'ಕೆ.ಪಳನಿಸ್ವಾಮಿ ತಮ್ಮ ಏಕೈಕ ನಾಯಕ' ಎಂದ ಸದಸ್ಯರು: ಸಭೆಯಿಂದ ಹೊರನಡೆದ ಒ.ಪನ್ನೀರ್‌ಸೆಲ್ವಂ

Update: 2022-06-23 15:06 GMT

ಚೆನ್ನೈ,ಜೂ.23: ಎಐಎಡಿಎಂಕೆ ಗುರುವಾರ ಇಲ್ಲಿ ನಡೆದ ತನ್ನ ಸಾಮಾನ್ಯ ಮಂಡಳಿ ಸಭೆಯಲ್ಲಿ 23 ಅನುಮೋದಿತ ನಿರ್ಣಯಗಳನ್ನು ತಿರಸ್ಕರಿಸಿತು. ಮಾಜಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರಡಿ ಪಕ್ಷದೊಳಗೆ ಏಕೈಕ ನಾಯಕತ್ವಕ್ಕೆ ಆಗ್ರಹಿಸಿ ಸದಸ್ಯರು ಘೋಷಣೆಗಳನ್ನು ಕೂಗಿದರು. ಘೋಷಣೆಗಳ ನಡುವೆಯೇ ಬೆಂಬಲಿಗರು ಅಲಂಕೃತ ಕಿರೀಟ, ಖಡ್ಗ ಮತ್ತು ರಾಜದಂಡವನ್ನು ನೀಡಿ ಪಳನಿಸ್ವಾಮಿಯವರನ್ನು ಗೌರವಿಸಿದರು.

ಪಕ್ಷದೊಳಗೆ ಪಳನಿಸ್ವಾಮಿಯವರ ಪ್ರತಿಸ್ಪರ್ಧಿಯಾಗಿರುವ ಒ.ಪನ್ನೀರ್‌ಸೆಲ್ವಂ ಅವರು ಸಭೆಯಿಂದ ಹೊರನಡೆದಿದ್ದು, ಈ ವೇಳೆ ಬಾಟಲ್ಗಳನ್ನು ಅವರೆಡೆಗೆ ಎಸೆಯಲಾಗಿತ್ತು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಎಐಎಡಿಎಂಕೆ ಪಕ್ಷದಲ್ಲಿ ಪನ್ನೀರ್‌ ಸೆಲ್ವಂ ಮತ್ತು ಪಳನಿಸ್ವಾಮಿ ಅವರ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಪ್ರಸ್ತುತ ಅವರಿಬ್ಬರೂ ಪಕ್ಷದ ನಾಯಕರಾಗಿದ್ದು, ಅನುಕ್ರಮವಾಗಿ ಸಮನ್ವಯಕ ಮತ್ತು ಜಂಟಿ ಸಮನ್ವಯಕ ಹುದ್ದೆಗಳಲ್ಲಿದ್ದಾರೆ.
2017,ಸೆ.12ರಂದು ನಡೆದಿದ್ದ ಸಾಮಾನ್ಯ ಮಂಡಳಿ ಸಭೆಯಲ್ಲಿ ಪಕ್ಷವು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ‘ಶಾಶ್ವತ ಪ್ರಧಾನ ಕಾರ್ಯದರ್ಶಿ’ ಗೌರವ ಬಿರುದನ್ನು ನೀಡಿದ ಬಳಿಕ ಈ ಎರಡು ಹುದ್ದೆಗಳನ್ನು ಸೃಷ್ಟಿಸಲಾಗಿತ್ತು.

ಪಳನಿಸ್ವಾಮಿ ನೇತೃತ್ವದ ಬಣವೀಗ ಪಕ್ಷವನ್ನು ದ್ವಂದ್ವ ನಾಯಕತ್ವದಿಂದ ಮುಕ್ತಗೊಳಿಸಲು ಬಯಸಿದೆ. ಕಳೆದ ವಾರ ನಡೆದಿದ್ದ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳ ಸಭೆಯಲ್ಲಿಯೂ ಪಳನಿಸ್ವಾಮಿ ಬೆಂಬಲಿಗರು ಈ ವಿಚಾರವನ್ನು ಪ್ರಸ್ತಾವಿಸಿದ್ದರು. ಇದನ್ನು ವಿರೋಧಿಸಿರುವ ಪನ್ನೀರಸೆಲ್ವಂ ನೇತೃತ್ವದ ಬಳಗವು, ಹಾಗೆ ಮಾಡುವುದರಿಂದ ಜಯಲಲಿತಾರಿಗೆ ದ್ರೋಹ ಬಗೆದಂತಾಗುತ್ತದೆ ಎಂದು ಪ್ರತಿಪಾದಿಸುತ್ತಿದೆ.

