ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ಜೀವನಾಧರಿತ ʻಶಾಭಾಶ್‌ ಮಿತ್ತುʼ ಟ್ರೈಲರ್‌ ಬಿಡುಗಡೆ

Update: 2022-06-20 08:38 GMT

 ಹೊಸದಿಲ್ಲಿ: ಭಾರತದ ವನಿತಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಜೀವನಾಧರಿತ, ತಾಪ್ಸೀ ಪನ್ನು ಅಭಿನಯದ ಬಹುನಿರೀಕ್ಷಿತ ಚಿತ್ರ `ಶಾಭಾಷ್ ಮಿತ್ತು' ಇದರ ಟ್ರೈಲರ್ ಬಿಡುಗಡೆಗೊಂಡಿದೆ. ಶ್ರೀಜಿತ್ ಮುಖರ್ಜಿ ನಿರ್ದೇಶನದ ಈ ಚಿತ್ರದ ಟ್ರೈಲರ್ ಮಿಥಾಲಿ (ತಾಪ್ಸಿ) ಬೌಂಡರಿ ಮತ್ತು ಸಿಕ್ಸ್‌ಗಳನ್ನು ಬಾರಿಸುವುದರೊಂದಿಗೆ ಹಾಗೂ ಹಿನ್ನೆಲೆಯಲ್ಲಿ ಜನರ ಹರ್ಷೋದ್ಗಾರದೊಂದಿಗೆ ಆರಂಭಗೊಳ್ಳುತ್ತದೆ.

ನಂತರ ಆಕೆಯ ಬಾಲ್ಯದ ಚಿತ್ರಣವನ್ನು ಟ್ರೈಲರ್‌ ನೀಡುತ್ತದೆ. ತಮಿಳು ಹುಡುಗಿಯೊಬ್ಬಳು ತನ್ನ ಸೋದರ ಬ್ಯಾಟಿಂಗ್‌ ನಡೆಸುತ್ತಿರುವಾಗ ಬಾಲ್‌ ಕ್ಯಾಚ್‌ ಮಾಡುವ ದೃಶ್ಯವಿದೆ. ಅಂತಿಮವಾಗಿ ಕೋಚ್‌ ವಿಜಯ್‌ ರಾಝ್‌ ಆಕೆಯ ಪ್ರತಿಭೆ ಗುರುತಿಸಿ ಆಕೆಗೆ ಕ್ರಿಕೆಟ್‌ ಆಡಲು ಅನುಮತಿಸುವಂತೆ ಆಕೆಯ ಕುಟುಂಬವನ್ನು ಕೋರುತ್ತಾರೆ. ಆಕೆಯ ಕುಟುಂಬ ಒಪ್ಪುತ್ತದೆ. ಆಕೆಯ ತರಬೇತಿ ನಂತರ ಆರಂಭಗೊಳ್ಳುತ್ತದೆ ಆದರೆ ಆಕೆ ಉನ್ನತ ಮಟ್ಟಕ್ಕೇರಿದ ಹಾದಿ ಸುಗಮವಾಗಿರಲಿಲ್ಲ.

ಆಕೆಯ ಜತೆಗಿದ್ದ ಇತರ ಕ್ರಿಕೆಟ್‌ ತರಬೇತಿ ಪಡೆಯುತ್ತಿರುವವರು ಆಕೆಯನ್ನು ಅಣಕಿಸಿದರೂ ಎಲ್ಲವನ್ನೂ ಎದುರಿಸಿ ಸಫಲರಾಗುತ್ತಾರೆ. ವನಿತಾ ಕ್ರಿಕೆಟ್‌ ತನ್ನದೇ ಆದ ಸ್ವಂತ ಅಸ್ತಿತ್ವ ಉಳಿಸಿಕೊಳ್ಳಲು ಮಿಥಾಲಿ ರಾಜ್ ಪಡುವ ಶ್ರಮದ ಚಿತ್ರಣವೂ ಈ ಚಲನಚಿತ್ರದಲ್ಲಿದೆ. ತಮ್ಮದೇ ಹೆಸರುಗಳನ್ನು ಬರೆದ ಜರ್ಸಿ ಬೇಕೆಂಬ ಬೇಡಿಕೆಯನ್ನು ಆಕೆ ಕ್ರಿಕೆಟ್‌ ಮಂಡಳಿ ಮುಂದಿಡುವ ಘಟನೆಯೂ ಚಿತ್ರದಲ್ಲಿದೆ.

ತಾಪ್ಸೀ ಪನ್ನು ಈ ಟ್ರೈಲರ್‌ ಅನ್ನು ತಮ್ಮ  ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಶೇರ್‌ ಮಾಡಿದ್ದಾರೆ ಹಾಗೂ ʻದಿ ಜಂಟಲ್‌ಮ್ಯಾನ್ಸ್‌ ಗೇಮ್‌ʼ ಅನ್ನು ಮರುವ್ಯಾಖ್ಯಾನಿಸಿದ ಮಹಿಳೆ, ಎಂದು ಆಕೆಯನ್ನು ಬಣ್ಣಿಸಿದ್ದಾರೆ. ʻʻಆಕೆ ತನ್ನ ಕಥೆಯನ್ನು ಸೃಷ್ಟಿಸಿದ್ದಾರೆ ಹಾಗೂ ಅದನ್ನು ನಿಮಗಾಗಿ ತರುತ್ತಿರುವುದು ನನ್ನ ಸೌಭಾಗ್ಯ,ʼʼಎಂದು ತಾಪ್ಸೀ ಬರೆದಿದ್ದಾರೆ.

ಮಿಥಾಲಿ ರಾಜ್‌ ಕೂಡ ಟ್ರೈಲರ್‌ ಅನ್ನು ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ʻʻಒಂದು ಆಟ, ಒಂದು ದೇಶ, ಒಂದು ಗುರಿ... ನನ್ನ ಕನಸು!ತಂಡಕ್ಕೆ ಆಭಾರಿ ನನ್ನ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯಿದೆ!ʼʼ ಎಂದು ಅವರು ಬರೆದಿದ್ದಾರೆ.

ಟ್ರೈಲರ್‌ ಬಿಡುಗಡೆಯಾದ ಐದು ಗಂಟೆಗಳಲ್ಲೇ ಯೂಟ್ಯೂಬ್‌ ನಲ್ಲಿ 1.4ಮಿಲಿಯನ್‌ ವೀಕ್ಷಣೆಗಳನ್ನು ಈ ಟ್ರೈಲರ್‌ ಗಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News