"ಮಾನಸಿಕ ಆರೋಗ್ಯ ಯೋಗಕ್ಷೇಮ ಕಾಯ್ದೆ-2017ನ್ನು ಕೂಡಲೇ ಅನುಸ್ಥಾನಕ್ಕೆ ತನ್ನಿ"

Update: 2022-06-24 13:19 GMT
ಡಾ.ಪಿ.ವಿ.ಭಂಡಾರಿ

ಉಡುಪಿ: ಮಾನಸಿಕ ಆರೋಗ್ಯ ಯೋಗಕ್ಷೇಮ ಕಾಯ್ದೆ-217 ಜಾರಿಗೊಂಡು ಈಗಾಗಲೇ ಐದು ವರ್ಷಗಳಾಗಿವೆ. ಆದರೆ ನಮ್ಮ ವಿವಿಧ ಸರಕಾರಿ ಇಲಾಖೆಗಳು ಈ ಕಾಯ್ದೆಯನ್ನು ಜಾರಿಗೊಳಿಸುವ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ. ಅಲ್ಲದೇ ಹೆಚ್ಚಿನ ಅಧಿಕಾರಿಗಳಿಗೆ ಈ ಕಾಯ್ದೆ ಬಗ್ಗೆ ಯಾವುದೇ ಅರಿವು ಇಲ್ಲದಂತಿದ್ದಾರೆ. ಆದ್ದರಿಂದ ಸರಕಾರ ಕೂಡಲೇ ಈ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಕುರಿತು ಕಾರ್ಯೋನ್ಮುಖವಾಗಬೇಕು ಎಂದು ನಾಡಿನ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಸರಕಾರವನ್ನು ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯ್ದೆಯ ಕುರಿತಂತೆ ನಮ್ಮ ಸರಕಾರಿ ಇಲಾಖೆಗಳು ಇನ್ನೂ ನಿದ್ರಾವಸ್ಥೆಯಲ್ಲೇ ಇವೆ. ಮೊದಲು ಸರಕಾರಿ ಇಲಾಖೆಗಳಿಗೆ ಕಾಯ್ದೆಯ ಕುರಿತಂತೆ ಸಮಗ್ರ ಮಾಹಿತಿ ನೀಡಬೇಕು ಎಂದವರು ಹೇಳಿದರು.

ಈ ಕಾಯ್ದೆಯಂತೆ ಇಂತಹ ವ್ಯಕ್ತಿಗಳನ್ನು ಅಂದರೆ ಸಂಭಾವ್ಯ ಮಾನಸಿಕ ಅಸ್ವಸ್ಥರನ್ನು ಚಿಕಿತ್ಸೆಗೆ ತೆಗೆದುಕೊಂಡು ಹೋಗುವುದು ಪೊಲೀಸರು ತುರ್ತಾಗಿ ಮಾಡಬೇಕಾದ ಕೆಲಸ. ಹಾಗೆಯೇ ಅಂತಹ ಕಾಯಿಲೆ ದೃಢಪಟ್ಟಲ್ಲಿ  ಅವರನ್ನು ಇದೇ ‘ಮಾನಸಿಕ ಆರೋಗ್ಯ ಯೋಗಕ್ಷೇಮ ಕಾಯ್ದೆ-2017’ರ ಅಡಿಯಲ್ಲಿ ಮನೋಚಿಕಿತ್ಸೆ ಕೊಡಿಸಲು ಸರಕಾರ ಕಾರ್ಯಪ್ರವೃತ್ತ ಆಗಬೇಕು.

