ಕೆಜಿಎಫ್‌ ಹಿಂದೂ ವಿರೋಧಿಯೇ?: ಬಲಪಂಥೀಯರ #BoycottShamshera ಅಭಿಯಾನಕ್ಕೆ ನೆಟ್ಟಿಗರ ಪ್ರಶ್ನೆ

Update: 2022-06-23 14:13 GMT

ಮುಂಬೈ: ಸುದೀರ್ಘ ನಾಲ್ಕು ವರ್ಷಗಳ ವಿರಾಮದ ಬಳಿಕ ತೆರೆಕಾಣಲಿರುವ ರಣಬೀರ್ ಕಪೂರ್ ಅವರ ಎರಡು ಚಿತ್ರಗಳನ್ನು ಬಹಿಷ್ಕರಿಸುವಂತೆ ಬಲಪಂಥೀಯರು ಅಭಿಯಾನ ನಡೆಸುತ್ತಿದ್ದಾರೆ. ʼಬ್ರಹ್ಮಾಸ್ತ್ರ: ಭಾಗ-1ʼ ಹಾಗೂ ʼಶಂಶೇರಾʼ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಹಿಂದೂ ನಂಬಿಕೆಗಳನ್ನು ಅಪಮಾನಿಸಲಾಗಿದೆ ಎಂದು ಆರೋಪಿಸಿ ಬಲಪಂಥೀಯರು ಈ ಎರಡೂ ಚಿತ್ರವನ್ನು ಬಹಿಷ್ಕರಿಸಲು ಅಭಿಯಾನ ನಡೆಸಿದ್ದಾರೆ.

ಬ್ರಹ್ಮಾಸ್ತ್ರ ಚಿತ್ರದ ಟ್ರೇಲರಿನ ವಿವಿಧ ದೃಶ್ಯಗಳಲ್ಲಿ ಹಿಂದೂ ನಂಬಿಕೆಗಳಿಗೆ ಅಗೌರವ ತೋರುವ ಸನ್ನಿವೇಶಗಳಿವೆಯೆಂದು ಪ್ರತಿಪಾದಿಸಲಾಗಿದ್ದು, ರಣಬೀರ್‌ ಕಪೂರ್‌ ಹಾರಿ ಗಂಟೆ ಬಾರಿಸುವ ದೃಶ್ಯವನ್ನು ಹಲವರು ವಿರೋಧಿಸಿದ್ದರು.  ದೃಶ್ಯದಲ್ಲಿ ಪಾದರಕ್ಷೆ ಧರಿಸಿರುವುದು ಕಂಡು ಬಂದಿದ್ದು, ದೇವಸ್ಥಾನದೊಳಗೆ ಪಾದರಕ್ಷೆ ಧರಿಸಿ, ನಂಬಿಕೆಗಳಿಗೆ ಘಾಸಿ ಮಾಡಲಾಗಿದೆ ಎಂದು ಬಲಪಂಥೀಯರು ಆರೋಪಿಸಿ ಈ ಹಿಂದೆ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಅಂತಹದ್ದೇ ಬಹಿಷ್ಕಾರದ ಕರೆ ಇದೀಗ ಶಂಶೇರಾ ಚಿತ್ರಕ್ಕೂ ಬಂದೊದಗಿದೆ.

ಚಿತ್ರದಲ್ಲಿ ಸಂಜಯ್‌ ದತ್‌ ನಿರ್ವಹಿಸುತ್ತಿರುವ ಖಳನಾಯಕನ ಹೆಸರು ಮತ್ತು ಪಾತ್ರ ಕಾಣಿಸಿಕೊಂಡಿರುವ ಬಗೆ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದೆ. ಬ್ರಾಹ್ಮಣ ಗುರುತನ್ನು ಹೊಂದಿರುವ ಶುದ್ಧ್‌ ಸಿಂಗ್‌ (ಸಂಜಯ್‌ ದತ್‌) ಪಾತ್ರ ಈ ಚಿತ್ರದಲ್ಲಿ ಖಳನಟ, ಇದು ಸನಾತನ ಧರ್ಮದ ಮೌಲ್ಯಗಳಿಗೆ ಎಸಗಿದ ಅಪಚಾರ ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ. ಹಿಂದೂ ಪವಿತ್ರ ಚಿಹ್ನೆಗಳಾದ ತ್ರಿಪುಂದ್ರ ಮತ್ತು ಶಿಖಾವನ್ನು ನಕರಾತ್ಮಕ ಪಾತ್ರಗಳಿಗೆ ಬಳಸಿದ ರೀತಿಯು ಬಾಲಿವುಡ್‌ನ ಹಿಂದೂ ವಿರೋಧಿ ಮನಸ್ಥಿತಿ ಮುಂದುವರೆದಿದೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಇನ್ನೊಬ್ಬರು ಬರೆದಿದ್ದಾರೆ.

ಆದರೆ, ಈ ವಾದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರೊಬ್ಬರು, ರಾವಣ ನಕರಾತ್ಮಕ ಪಾತ್ರವಾಗಿತ್ತು, ಆದರೆ ಶಿವನ ಭಕ್ತವೂ ಹೌದು. ರಾವಣನ ಪಾತ್ರ ನಿರ್ವಹಿಸುವವರು ಹಿಂದೂ ಚಿಹ್ನೆಗಳನ್ನು ಧರಿಸಬಾರದೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಟ್ವಿಟರ್‌ ಬಳಕೆದಾರ ಕೆಜಿಎಫ್‌ ಚಿತ್ರದ ಗರುಡ ಪಾತ್ರವನ್ನು ಎಳೆದು ತಂದಿದ್ದು, ಗರುಡ ಒಬ್ಬ ಕಾಳಿ ಮಾತೆಯ ಭಕ್ತನಾಗಿದ್ದ.  ಆ ಪಾತ್ರ ಕ್ರೂರವಾಗಿರಲಿಲ್ಲವೇ? ದಕ್ಷಿಣ ಭಾರತೀಯ ಚಿತ್ರಗಳು ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡಿದ್ದಾರೆಂದು ಯಾರೂ ಯಾಕೆ ಅಭಿಯಾನ ಮಾಡಲಿಲ್ಲವೆಂದು ಪ್ರಶ್ನಿಸಿದ್ದಾರೆ.

ಮತ್ತೊಬ್ಬ ನೆಟ್ಟಿಗರು ಇದೇ ವಾದವನ್ನು ಮುಂದಿಟ್ಟಿದ್ದು, ʼಗರುಡನಿಗೆ ಟಿಕಾ ಇದ್ದಾಗ ಜನರಿಗೆ ಯಾವುದೇ ಸಮಸ್ಯೆ ಇಲ್ಲ ಆದರೆ ಸಂಜಯ್ ದತ್ ಅದನ್ನು ಮಾಡಿದಾಗ ಎಲ್ಲರೂ ಅದನ್ನು ಪ್ರಶ್ನಿಸುತ್ತಾರೆ #Shamsheraʼ ಎಂದು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News