×
Ad

ಗರ್ಭಿಣಿಯರು ‘ತಾತ್ಕಾಲಿಕ ಅನರ್ಹ’ರು ಎಂದು ಸುತ್ತೋಲೆ ಹೊರಡಿಸಿದ ಇಂಡಿಯನ್ ಬ್ಯಾಂಕ್‌ಗೆ ಡಿಸಿಡಬ್ಲ್ಯು ನೋಟಿಸ್

Update: 2022-06-20 21:47 IST
Photo : business-standard.com

ಹೊಸದಿಲ್ಲಿ, ಜೂ. 20:  ಮೂರು ಅಥವಾ ಹೆಚ್ಚು ತಿಂಗಳ ಗರ್ಭಿಣಿಯರು ಸೇವೆಗೆ ಸೇರುವುದನ್ನು ನಿರ್ಬಂಧಿಸುವ ನೂತನ ನೇಮಕಾತಿ ಮಾರ್ಗಸೂಚಿಯನ್ನು ಹಿಂಪಡೆಯುಂತೆ ಸೂಚಿಸಿ ದಿಲ್ಲಿ ಮಹಿಳಾ ಆಯೋಗ ಇಂಡಿಯನ್ ಬ್ಯಾಂಕ್‌ಗೆ ನೋಟಿಸು ಜಾರಿ ಮಾಡಿದೆ. 

ಇಂಡಿಯನ್ ಬ್ಯಾಂಕ್‌ನ ಈ ಕ್ರಮ ತಾರತಮ್ಯದಿಂದ ಕೂಡಿದೆ ಹಾಗೂ ಕಾನೂನು ಬಾಹಿರವಾಗಿದೆ. ಸಾಮಾಜಿಕ ಭದ್ರತಾ ಸಂಹಿತೆ-2020ರ ಅಡಿಯಲ್ಲಿ ನೀಡಲಾಗುವ ಹೆರಿಗೆ ಸೌಲಭ್ಯಗಳಿಗೆ ವಿರುದ್ಧವಾಗಿದೆ ಎಂದು ದಿಲ್ಲಿ ಮಹಿಳಾ ಆಯೋಗ ತನ್ನ ನೋಟಿಸಿನಲ್ಲಿ ಹೇಳಿದೆ. ಅಲ್ಲದೆ, ಸಂವಿಧಾನದ ಅಡಿಯಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳ ಖಾತರಿಗೆ ವಿರುದ್ಧವಾಗಿ ಈ ಮಾರ್ಗಸೂಚಿ ಲಿಂಗಾಧರಿತವಾಗಿ ತಾರತಮ್ಯ ಎಸಗುತ್ತದೆ ಎಂದು ಆಯೋಗ ಹೇಳಿದೆ. 

ಇಂಡಿಯನ್ ಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿದ ಉದ್ಯೋಗ ಪೂರ್ವ ದೈಹಿಕ ಸದೃಢತೆಯ ಮಾರ್ಗಸೂಚಿ ಹಾಗೂ ಮಾನದಂಡ ಪ್ರಕಾರ ಅಭ್ಯರ್ಥಿ ಆಯ್ಕೆಯಾದ ಹುದ್ದೆಗೆ ನಿಯೋಜಿತರಾಗಲು ಹೆರಿಗೆಯಾದ ಆರು ವಾರಗಳ ಬಳಿಕ ಮರು ಪರೀಕ್ಷೆ ನಡೆಸಬೇಕು.  

‘‘ಪರೀಕ್ಷೆಯ ಫಲಿತಾಂಶದಲ್ಲಿ ಮಹಿಳಾ ಅಭ್ಯರ್ಥಿ 12 ವಾರಗಳು ಅಥವಾ ಅದಕ್ಕಿಂತ ಹೆಚ್ಚು ವಾರಗಳ ಗರ್ಭಿಣಿ ಎಂದು ಕಂಡು ಬಂದರೆ ಹೆರಿಗೆ ಆಗುವವರೆಗೆ ಅವರನ್ನು ‘ತಾತ್ಕಾಲಿಕ ಅನರ್ಹ’ ಎಂದು ಘೋಷಿಸಬೇಕು. ಹೆರಿಗೆಯಾದ ದಿನಾಂಕದ 6 ವಾರಗಳ ಬಳಿಕ ಸದೃಢ ಪ್ರಮಾಣಪತ್ರಕ್ಕಾಗಿ ಅಭ್ಯರ್ಥಿ ಮರು ಪರೀಕ್ಷೆಗೆ ಒಳಗಾಗಬೇಕು. ಅಲ್ಲದೆ, ನೋಂದಣಿಯಾದ ವೈದ್ಯಕೀಯ ಅಧಿಕಾರಿಯಿಂದ ಸದೃಢತೆಯ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕು’’ ಎಂದು ಅದು ಹೇಳಿತ್ತು. ಈ ವಿಷಯದ ಕುರಿತಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಲಿಖತ ಪತ್ರ ಕಳುಹಿಸಲಾಗಿದೆ ಎಂದು ದಿಲ್ಲಿ ಮಹಿಳಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News