ಸರಕಾರಿ ಆಸ್ಪತ್ರೆ ಅಥವಾ ಅಲ್ಲಿ ಚಿಕಿತ್ಸಾ ಸೌಲಭ್ಯ ಲಭ್ಯವಿಲ್ಲದೆ ಇದ್ದಲ್ಲಿ ಖಾಸಗಿ ನಾಮ ನಿರ್ದೇಶಿತ ಆಸ್ಪತ್ರೆಗಲ್ಲಿ ಸರಕಾರ ಚಿಕಿತ್ಸಾ ವೆಚ್ಚ ಭರಿಸಿ ಚಿಕಿತ್ಸೆ ಕೊಡಿಸಬೇಕು. ಈ ಚಿಕಿತ್ಸಾ ಸಮಯದಲ್ಲಿ ಈ ಕಾಯಿಲೆ ಇರುವವರ ಯೋಗಕ್ಷೇಮ ನೋಡಿಕೊಳ್ಳಲು ಹಾಗೂ ಅವರ ಬಗ್ಗೆ ನಿರ್ಧಾರ ಕೈಗೊಳ್ಳಲು ನಿಯೋಜಿತ ಪ್ರತಿನಿಧಿ (ನಾಮಿನೇಟೆಡ್ ರೆಫ್ರಸೆಂಟೇಟಿವ್) ಅಂದರೆ ಈ ಕಾಯಿಲೆಯ ಮನೆಯವರು ಅಥವಾ ಸರಕಾರಿ ಅಂಗವಿಕಲ ಕಲ್ಯಾಣ ಇಲಾಖಾ ಅಧಿಕಾರಿಗಳು ಈ ಕೆಲಸ ನಿರ್ವಹಿಸಬೇಕು ಎಂದು ಡಾ.ಭಂಡಾರಿ ವಿವರಿಸಿದರು.

ಗುಣಮುಖರಾದ ರೋಗಿಗಳನ್ನು ಅವರ ಮನೆ ಇಲ್ಲದೇ ಇದ್ದಲ್ಲಿ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಬೇಕು. ಗುಣಮುಖರಾದ ಮಹಿಳೆಯರು ಹಾಗೂ ಮಕ್ಕಳನ್ನು ಸರಕಾರಿ ಸ್ಟೇಟ್ ಹೋಮ್‌ನಲ್ಲಿಡಬೇಕು. ಗುಣಮುಖರಾದ ರೋಗಿಗಳನ್ನು ಕುಟುಂಬದೊಂದಿಗೆ ಸೇರಿಸುವುದು ಪೊಲೀಸರ ಕರ್ತವ್ಯವಾಗಿದೆ ಎಂದು ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ನಿರ್ದೇಶಕರೂ ಆಗಿರುವ ಡಾ.ಪಿ.ವಿ.ಭಂಡಾರಿ ತಿಳಿಸಿದರು.

ಇಂತಹ ಯಾವುದೇ ವ್ಯವಸ್ಥೆ ಉಡುಪಿ ಜಿಲ್ಲೆಯಲ್ಲಿ ಕಾರ್ಯವೆಸಗುತ್ತಿಲ್ಲ. ಹಲವಾರು ಬಾರಿ ಸರಕಾರದ ಪರವಾಗಿ ಸರಕಾರಿ ಅಧಿಕಾರಿಗಳು ಮಾನಸಿಕ ರೋಗಿಗಳನ್ನು ತಂದು ಆಸ್ಪತ್ರೆಗೆ ಸೇರಿಸಿ, ಅವರು ಗುಣಮುಖರಾದ ಮೇಲೆ ಅವರಿಗೆ ಸರಿಯಾದ ಯಾವುದೇ ವ್ಯವಸ್ಥೆ ಕಲ್ಪಿಸದೇ ಜಾರಿಕೊಳ್ಳುತ್ತಾರೆ. ಇಲ್ಲವೇ ಕೆಲವೊಮ್ಮೆ ಎಲ್ಲಿಯೋ, ಯಾವುದೇ ಸರಕಾರಿ ಮಾನ್ಯತೆ ಇಲ್ಲದ ಕಡೆಗಳಲ್ಲಿ ಅವರನ್ನು ಸೇರಿಸುವುದು, ಅಲ್ಲಿ ಅವರಿಗೆ ಯಾವುದೇ ಸರಿಯಾದ ಸೌಕರ್ಯಗಳು ಇಲ್ಲದೇ ಇದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಳ್ಳುವುದು ನಡೆಯುತ್ತಿದೆ ಎಂದವರು ಹೇಳಿದರು.

