ಕೇಂದ್ರ ಸರಕಾರದ ಮನವಿ ಮೇರೆಗೆ ಹಿಂದುತ್ವ ಟೀಕಾಕಾರ ಸಿಜೆ ವೆಲ್ಮನ್‌ ರ ಖಾತೆಯನ್ನು ತಡೆಹಿಡಿದ ಟ್ವಿಟರ್

Update: 2022-06-23 14:22 GMT

ಹೊಸದಿಲ್ಲಿ: ಭಾರತದಲ್ಲಿ ಮೋದಿ ನೇತೃತ್ವದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಜನಾಂಗೀಯ ನೀತಿಗಳ ವಿರುದ್ಧದ ಪೋಸ್ಟ್‌ಗಳಿಗಾಗಿ ಖ್ಯಾತಿ ಪಡೆದಿದ್ದ ಆಸ್ಟ್ರೇಲಿಯಾದ ಪತ್ರಕರ್ತ, ಲೇಖಕ ಮತ್ತು ವಿಶ್ಲೇಷಕ ಸಿಜೆ ವೆಲ್ಮನ್ ಅವರ ಖಾತೆಯನ್ನು ಟ್ವಿಟರ್‌ ಸಾಮಾಜಿಕ ತಾಣವು ಭಾರತದಲ್ಲಿ ತಡೆಹಿಡಿದಿದೆ.

ಟ್ವಿಟರ್ ತನ್ನ ಅಧಿಸೂಚನೆಯಲ್ಲಿ, "ಭಾರತದ ಸ್ಥಳೀಯ ಕಾನೂನುಗಳ ಅಡಿಯಲ್ಲಿ ಟ್ವಿಟರ್‌ನ ಬಾಧ್ಯತೆಗಳನ್ನು ಅನುಸರಿಸಲು, ನಾವು ದೇಶದ ಮಾಹಿತಿ ತಂತ್ರಜ್ಞಾನ ಕಾಯಿದೆ 2000 ರ ಅಡಿಯಲ್ಲಿ ಭಾರತದಲ್ಲಿ ಈ ಕೆಳಗಿನ ಖಾತೆಯನ್ನು ತಡೆಹಿಡಿದಿದ್ದೇವೆ" ಎಂದು ಹೇಳಿದೆ.

ಟ್ವಿಟರ್‌ನ ತಾರತಮ್ಯ‌ ನೀತಿಯ ಕುರಿತು ಪ್ರತಿಕ್ರಿಯಿಸಿದ ಬೈಲೈನ್ ಟೈಮ್ಸ್‌ನ ಜಾಗತಿಕ ವರದಿಗಾರ, ಇಸ್ಲಾಮೋಫೋಬಿಯಾ ವಿರುದ್ಧದ ಕಾರ್ಯಕರ್ತ ಸಿಜೆ ವೆಲ್ಮನ್, "ಟ್ವಿಟರ್ ಭಾರತ ಸರ್ಕಾರವನ್ನು ರಕ್ಷಿಸಲು ತೀವ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಬಲಪಂಥೀಯ ಹಿಂದೂಗಳು ಹಾಗೂ ನರೇಂದ್ರ ಮೋದಿಯವರ ಫ್ಯಾಸಿಸ್ಟ್ ಆಡಳಿತ ಮಾಡಿದ ಮನವಿಯಿಂದಾಗಿ ನನ್ನ ಖಾತೆಯನ್ನು ಈಗ ಭಾರತದಲ್ಲಿ ತಡೆಹಿಡಿಯಲಾಗಿದೆ.  ಇದು ಹೇಗೆ ಸರಿ?" ಎಂದು ಅವರು ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಭಾರತದ ಕಾನೂನುಗಳನ್ನು ಅಥವಾ ಟ್ವಿಟರ್‌ನ ಬಳಕೆದಾರರ ನೀತಿಗಳನ್ನು ಉಲ್ಲಂಘಿಸದಿದ್ದರೂ ಟ್ವಿಟರ್ ನನ್ನ ಖಾತೆಯನ್ನು ಏಕೆ ತಡೆಹಿಡಿದಿದೆ" ಎಂದು ಅವರು ಪ್ರಶ್ನಿಸಿದ್ದಾರೆ. "ಮೋದಿ ಆಡಳಿತವು ಮುಸ್ಲಿಮರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಮುಚ್ಚಿಡಲು ಟ್ವಿಟರ್‌ ಸಹಾಯ ಮಾಡುತ್ತಿದೆ" ಎಂದೂ ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News