ವಿಧಾನ ಪರಿಷತ್ ಚುನಾವಣೆ: ನವಾಬ್ ಮಲಿಕ್, ಅನಿಲ್ ದೇಶಮುಖ್ ತಾತ್ಕಾಲಿಕ ಬಿಡುಗಡೆಗೆ ಸುಪ್ರೀಂ ನಿರಾಕರಣೆ

Update: 2022-06-20 16:32 GMT

ಹೊಸದಿಲ್ಲಿ, ಜೂ. 20: ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಲು ತಾತ್ಕಾಲಿಕವಾಗಿ ಬಿಡುಗಡೆ ಮಾಡುವಂತೆ ಕೋರಿ ಮಹಾರಾಷ್ಟ್ರದ ಎನ್‌ಸಿಪಿ ನಾಯಕರಾದ ನವಾಬ್ ಮಲಿಕ್ ಹಾಗೂ ಅನಿಲ್ ದೇಶಮುಖ್ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. 

ಚುನಾವಣೆಯ ನಿಮಿಷಗಳ ಮುನ್ನ ಸಿ.ಟಿ. ರವಿಕುಮಾರ್ ಹಾಗೂ ಸುಧಾಂಶು ಧುಲಿಯಾ ಅವರ ರಜಾಕಾಲದ ಪೀಠ ಬಾಂಬೆ ಉಚ್ಚ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮನವಿ ಸಲ್ಲಿಸಿದ ಎನ್‌ಸಿಪಿ ನಾಯಕರಿಗೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದೆ.  

ಆದರೂ, ಬಂಧಿತ ಶಾಸಕರು ಹಾಗೂ ಸಂಸದರು ರಾಜ್ಯ ಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಬಹುಹುದೇ ಎಂಬ ಬಗ್ಗೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 62(5)ರ  ಹೆಚ್ಚಿನ ವ್ಯಾಖ್ಯಾನವನ್ನು ಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸೆಕ್ಷನ್ 62(ಎ) ಕೈದಿಗಳು ಮತದಾನ ಮಾಡುವುದನ್ನು ನಿರ್ಬಂಧಿಸುತ್ತದೆ. 
ದೂರುದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ನ್ಯಾಯವಾದಿ ಮೀನಾಕ್ಷಿ ಅರೋರಾ, ಚುನಾವಣೆ ಸೋಮವಾರ ನಡೆಯುತ್ತಿದೆ. ಆದುದರಿಂದ ಮಧ್ಯಂತರ ಪರಿಹಾರ ನೀಡುವಂತೆ ಕೋರಿದರು. ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಲು ಬೆಂಗಾವಲು ರಕ್ಷಣೆಯೊಂದಿಗೆ ಕಾರಾಗೃಹದಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡುವಂತೆ ಎನ್‌ಸಿಪಿ ನಾಯಕರು ಮನವಿ ಮಾಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News