ಇದಕ್ಕೆ ಮುಖ್ಯ ಕಾರಣ ಸರಕಾರ ಇನ್ನೂ ಈ ಕಾಯ್ದೆಯಂತೆ ತನ್ನದೇ ಆದ ಯಾವುದೇ ಸಂಸ್ಥೆಗಳನ್ನು ಇನ್ನೂ ಪ್ರಾರಂಭಿಸದೇ ಇರುವುದು. ಖಾಸಗಿ ಆಸ್ಪತ್ರೆಗಳು ಉಚಿತ ಚಿಕಿತ್ಸೆ ಕೊಡಲು ಮುಂದೆ ಬಂದರೂ ಕೆಲವೊಮ್ಮೆ ಕೆಲವು ಉನ್ನತ ಪರೀಕ್ಷೆಗಳನ್ನು ಮಾಡಲು ಸರಕಾರಿ ವ್ಯವಸ್ಥೆಗಳೇ ಸಮಸ್ಯೆಯನ್ನು ತಂದೊಡ್ಡುತ್ತವೆ ಎಂದರು.

ಮಾನಸಿಕ ಆರೋಗ್ಯ ಯೋಗಕ್ಷೇಮ ಕಾಯ್ಕೆ-೨೦೧೭ರಂತೆ ರೋಗಿಯ ಗೌಪ್ಯತೆ, ರೋಗಿಯ ಕಾನೂನು ಹಕ್ಕುಗಳು, ರೋಗಿಗೆ ಮಾನವ ಹಕ್ಕುಗಳು, ಬಡತನ ಇದ್ದರೆ ಅಥವಾ ಬಿಪಿಎಲ್ ಕಾರ್ಡ್ ಇಲ್ಲದೇ ಇದ್ದರೂ ಉಚಿತ ಚಿಕಿತ್ಸೆ ಹಕ್ಕು ಇದ್ದರೂ, ಅಧಿಕಾರಿಗಳ ಅಸಡ್ಡೆಯಿಂದ ಇವ್ಯಾವುವೂ ಮಾನಸಿಕ ರೋಗಿಗಳಿಗೆ ಸಿಗುತ್ತಿಲ್ಲ ಎಂದವರು ಹೇಳಿದರು.

ರಚನೆಯಾಗದ ರಿವ್ಯೆ ಬೋರ್ಡ್: ಈ ಕಾಯ್ದೆ ಜಾರಿಯಾಗಬೇಕಿದ್ದರೆ ಪ್ರತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾವಾರು ರಿವ್ಯೆ ಬೋರ್ಡ್ ರಚನೆಯಾಗಬೇಕು. ಈ ಬಗ್ಗೆ ನ್ಯಾಯಾಲಯದ ಆದೇಶ ಹಾಗೂ ನಿರ್ದೇಶನ ಇದ್ದರು ಕೂಡಾ ಸರಕಾರ ಇನ್ನು ಕೂಡಾ ಜಿಲ್ಲಾವಾರು ಸಮಿತಿಗಳನ್ನು ನೇಮಕ ಮಾಡಿಲ್ಲ. ಸರಕಾರ ಮೊದಲು ತುರ್ತಾಗಿ ಈ ಸಮಿತಿಗಳನ್ನು ರಚಿಸಬೇಕು ಎಂದವರು ಆಗ್ರಹಿಸಿದರು.

ಇದರಿಂದಾಗಿಯೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಬಹಳಷ್ಟು ಅನ್ಯಾಯ ಆಗುತ್ತಾ ಇದೆ. ಮಾನಸಿಕ ಅಸ್ವಸ್ಥರು ಹಾಗೂ ನಿರ್ಗತಿಕರು ಕೂಡಾ ನಮ್ಮಂತೆ ಬದುಕುವ ಹಕ್ಕನ್ನು ಹೊಂದಿದ್ದು, ಸರಕಾರ ತಕ್ಷಣವೇ ಇಂಥವರ ಚಿಕಿತ್ಸೆ ಹಾಗೂ ಯೋಗಕ್ಷೇಮಕ್ಕೆ ವ್ಯವಸ್ಥೆ ಮಾಡಬೇಕು ಎಂದು ಡಾ.ಪಿ.ವಿ.ಭಂಡಾರಿ ಒತ್ತಾಯಿಸಿದ್ದಾರೆ.

