ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾದ ಶೇ.88 ರೈತರು; ಅಧ್ಯಯನ ವರದಿ

Update: 2022-06-21 16:43 GMT

ಚಂಡಿಗಢ, ಜೂ. 20: ಪಂಜಾಬ್‌ನ 6 ಜಿಲ್ಲೆಗಳಲ್ಲಿ 2000 ಹಾಗೂ 2018ರ ನಡುವೆ 9,291ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ‘ಎಕಾನಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’ಯ ಇತ್ತೀಚೆಗಿನ ಆವೃತ್ತಿಯಲ್ಲಿ ಪ್ರಕಟಗೊಂಡ ಪಂಜಾಬ್ ವಿಶ್ವವಿದ್ಯಾನಿಲಯ (ಪಿಎಯು) ಅಧ್ಯಯನ ಹೇಳಿದೆ.  ಸಂಗೂರು, ಬಠಿಂಡಾ, ಲೂಧಿಯಾನ, ಮಾನ್ಸಾ, ಮೊಗಾ ಹಾಗೂ ಬರ್ನಾಲ ಮೊದಲಾದ ಜಿಲ್ಲೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. 

ಇವುಗಳಲ್ಲಿ ಸಾಂಸ್ಥಿಕವಲ್ಲದ ಸಾಲ ಹೊರೆ ಶೇ. 88 ರೈತರ ಆತ್ಮಹತ್ಯೆಗೆ    ಕಾರಣ. ಸಣ್ಣ ಹಾಗೂ ಮಧ್ಯಮ ರೈತರು ಸಾಲದ ಪ್ರಮುಖ ಸಂತ್ರಸ್ತರು. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ. 77 ರೈತರು ಎರಡು ಎಕರೆಗಿಂತ ಕಡಿಮೆ ಭೂಮಿ ಹೊಂದಿದವರು ಎಂದು ಅಧ್ಯಯನ ತಿಳಿಸಿದೆ.

ಸಂತ್ರಸ್ತರಾದ ಸುಮಾರು ಶೇ. 93 ಕುಟುಂಬಗಳಲ್ಲಿ ಒಬ್ಬರು, ಶೇ. 7 ಕುಟುಂಬಗಳಲ್ಲಿ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಯಲ್ಲಿ ಮಾಡಿಕೊಂಡವರಲ್ಲಿ ಶೇ. 92 ಪುರುಷರು ಎಂಬುದು ಅಧ್ಯಯನದಿಂದ ಬಹಿರಂಗಗೊಂಡಿದೆ.

ಸಾಲ ಸಂಬಂಧಿತ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ 2015ರಲ್ಲಿ ಅತ್ಯಧಿಕ (515) ಇತ್ತು. ಈ ವರ್ಷ ಹತ್ತಿ ಕೃಷಿ ವಿಫಲವಾಗಿತ್ತು ಎಂದು ಅಧ್ಯಯನ ಹೇಳಿದೆ. 
ಬಠಿಂಡಾ, ಮಾನ್ಸಾ ಹಾಗೂ ಬರ್ನಾಲ ಜಿಲ್ಲೆಗಳಲ್ಲಿ ಹತ್ತಿ ಪ್ರಮುಖ ವಾಣಿಜ್ಯ ಬೆಳೆ. ಕಳೆದ ಮೂರು ದಶಕಗಳಿಗೆ ಹೋಲಿಸಿದರೆ, 2015ರಲ್ಲಿ ಅಮೆರಿಕ ಹತ್ತಿ ಬೆಳೆ ಅತಿ ಕಡಿಮೆ (ಪ್ರತಿ ಹೆಕ್ಟೇರ್‌ಗೆ 197 ಕಿ.ಗ್ರಾಂ.) ಉತ್ಪಾದನೆ ಆಗಿತ್ತು ಎಂದು ಅದು ತಿಳಿಸಿದೆ.

ಪಂಜಾಬ್ ವಿಶ್ವವಿದ್ಯಾನಿಲಯ (ಪಿಎಯು)ದ ಅರ್ಥಶಾಸ್ತ್ರ ಹಾಗೂ ಸಮಾಜಶಾಸ್ತ್ರ ವಿಭಾಗದ ಮೂವರು ಹಿರಿಯ ಬೋಧಕ ಸಿಬ್ಬಂದಿಯಾದ ಸುಖ್‌ಪಾಲ್ ಸಿಂಗ್, ಮಂಜೀತ್ ಕೌರ್ ಹಾಗೂ ಎಚ್.ಎಸ್. ಕಿಂಗ್ರಾ ಅವರು ಈ ಅಧ್ಯಯನ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News