×
Ad

ಯುವಕರು ಸೇನೆ ಸೇರಲು ತಮ್ಮ ಮೂಳೆ ಸವೆಸುತ್ತಾರೆ, ಶಾಂತಿಯುತ ಪ್ರತಿಭಟನೆ ಎಲ್ಲರ ಹಕ್ಕು: ಬಿಜೆಪಿ ಸಂಸದ ವರುಣ್‌ ಗಾಂಧಿ

Update: 2022-06-20 21:57 IST

ಹೊಸದಿಲ್ಲಿ: ಅಗ್ನಿಪಥ್ ಪ್ರತಿಭಟನಾಕಾರರನ್ನು ಜಿಹಾದಿಗಳು ಎಂದು ಕರೆದಿದ್ದಕ್ಕಾಗಿ ಬಿಜೆಪಿ ಸಂಸದ ವರುಣ್ ಗಾಂಧಿ ಸೋಮವಾರ ತಮ್ಮ ಪಕ್ಷದ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʼದೇಶದ ಯುವಕರು ಸೇನೆಯಲ್ಲಿ ಸೇವೆ ಸಲ್ಲಿಸಲು ತಮ್ಮ ಮೂಳೆಗಳನ್ನು ಸವೆಸುತ್ತಾರೆ, ಮತ್ತು ಶಾಂತಿಯುತ ಪ್ರತಿಭಟನೆಯು ಪ್ರತಿಯೊಬ್ಬರ ಹಕ್ಕುʼ ಎಂದು ಹೇಳಿದ್ದಾರೆ.

ಟ್ವಿಟರ್‌ನಲ್ಲಿ, ಬಿಹಾರದ ಬಿಜೆಪಿ ಶಾಸಕ ಹರೀಶ್‌ಭೂಷಣ್ ಠಾಕೂರ್ ಬಚೌಲ್ ಅವರ ವೀಡಿಯೊವನ್ನು ಹಂಚಿಕೊಂಡಿರುವ ಫಿಲಿಬಿತ್‌ ಸಂಸದ ವರುಣ್‌ ಗಾಂಧಿ, “ರೈತರು ತಮ್ಮ ಹಕ್ಕುಗಳಿಗಾಗಿ ರಸ್ತೆಗಿಳಿದಾಗ ಅವರು ‘ಖಲಿಸ್ತಾನಿ’ಗಳು, ಈಗ ಯುವಕರು ಸೇನೆಗೆ ನೇಮಕಾತಿಗಾಗಿ ರಸ್ತೆಗೆ ಇಳಿದಿದ್ದಾರೆ, ಅವರು ‘ಜಿಹಾದಿಗಳು’, ಯುವಕರು ಭಾರತಮಾತೆಯ ಸೇವಾ ಮನೋಭಾವದಿಂದ ದಧೀಚಿಯಂತೆ ತಮ್ಮ ಮೂಳೆಗಳನ್ನು ಸವೆಸುತ್ತಾರೆ. ನಂತರ ಸೈನ್ಯದಲ್ಲಿ ಕೆಲಸ ಪಡೆಯುತ್ತಾರೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಯು ಪ್ರತಿಯೊಬ್ಬರ ಹಕ್ಕು" ಎಂದು ಬರೆದಿದ್ದಾರೆ.  

ವರುಣ್‌ ಗಾಂಧಿ ಹಂಚಿಕೊಂಡಿರುವ ಬಿಜೆಪಿ ಶಾಸಕನ ವಿಡಿಯೋದಲ್ಲಿ, ಶಾಸಕ ಪ್ರತಿಭಟನಾಕಾರರನ್ನು ಜಿಹಾದಿಗಳು ಮತ್ತು ಖಲಿಸ್ತಾನಿಗಳು ಎಂದು ಕರೆಯುವುದನ್ನು ಕಾಣಬಹುದು.

"ಅಗ್ನಿಪಥ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಬಿಹಾರದಲ್ಲಿ ನಡೆದ ಹಿಂಸಾಚಾರ ಮತ್ತು ಬೆಂಕಿಯ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸುವ ಜಿಹಾದಿಗಳು ಇದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿ (ಯು) ಪಕ್ಷದ 'ದೊಡ್ಡ ನಾಯಕರ' ಮಾತುಗಳಿಂದ ಅವರು ಹುಮ್ಮಸ್ಸು ಪಡೆದಿದ್ದಾರೆ” ಎಂದು ಶಾಸಕ ಠಾಕೂರ್ ಬಚೌಲ್ ಹೇಳಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News