಪ್ರಶ್ನೆಯನ್ನು ಕೇಳಿದ್ದಕ್ಕಾಗಿ ಓಸ್ವಾಲ್ ಬುಕ್ಸ್ ವಿವಾದಕ್ಕೆ ಸಿಲುಕಿದೆ.

ಇದು ವಿವಾದಕ್ಕೀಡಾಗುತ್ತಿದ್ದಂತೆ ಆಗ್ರಾ ಮೂಲದ ಪ್ರಕಾಶಕರು ಬೇಷರತ್ ಕ್ಷಮೆಯಾಚಿಸಿದ್ದಾರೆ ಮತ್ತು ಪುಸ್ತಕದ ಎಲ್ಲಾ ಆವೃತ್ತಿಗಳನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ ಎಂದು Theprint.in ವರದಿ ಮಾಡಿದೆ. ಪ್ರಕಟಿತ ಪ್ರತಿಗಳನ್ನು ಹಿಂಪಡೆಯುವ ಪ್ರಕ್ರಿಯೆಯು ಇನ್ನೂ ನಡೆಯುತ್ತಿದೆ ಎಂದು ಓಸ್ವಾಲ್ ಬುಕ್ಸ್‌ನ ಉದ್ಯೋಗಿಯೊಬ್ಬರು ThePrint ಗೆ ತಿಳಿಸಿದ್ದಾರೆ.

ವಕೀಲ ಶಶಾಂಕ್ ಶೇಖರ್ ಝಾ, ಪ್ರಕಾಶಕರು ಮತ್ತು ಪ್ರಶ್ನೆ ಪತ್ರಿಕೆ ತಯಾರಕರ  ವಿರುದ್ಧ "ಕಾನೂನು ಕ್ರಮವನ್ನು ಪ್ರಾರಂಭಿಸಬೇಕು" ಎಂದು ಆಗ್ರಾ ಪೊಲೀಸರನ್ನು ಒತ್ತಾಯಿಸಿದ್ದಾರೆ. ಈ ವಿಷಯದ ಬಗ್ಗೆ ಓಸ್ವಾಲ್ ಬುಕ್ಸ್ ಪ್ರತಿಕ್ರಿಯೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಶೇಖರ್‌ ಝಾ, “ಕ್ಷಮೆ ಕೇಳುವುದು ಸಾಕಾಗುವುದಿಲ್ಲ. ಇಂತಹ ಪ್ರಶ್ನೆ ರಚಿಸಿದವರ ವಿರುದ್ಧ ಎಫ್‌ಐಆರ್‌ ಹಾಕಬೇಕು. ಇದು ಬ್ರಾಹ್ಮಣ-ಪಂಡಿತ ಸಮಾಜಕ್ಕೆ ನೋವುಂಟು ಮಾಡಿದೆ. ಆರೋಪಿಗಳನ್ನು ಬಂಧಿಸಬೇಕು.” ಎಂದು ಆಗ್ರಹಿಸಿದ್ದಾರೆ. 

“ಅನಿತಾ 8 ವರ್ಷದ ಮಗು. ಒಂದು ದಿನ ಅವಳು ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಒಬ್ಬ ಬ್ರಾಹ್ಮಣ ಪಂಡಿತ ಅವಳನ್ನು ಅಪಹರಿಸಿ, ದೇವಾಲಯಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದನು. 2 ದಿನಗಳ ನಂತರ ಅವಳು ಪತ್ತೆಯಾದಾಗ, ತೀವ್ರವಾಗಿ ಗಾಯಗೊಂಡಿದ್ದಳು ಮತ್ತು ಪ್ರಜ್ಞಾಹೀನಳಾಗಿದ್ದಳು. ಅನಿತಾಳಿಗಾಗಿ ಪರಿಹಾರವನ್ನು ಯಾರು ಪಡೆಯಬಹುದು, ”ಎಂದು ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆ ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News