ಜೈಲು ಅಧಿಕಾರಿಗಳು ಅವರಿಲ್ಲವೆನ್ನುತ್ತಿದ್ದಾರೆ,: ಅಫ್ರೀನ್‌ ಫಾತಿಮಾ ತಂದೆಯ ಕುರಿತು ಕುಟುಂಬದ ಅಳಲು

Update: 2022-06-21 10:36 GMT

ಲಕ್ನೋ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ ನಲ್ಲಿ ಭುಗಿಲೆದ್ದ ಇತ್ತೀಚಿನ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜಾವೇದ್ ಮುಹಮ್ಮದ್ ಅವರನ್ನು ಬಂಧಿಸಿದ ಕೆಲವು ದಿನಗಳ ನಂತರ, ಜೂನ್ 20, ಸೋಮವಾರದಂದು ಅವರ ಪುತ್ರಿ ಅಫ್ರೀನ್ ಫಾತಿಮಾ, ಜೈಲು ಅಧಿಕಾರಿಗಳು ಮತ್ತು ಜಿಲ್ಲಾಡಳಿತವು ನೈನಿ ಕೇಂದ್ರ ಕಾರಾಗೃಹದಲ್ಲಿ ಅವರ ಉಪಸ್ಥಿತಿಯನ್ನು ನಿರಾಕರಿಸಿದೆ ಎಂದು ಆರೋಪಿಸಿದ್ದಾರೆ.

"ನನ್ನ ತಂದೆ ಜಾವೇದ್ ಮುಹಮ್ಮದ್ ನ್ನು ಬಂಧಿಸಿದ ನಂತರ ಇರಿಸಲಾಗಿದ್ದ ನೈನಿ ಸೆಂಟ್ರಲ್ ಜೈಲಿನಲ್ಲಿ ಅವರ ಉಪಸ್ಥಿತಿಯನ್ನು ಜೈಲಿನ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ನಿರಾಕರಿಸಿದೆ. ಅವರ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ!" ಎಂದು ಟ್ವೀಟ್‌ನಲ್ಲಿ ಅಫ್ರೀನ್‌ ಫಾತಿಮಾ ಆತಂಕ ವ್ಯಕ್ತಪಡಿಸಿದ್ದಾರೆ.

ಅಫ್ರೀನ್ ತನ್ನ ತಾಯಿ ಪರ್ವೀನ್ ಫಾತಿಮಾ ಅವರ ಸಂದೇಶವನ್ನು ಪೋಸ್ಟ್ ಮಾಡಿದ್ದು, ಸೋಮವಾರ ಮುಂಜಾನೆಯಿಂದ ಕುಟುಂಬ ಮತ್ತು ಅವರ ವಕೀಲರು ಮುಹಮ್ಮದ್‌ ರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ, ಆದರೆ ಇನ್ನೂ, ಅಲಹಾಬಾದ್ ಜಿಲ್ಲೆಯ ಅಧಿಕಾರಿಗಳು ಮತ್ತು ನೈನಿ ಕೇಂದ್ರ ಕಾರಾಗೃಹದ ಅಧಿಕಾರಿಗಳು ಅವರ ಇರುವಿಕೆಯ ಬಗ್ಗೆ ಭರವಸೆ ನೀಡಲು ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.

ತನ್ನ ಪತಿಯನ್ನು "ಕೃತಕ ಮತ್ತು ಸುಳ್ಳು ಆರೋಪಗಳ" ಮೇಲೆ ಬಂಧಿಸಲಾಗಿದೆ ಎಂದು ಫರ್ವೀನ್‌ ಫಾತಿಮಾ ಉಲ್ಲೇಖಿಸಿದ್ದಾರೆ.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ನಾಯಕ ಜಾವೇದ್ ಮುಹಮ್ಮದ್ ರನ್ನು ಜೂನ್ 10 ರ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪ್ರಮುಖ ಸಂಚುಕೋರ ಎಂದು ಆರೋಪಿಸಲಾಗಿತ್ತು. ಪ್ರವಾದಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷದ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು.

ಅಫ್ರೀನ್ ಮತ್ತು ಪರ್ವೀನ್ ಸೇರಿದಂತೆ ಅವರ ಕುಟುಂಬ ವಾಸಿಸುತ್ತಿದ್ದ ಮನೆಯನ್ನು ಜೂನ್ 12 ರಂದು ಪ್ರಯಾಗರಾಜ್ ಅಧಿಕಾರಿಗಳು ನೆಲಸಮಗೊಳಿಸಿದ್ದರು.

ಸದ್ಯ ಪ್ರಕರಣದ ಕುರಿತು ಇದೀಗ ಅಫ್ರೀನ್‌ ಫಾತಿಮಾ ಟ್ವೀಟ್‌ ಮಾಡಿದ್ದು, "ನನ್ನ ತಂದೆ ಎಲ್ಲಿದ್ದಾರೆಂದು ಅಧಿಕಾರಿಗಳು ಅಧಿಕೃತ ಮಾಹಿತಿ ನೀಡದಿದ್ದರೂ ಇದೀಗ ಅವರನ್ನು ಪತ್ತೆಹಚ್ಚುವಲ್ಲಿ ನಾವು ಸಫಲರಾಗಿದ್ದೇವೆ. ಅವರು ದಿಯೋರಿಯಾ ಜೈಲಿನಲ್ಲಿದ್ದಾರೆ. ಅವರನ್ನು ಇವತ್ತು ಭೇಟಿಯಾಗಲು ನಮಗೆ ಸಾಧ್ಯವಾಗಯಿತು, ಅಲ್‌ಹಮ್ದುಲಿಲ್ಲಾಹ್"‌ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News