ಮಾನವ ಹಕ್ಕುಗಳ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಬಂಧನಕ್ಕೆ ಆಮ್ನೆಸ್ಟಿ ಇಂಡಿಯಾ ಖಂಡನೆ

Update: 2022-06-25 18:54 GMT
Photo: Indianexpress

ಹೊಸದಿಲ್ಲಿ: ಮಾನವ ