ಪ್ರೊ. ಸಾಯಿಬಾಬಾರಿಗೆ ತಕ್ಷಣ ಜಾಮೀನು ನೀಡಬೇಕೆಂದು ಜಗತ್ತಿನಾದ್ಯಂತದ ಗಣ್ಯ ನಾಗರಿಕರು, ಸಂಘಟನೆಗಳಿಂದ ಸಿಜೆಐಗೆ ಪತ್ರ

Update: 2022-06-23 14:17 GMT

ಹೊಸದಿಲ್ಲಿ: ಮಾವೋವಾದಿಗಳ ಜೊತೆ ನಂಟು ಹೊಂದಿರುವ ಪ್ರಕರಣದಲ್ಲಿ ದೋಷಿಯೆಂದು ಘೋಷಿತರಾಗಿ ಜೈಲಿನಲ್ಲಿರುವ ಪ್ರೊಫೆಸರ್ ಜಿ ಎನ್ ಸಾಯಿಬಾಬಾ ಅವರಿಗೆ ವೈದ್ಯಕೀಯ ನೆಲೆಯಲ್ಲಿ ತಕ್ಷಣ ಜಾಮೀನು ಒದಗಿಸಬೇಕೆಂದು ಕೋರಿ  ಜಗತ್ತಿನಾದ್ಯಂತದ ಹಲವು ಗಣ್ಯ ನಾಗರಿಕರು ಹಾಗೂ ಶೈಕ್ಷಣಿಕ ಸಂಘಟನೆಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಜಂಟಿಯಾಗಿ ಪತ್ರ ಬರೆದಿದ್ದಾರೆ.

ದಿಲ್ಲಿ ವಿವಿಯ ಮಾಜಿ ಪ್ರೊಫೆಸರ್ ಆಗಿರುವ ಸಾಯಿಬಾಬಾ ಆವರ ಆರೋಗ್ಯ ಕುರಿತು ತೀವ್ರ ಕಳವಳವನ್ನು ಪತ್ರದಲ್ಲಿ ವ್ಯಕ್ತಪಡಿಸಲಾಗಿದೆಯಲ್ಲದೆ ದೇಹದ ಶೇ 90ರಷ್ಟು ಭಾಗದ ಮೇಲೆ ಅವರು ಸ್ವಾಧೀನ ಕಳೆದುಕೊಂಡಿದ್ದಾರೆ ಹಾಗೂ ಎರಡು ಬಾರಿ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ವಿವರಿಸಿದೆ.

ಅವರನ್ನು ನಾಗ್ಪುರ್‍ನಲ್ಲಿ ʼಅಂಡಾ ಸೆಲ್' ನಲ್ಲಿ ಏಕಾಂಗಿಯಾಗಿ ಇರಿಸಲಾಗಿದ್ದು ಅವರ ಪ್ರಮುಖ ಅಂಗಾಂಗಗಳು ನಿಧಾನವಾಗಿ ವೈಫಲ್ಯಕ್ಕೊಳಗಾಗುತ್ತಿವೆ ಎಂದು ಪತ್ರ ವಿವರಿಸಿದೆ. ಈ ರೀತಿ ಅವರ ಜೀವಾವಧಿ ಶಿಕ್ಷೆ  ಮರಣದಂಡನೆಯಾಗಿ ಪರಿಣಮಿಸಿದೆ ಎಂದೂ ಪತ್ರದಲ್ಲಿ ಹೇಳಲಾಗಿದೆ.

ವೈದ್ಯಕೀಯ ನೆಲೆಯಲ್ಲಿ ಜಾಮೀನಿಗೆ ಕಾಯುತ್ತಿರುವಾಗಲೇ ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಆರೋಪಿಯೆಂದು ಹೆಸರಿಸಲಾಗಿದ್ದ ಸ್ಟಾನ್ ಸ್ವಾಮಿ ಸಾವಿನ ಪ್ರಕರಣವನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆಯಲ್ಲದೆ ರಾಜಕೀಯ ಅಸಮ್ಮತಿಯ ಸದ್ದಡಗಿಸುವ ಯತ್ನ ಇದಾಗಿದೆ ಹಾಗೂ ತಾರತಮ್ಯಕಾರಿ ರಾಜಕೀಯ ವ್ಯವಸ್ಥೆಯಿಂದಾಗಿ ನ್ಯಾಯಪರ  ವಿಚಾರಣೆಯ ಹಕ್ಕಿಗೆ ತಡೆಯೊಡ್ಡಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಸಾಯಿಬಾಬಾ ಅವರ ಜೀವವುಳಿಸಲು ಅವರನ್ನು ಈಗಿನ ಸೆಲ್‍ನಿಂದ ಗಾಲಿಕುರ್ಚಿ ಬಳಸಬಹುದಾದ ಬ್ಯಾರಾಕ್‍ಗೆ ತಕ್ಷಣ ಸ್ಥಳಾಂತರಿಸಬೇಕು ಹಾಗೂ ಅವರಿಗೆ ವೈದ್ಯಕೀಯ ನೆಲೆಯಲ್ಲಿ ಜಾಮೀನು ನೀಡಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಪತ್ರ ಆಗ್ರಹಿಸಿದೆ.

ಜಗತ್ತಿನಾದ್ಯಂತದ ಶಿಕ್ಷಣ ತಜ್ಞರು ಹಾಗೂ ವೃತ್ತಿಪರರ ಸಂಘಟನೆಯಾಗಿರುವ ಇಂಟರ್‍ನ್ಯಾಷನಲ್ ಸಾಲಿಡಾರಿಟಿ ಫಾರ್ ಅಕಾಡೆಮಿಕ್ ಫ್ರೀಡಂ ಇನ್ ಇಂಡಿಯಾದ ಮುತುವರ್ಜಿಯಿಂದ ಈ ಜಂಟಿ ಪತ್ರವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News