ರಸ್ತೆಗಳಲ್ಲಿ ಅಲೆಯುವ ಶೇ.30ರಷ್ಟು ಮಂದಿ ಮನೋ ರೋಗಿಗಳು

ರಸ್ತೆಗಳಲ್ಲಿ ಓಡಾಡುತ್ತಾ ಮನೆ ಇಲ್ಲದೆ ಇರುವ ವ್ಯಕ್ತಿಗಳಲ್ಲಿ ಶೇ.೩೦ರಷ್ಟು ಮಂದಿ ವಿವಿಧ ರೀತಿಯ, ವಿವಿಧ ಮಟ್ಟದ ಮನೋರೋಗಗಳಿಂದ ಬಳಲುತ್ತಿರುತ್ತಾರೆ. ಇಚ್ಛಿತ ಚಿತ್ತವಿಕಲತೆ, ತೀವ್ರ ಬೈಪೋಲಾರ್ ಅಸ್ವಸ್ಥತೆ, ತೀವ್ರ ಗೀಳುರೋಗ, ತೀವ್ರ ಖಿನ್ನತೆ, ತಲೆಗೆ ಪೆಟ್ಟುಬಿದ್ದು ಉಂಟಾದ ಆರ್ಗಾನಿಕ್ ಬ್ರೈನ್ ಸಿಂಡ್ರೋಮ್‌ನಿಂದಾಗಿ ಬಹಳಷ್ಟು ಮಂದಿ ಮನೆಬಿಟ್ಟು ನೂರರಿಂದ ಸಾವಿರಾರು ಕಿ.ಮೀ. ನಡೆದು ಯಾ ಟಿಕೇಟ್ ಇಲ್ಲದೇ ಪ್ರಯಾಣಿಸು ವುದು ಸಾಮಾನ್ಯ ಸಂಗತಿಯಾಗಿದೆ.

ಕಾಯಿಲೆಯ ಕಾರಣದಿಂದ ಇವರು ಒಬ್ಬರೇ ರಸ್ತೆಯಲ್ಲಿ ಓಡಾಡುವುದು ಹಾಗೂ ವೈಯಕ್ತಿಕ ಸ್ವಚ್ಛತೆ ಇಲ್ಲದೇ ಇರುವುದು ಇವರ ಸಾಮಾನ್ಯ ಲಕ್ಷಣಗಳಾಗಿವೆ. ಇಂತಹವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಸರಕಾರದ ಕರ್ತವ್ಯವೇ ಆಗಿದೆ ಎಂದು ಡಾ.ಪಿ.ವಿ.ಭಂಡಾರಿ ಹೇಳಿದರು.

ಮಹಿಳೆಯರು ಸೇರಿದಂತೆ ಮಾನಸಿಕ ಅಸ್ವಸ್ಥರ ಕುರಿತಂತೆ ಸರಕಾರಿ ಇಲಾಖೆಗಳು ತೋರಿದ, ತೋರುತ್ತಿರುವ ನಿರ್ಲಕ್ಷ್ಯ, ಅಸಡ್ಡೆಯ ಹತ್ತಾರು ಉದಾಹರಣೆಗಳನ್ನು ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ನೀಡಿದರು. ಮಹಿಳಾ ಮಾನಸಿಕ ಆಸ್ವಸ್ಥರಿಗೆ ಆಶ್ರಯ ನೀಡಲು, ರಕ್ಷಣೆ ಒದಗಿಸಲು ಜಿಲ್ಲಾಡಳಿತ ಕೂಡಲೇ ಗಮನ ಹರಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಿಶು ಶೆಟ್ಟಿ ಆಗ್ರಹಿಸಿದರು.

ಜಿಲ್ಲಾಸ್ಪತ್ರೆ ಅಥವಾ ಮಹಿಳಾ ನಿಲಯದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯರಿಗೆ ಆಶ್ರಯ ಹಾಗೂ ಸೂಕ್ತ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ಒಂದನ್ನು ತೆರೆಯಬೇಕು. ಅವರಿಗಾಗಿ ಪುನರ್ವಸತಿ ಕೇಂದ್ರವನ್ನು ತೆರೆಯಬೇಕು ಎಂದು ಡಾ.ಪಿ.ವಿ.ಭಂಡಾರಿ ಹಾಗೂ ವಿಶು ಶೆಟ್ಟಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News