ಸದ್ಯಕ್ಕೆ ದ್ವಂದ್ವ ನಾಯಕತ್ವವು ಸುಗಮವಾಗಿ ಸಾಗುತ್ತಿದೆ. ಪ್ರಧಾನ ಕಾರ್ಯದರ್ಶಿಯ ಹುದ್ದೆಯನ್ನು ಅಮ್ಮಾ (ಜಯಲಲಿತಾ) ಅವರಿಗಾಗಿ ಮೀಸಲಿಡಲಾಗಿದೆ. ಆ ಸ್ಥಾನಕ್ಕೆ ಯಾರೂ ಬರುವಂತಿಲ್ಲ ಎಂದು ಸಾಮಾನ್ಯ ಮಂಡಳಿಯು ಸ್ವತಃ ನಿರ್ಣಯವನ್ನು ಅಂಗೀಕರಿಸಿದೆ ಎಂದು ಪಳನಿಸ್ವಾಮಿ ಜೂ.6ರಂದು ಸುದ್ದಿಗಾರರಿಗೆ ತಿಳಿಸಿದ್ದರು. ಜು.11ರಂದು ನಡೆಯಲಿರುವ ಸಾಮಾನ್ಯ ಮಂಡಳಿಯ ಮುಂದಿನ ಸಭೆಯಲ್ಲಿ ಏಕ ನಾಯಕತ್ವ ನಿರ್ಣಯದ ಜೊತೆಗೆ ಈಗಾಗಲೇ ಚರ್ಚಿಸಿ ಅನುಮೋದಿಸಲ್ಪಟ್ಟಿರುವ 23 ನಿರ್ಣಯಗಳನ್ನು ಅಂಗೀಕರಿಸಲಾಗುವುದು ಎಂದು ಪಕ್ಷದ ಹಿರಿಯ ನಾಯಕ ಕೆ.ಪಿ.ಮುನುಸಾಮಿ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಜೂ.23ರಂದು ನಡೆಯಲಿರುವ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಪಕ್ಷದ ಉನ್ನತ ನಾಯಕತ್ವದಲ್ಲಿ ಬದಲಾವಣೆ ಕುರಿತು ಹೊಸ ನಿರ್ಣಯವನ್ನು ಕೈಗೆತ್ತಿಕೊಳ್ಳುವಂತಿಲ್ಲ ’ಎಂದು ಮದ್ರಾಸ ಉಚ್ಚ ನ್ಯಾಯಾಲಯವು ಬುಧವಾರ ತಡರಾತ್ರಿ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಗುರುವಾರದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ನಿಗದಿಯಂತೆ ಸಭೆಯನ್ನು ನಡೆಸಬಹುದು,ಆದರೆ ಈಗಾಗಲೇ ಅನುಮೋದಿಸಲ್ಪಟ್ಟಿರುವ 23 ನಿರ್ಣಯಗಳನ್ನು ಮಾತ್ರ ಚರ್ಚಿಸಿ ಅಂಗೀಕರಿಸಬಹುದು ಎಂದು ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

ಬುಧವಾರ ಏಕ ನ್ಯಾಯಾಧೀಶ ಪೀಠವು ಸಾಮಾನ್ಯಸಭೆಯಲ್ಲಿ ಪಳನಿಸ್ವಾಮಿ ಬಣವು ಯಾವುದೇ ಹೊಸ ನಿರ್ಣಯವನ್ನು ಕೈಗೆತ್ತಿಕೊಳ್ಳುವುದನ್ನು ನಿರ್ಬಂಧಿಸಲು ನಿರಾಕರಿಸಿತ್ತು. ಪನ್ನೀರಸೆಲ್ವಂ ಅವರು ಮುಖ್ಯ ನ್ಯಾಯಾಧೀಶ ಎಂ.ಎನ್.ಭಂಡಾರಿ ಅವರ ಅನುಮತಿಯೊಂದಿಗೆ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News