ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಡಾ.ವಿವೇಕ ರೈ ಆಯ್ಕೆ

Update: 2022-06-20 13:35 GMT

ಉಡುಪಿ : ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡ ಪ್ರತಿಷ್ಠಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಜಾಗತಿಕ ಜಾನಪದ ವಿದ್ವಾಂಸ, ಕನ್ನಡ ಮತ್ತು ತುಳು ಸಂಶೋಧಕ, ನಿವೃತ್ತ ಕುಲಪತಿ ಡಾ.ಬಿ.ಎ. ವಿವೇಕ ರೈ ಆಯ್ಕೆಯಾಗಿದ್ದಾರೆ.

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡಲಾಗುವ ಟಿ. ವಿಮಲಾ ವಿ.ಪೈ  ಪ್ರಾಯೋಜಿತ ೨೦೨೨ನೇ ಸಾಲಿನ ಪ್ರಶಸ್ತಿಗೆ  ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಆಯ್ಕೆ ಸಮಿತಿಯು ಪ್ರಾಚೀನ ಕನ್ನಡ ಕಾವ್ಯಗಳ ಇಂಗ್ಲಿಷ್ ಅನುವಾದಕ ಹಾಗೂ ಅಂಕಣಕಾರರೂ ಆಗಿರುವ ಡಾ. ವಿವೇಕ ರೈ ಅವರನ್ನು ಅಯ್ಕೆ ಮಾಡಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪ್ರಶಸ್ತಿಯನ್ನು ಖ್ಯಾತ ಉದ್ಯಮಿಯಾಗಿರುವ ಟಿ.ಮೋಹನ್‌ದಾಸ್ ಪೈ ಅವರು ತಮ್ಮ ತಾಯಿಯ ಹೆಸರಿನಲ್ಲಿ ಸ್ಥಾಪಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಪುಣಚ ಗ್ರಾಮದಲ್ಲಿ ೧೯೪೬ರಲ್ಲಿ ಜನಿಸಿದ ಡಾ. ಬಿ.ಎ ವಿವೇಕ ರೈ ಅವರು ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಮೈಸೂರು ವಿವಿಯಿಂದ ಜಾನಪದ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದ ಮೊದಲಿಗರು ಡಾ.ರೈ ಅವರು. ಮಂಗಳೂರು ಸ್ನಾತಕೋತ್ತರ ಕೇಂದ್ರ ಮತ್ತು ಮಂಗಳೂರು ವಿವಿಯ ಕನ್ನಡ ವಿಭಾಗದಲ್ಲಿ ಸುಮಾರು ೩೪ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, ಅದರಲ್ಲಿ ೧೮ ವರ್ಷಗಳ ಕಾಲ ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿ ಮತ್ತು ಕರ್ನಾಟಕ ರಾಜ್ಯಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸಂಸ್ಥೆಗಳನ್ನು ಮುನ್ನಡೆಸಿದ್ದಾರೆ.

ಜರ್ಮನಿಯ ವ್ಯೆತ್ಸ್‌ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಯುರೋಪಿಯನ್ ವಿದ್ಯಾರ್ಥಿಗಳಿಗೆ  ಕನ್ನಡ ಭಾಷೆ ಮತ್ತು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೋಧಿಸಿದವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ. ಕನ್ನಡದಲ್ಲಿ ಇವರು ೨೪ ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ. ೧೮ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಕರಾಗಿ ಹೊರತಂದಿದ್ದಾರೆ. ತುಳುವಿನಲ್ಲಿ  ಇವರ ೨ ಕೃತಿಗಳು ಪ್ರಕಟವಾಗಿವೆ. ಇಂಗ್ಲೀಷ್ ನಲ್ಲಿ ಇತರರೊಂದಿಗೆ ೬ ಕೃತಿಗಳನ್ನು ರಚಿಸಿದ್ದಾರೆ. ಅವರ ತುಳು ಕೃತಿಗಳು: ’ತುಳು ಬರವು ಸರವು’, ವಚನ: ಶರಣರ (೨೫೦೦ ಕನ್ನಡ ವಚನಗಳ ತುಳು ಅನುವಾದ) ಮುಖ್ಯವಾದವು.

ಪ್ರಶಸ್ತಿ-ಪುರಸ್ಕಾರ: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ (೧೯೯೬), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೯), ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೨೦೦೨), ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ (೨೦೦೩), ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ (೨೦೧೩), ಮಂಗಳೂರು ವಿವಿ ಗೌರವ ಡಾಕ್ಟರೇಟ್(೨೦೧೭).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News