ಕಮಲ್‌ ಕಮ್‌ಬ್ಯಾಕ್:‌ ತಮಿಳುನಾಡಿನಲ್ಲಿ ಬಾಹುಬಲಿ, ಕೆಜಿಎಫ್‌-2 ದಾಖಲೆಯನ್ನು ಮುರಿದ ವಿಕ್ರಮ್

Update: 2022-06-19 14:42 GMT
Photo: Twitter

ಚೆನ್ನೈ: ಕಮಲ್‌ ಹಾಸನ್‌ ಮುಖ್ಯಭೂಮಿಕೆಯಲ್ಲಿರುವ, ಲೋಕೇಶ್ ಕನಗರಾಜ್‌ ನಿರ್ದೇಶನದ ʼವಿಕ್ರಮ್‌ʼ ಚಿತ್ರ ಯಶಸ್ಸಿನ ದಾಪುಗಾಲಿಟ್ಟುಕೊಂಡು ಸಾಗುತ್ತಿದೆ. ಈಗಾಗಲೇ ಈ ಚಿತ್ರವು ವಿಶ್ವದಾದ್ಯಂತ 300 ಕೋಟಿಗೂ ಅಧಿಕ ರೂಪಾಯಿಗಳನ್ನು ಬಾಚಿದೆ.

ತಮಿಳುನಾಡಿನಲ್ಲಿ ಎರಡು ವಾರಗಳಲ್ಲಿ ಬಾಹುಬಲಿ-2 ರ ದಾಖಲೆಗಳನ್ನು ಮುರಿದಿರುವ ವಿಕ್ರಮ್‌ 150 ಕೋಟಿ ರುಪಾಯಿಗಳನ್ನು ಗಳಿಸಿದೆ. 2017 ರಲ್ಲಿ ಬಿಡುಗಡೆಯಾದ ಬಾಹುಬಲಿ 2 ತಮಿಳುನಾಡಿನಲ್ಲಿ 146 ಕೋಟಿ ಗಳಿಸಿತ್ತು.

ಚಿತ್ರದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಕಮಲ್ ಹಾಸನ್, ನಿರ್ದೇಶಕ ಲೋಕೇಶ್ ಕನಗರಾಜ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸಹನಟ ವಿಜಯ್ ಸೇತುಪತಿ ಸಕ್ಸಸ್ ಮೀಟ್‌ ನಡೆಸಿದ್ದಾರೆ. 

ಮೂಲಗಳ ಪ್ರಕಾರ ಇದುವರೆಗೂ 360 ಕೋಟಿ ರುಪಾಯಿಗಳನ್ನು ಸಿನೆಮಾ ಗಳಿಸಿದ್ದು, ಚಿತ್ರದ ಬಜೆಟ್‌ 100-120 ಕೋಟಿ ಇದೆ ಎನ್ನಲಾಗಿದೆ. ಈ ವರ್ಷ ತಮಿಳುನಾಡಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ವಿಕ್ರಮ್ ಈಗಾಗಲೇ ಹೊರ ಹೊಮ್ಮಿದ್ದು, ವಿಜಯ್‌ ನಟನೆಯ ಬೀಸ್ಟ್‌  ₹ 119 ಕೋಟಿ ಸಂಗ್ರಹ ಮಾಡಿತ್ತು. ಕೆಜಿಎಫ್: ಚಾಪ್ಟರ್ 2 ತಮಿಳುನಾಡಿನಲ್ಲಿ ₹100 ಕೋಟಿಗೂ ಹೆಚ್ಚು ಗಳಿಸಿದೆ.

ಈ ಚಿತ್ರಕ್ಕೆ ಸ್ವತಃ ಕಮಲ್‌ ಹಾಸನ್‌ ಬಂಡವಾಳ ಹೂಡಿದ್ದು, ಸದ್ಯ ಲಾಭವನ್ನು ಎಣಿಸುತ್ತಿದ್ದಾರೆ. ಅವರ ಇತ್ತೀಚಿನ ಕೆಲವು ಚಿತ್ರಗಳು ನಿರೀಕ್ಷಿತ ಗೆಲುವು ಸಾಧಿಸಿದ್ದರಿಂದ ವಿಕ್ರಮ್‌ ಗೆಲುವು ಅವರಿಗೆ ಅನಿವಾರ್ಯವಾಗಿತ್ತು. ಸಂದರ್ಶನವೊಂದರಲ್ಲಿ ಅವರೇ ಹೇಳಿದಂತೆ ವಿಕ್ರಮ್‌ ಚಿತ್ರದಿಂದ ಗಳಿಸಿದ ಲಾಭದಿಂದ ತಮ್ಮ ಸಾಲಗಳನ್ನು ತೀರಿಸಲಿದ್ದಾರೆ. 

ಲೋಕೇಶ್ ಕನಗರಾಜ್ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ಕಮಲ್ ಹಾಸನ್, ಫಹದ್ ಫಾಸಿಲ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿರುವುದು ಸಾಕಷ್ಟು ನಿರೀಕ್ಷೆಗಳನ್ನು ಉಂಟು ಮಾಡಿತ್ತು. ಅದರಲ್ಲೂ, ಸೂಪರ್‌ ಸ್ಟಾರ್ ಸೂರ್ಯ ಕೂಡಾ ಒಂದು ಪಾತ್ರದಲ್ಲಿ ಅಭಿನಯಿಸಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿತ್ತು. ರೋಲೆಕ್ಸ್ ಪಾತ್ರದಲ್ಲಿ ನಟಿಸಿರುವ ಸೂರ್ಯ ಕಡೆಯ ಐದು ನಿಮಿಷಗಳಲ್ಲಿ ತೆರೆ ಮೇಲೆ ರಾರಾಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News