×
Ad

ಧರ್ಮಗಳ ಕುರಿತು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಬೇಡಿ: ಸಂಸದರಿಗೆ ಲೋಕಸಭಾ ಸ್ಪೀಕರ್ ಮನವಿ‌

Update: 2022-06-19 19:10 IST

ಹೊಸದಿಲ್ಲಿ: "ಸಂವಿಧಾನದ ಮುಂದೆ ಎಲ್ಲ ಧರ್ಮಗಳೂ ಸಮಾನ" ಎಂದು ಒತ್ತಿ ಹೇಳಿದ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು, "ಸಂಸದರು ಯಾವುದೇ ಧರ್ಮದ ಬಗ್ಗೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಬೇಕು ಮತ್ತು ಸಂಸತ್ತಿನ ಘನತೆ ಹಾಗೂ ಸಜ್ಜನಿಕೆಯನ್ನು ಯಾವಾಗಲೂ ಕಾಪಾಡಿಕೊಳ್ಳಬೇಕು" ಎಂದು ಹೇಳಿದ್ದಾರೆ.

ರವಿವಾರ ಮೂರು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದ ಬಿರ್ಲಾ, ತಮ್ಮ ಪ್ರಯಾಣವನ್ನು ಇಲ್ಲಿಯವರೆಗೆ ಯಶಸ್ವಿಗೊಳಿಸಲು ಸಹಕರಿಸಿದ್ದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿಗೆ ಧನ್ಯವಾದ ಅರ್ಪಿಸಿದರು ಮತ್ತು ಈ ಅವಧಿಯಲ್ಲಿ ಸದನದ ಸರಾಸರಿ ಉತ್ಪಾದಕತೆಯು 100 ಪ್ರತಿಶತಕ್ಕಿಂತ ಹೆಚ್ಚಿರುವುದು ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು.

17ನೇ ಲೋಕಸಭೆಯಲ್ಲಿ ಇದುವರೆಗೆ ಎಂಟು ಅಧಿವೇಶನಗಳಲ್ಲಿ ಸದನವು ಸುಮಾರು 1,000 ಗಂಟೆಗಳ ಕಾಲ ಕಾರ್ಯನಿರ್ವಹಿಸಿದೆ ಎಂದು ಅವರು ಹೇಳಿದರು.

ಚರ್ಚೆಗಳನ್ನು "ಪ್ರಜಾಪ್ರಭುತ್ವದ ಆಭರಣ" ಎಂದ ಓಂ ಬಿರ್ಲಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಸಂಸದರು ಸಂಸತ್ತಿನಲ್ಲಿ ಮಾತನಾಡುವಾಗ ಅನಗತ್ಯ ಆಕ್ರಮಣ ಮತ್ತು ಕೂಗಾಟವನ್ನು ತಪ್ಪಿಸಬೇಕು ಎಂದು ಹೇಳಿದರು.

"ಚರ್ಚೆ ಸಂಸದೀಯ ಪ್ರಜಾಪ್ರಭುತ್ವದ ಬಹುಮುಖ್ಯ ಭಾಗವಾಗಿದೆ. ವ್ಯಂಗ್ಯ, ಪರಸ್ಪರ ಕೆಸರೆರಚಾಟ ಸಹ ಸ್ವೀಕಾರಾರ್ಹ. ಆದರೆ ಅನಗತ್ಯ ಆಕ್ರಮಣ, ಕೂಗು ಮತ್ತು ಪರಸ್ಪರ ಅಡ್ಡಿಪಡಿಸುವುದನ್ನು ಸಂಸತ್ತಿನಲ್ಲಿ ಸಂಸದರು ತಪ್ಪಿಸಬೇಕು" ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದರು. ರಾಜಕೀಯ ನಾಯಕರ ಆಧಾರರಹಿತ ಆರೋಪ ಮತ್ತು ಪ್ರತ್ಯಾರೋಪಗಳಿಗೆ ಸಂಸತ್ತನ್ನು ವೇದಿಕೆಯಾಗಿ ಬಳಸಿಕೊಳ್ಳಬಾರದು ಎಂದರು.

ಧರ್ಮಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ನಡುವೆ ಬಿಸಿಯಾದ ಚರ್ಚೆಗಳ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, "ಸಂಸತ್ತಿನ ಸದಸ್ಯರು ಯಾವುದೇ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದನ್ನು ತಡೆಯಬೇಕು. ಏಕೆಂದರೆ ಸಂವಿಧಾನದ ಮುಂದೆ ಎಲ್ಲಾ ಧರ್ಮಗಳು ಸಮಾನವಾಗಿವೆ. ಧಾರ್ಮಿಕ ವಿಷಯಗಳ ಬಗ್ಗೆ ಮಾತನಾಡುವಾಗ ಸಂಸದರು ತಮ್ಮ ಹೇಳಿಕೆಗಳು ಯಾವುದೇ ಇತರ ಧರ್ಮದ ಭಾವನೆಗಳಿಗೆ ಧಕ್ಕೆ ತರುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವೆಲ್ಲರೂ ಈ ಆಚರಣೆ ಮತ್ತು ಸಂಪ್ರದಾಯವನ್ನು ಶ್ರದ್ಧೆಯಿಂದ ಅನುಸರಿಸಬೇಕು. ನಮ್ಮ ಸಂವಿಧಾನವು ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಆಚರಿಸುವ ಹಕ್ಕನ್ನು ನೀಡಿದೆ" ಎಂದು ಬಿರ್ಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News