ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿ ಯಶವಂತ್‌ ಸಿನ್ಹಾ ಆಯ್ಕೆ

Update: 2022-06-21 17:13 GMT

ಹೊಸದಿಲ್ಲಿ,ಜೂ.21: ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರದಲ್ಲಿ ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು ರಾಷ್ಟ್ರಪತಿ ಚುನಾವಣೆಗಾಗಿ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಮಂಗಳವಾರ ಹೆಸರಿಸಲ್ಪಟ್ಟಿದ್ದಾರೆ. ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಇನ್ನಷ್ಟೇ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ.

ಸಂಸತ್ ಸಂಕೀರ್ಣದಲ್ಲಿ ಎನ್ಸಿಪಿ ವರಿಷ್ಠ ಶರದ ಪವಾರ ಅವರು ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರತಿಪಕ್ಷ ನಾಯಕರು ಸಿನ್ಹಾ ಅವರ ಹೆಸರನ್ನು ಒಮ್ಮತದಿಂದ ಒಪ್ಪಿಕೊಂಡರು.‘ಮುಂಬರುವ ರಾಷ್ಟ್ರಪತಿ ಚುನಾವಣೆಗೆ ನಮ್ಮ ಒಮ್ಮತದ ಅಭ್ಯರ್ಥಿಯನ್ನು ನಿಲ್ಲಿಸಲು ಮತ್ತು ಮೋದಿ ಸರಕಾರವು ಇನ್ನಷ್ಟು ಹಾನಿ ಮಾಡುವುದನ್ನು ತಡೆಯಲು ನಾವು ನಿರ್ಧರಿಸಿದ್ದೇವೆ. ಇಂದು ನಡೆದ ಸಭೆಯಲ್ಲಿ ಯಶವಂತ ಸಿನ್ಹಾರನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ. ಸಿನ್ಹಾರಿಗೆ ಮತ ನೀಡುವಂತೆ ನಾವು ಎಲ್ಲ ರಾಜಕೀಯ ಪಕ್ಷಗಳನ್ನು ಕೋರುತ್ತಿದ್ದೇವೆ ’ ಎಂದು ಕಾಂಗ್ರೆಸ್ ನಾಯಕ ಜೈರಾ ರಮೇಶ್ ಅವರು ಪ್ರತಿಪಕ್ಷಗಳ ಜಂಟಿ ಹೇಳಿಕೆಯನ್ನು ಓದಿ ಹೇಳಿದರು.

‘ಮೌಲ್ಯಯುತ ರಾಷ್ಟ್ರಪತಿ ಅವಿರೋಧವಾಗಿ ಆಯ್ಕೆಯಾಗುವಂತಾಗಲು’ ಸಿನ್ಹಾ ಅವರ ಉಮೇದುವಾರಿಕೆಯನ್ನು ಬೆಂಬಲಿಸುವಂತೆ ಜಂಟಿ ಹೇಳಿಕೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಕೋರಲಾಗಿದೆ.‘ರಾಷ್ಟ್ರಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿಗಾಗಿ ಮೋದಿ ಸರಕಾರವು ಗಂಭೀರ ಪ್ರಯತ್ನ ಮಾಡದಿರುವ ಬಗ್ಗೆ ನಾವು ವಿಷಾದಿಸುತ್ತೇವೆ ’ ಎಂದು ರಮೇಶ್ ಹೇಳಿದರು.

ರಾಷ್ಟ್ರಪತಿ ಚುನಾವಣೆಗಾಗಿ ಪ್ರತಿಪಕ್ಷಗಳ ಒಗ್ಗಟ್ಟನ್ನು ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಸದೃಢಗೊಳಿಸಲಾಗುವುದು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಿನ್ಹಾ ಪರ ಪ್ರಚಾರದ ನೇತೃತ್ವಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ಪ್ರತಿಪಕ್ಷಗಳ ಹೆಚ್ಚಿನ ಒಗ್ಗಟ್ಟಿಗಾಗಿ ತಾನು ಟಿಎಂಸಿ ಉಪಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ ಎಂದು ಮಂಗಳವಾರ ಬೆಳಿಗ್ಗೆ ಟ್ವೀಟಿಸುವ ಮೂಲಕ ಸಿನ್ಹಾ ತಾನು ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗುವ ಸುಳಿವನ್ನು ನೀಡಿದ್ದರು.

ಇದಕ್ಕೂ ಮುನ್ನ ಮಾಜಿ ಪ.ಬಂಗಾಳ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ,ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದರು.
ನೂತನ ರಾಷ್ಟ್ರಪತಿ ಆಯ್ಕೆಗೆ ಪ್ರಕ್ರಿಯೆಯು ಜೂ.1ರಂದು ಆರಂಭಗೊಂಡಿದ್ದು,ಜೂ.29 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಗತ್ಯವಾದರೆ ಜು.18ರಂದು ಮತದಾನ ನಡೆಯಲಿದೆ ಮತ್ತು ಜು.21ರಂದು ಮತಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News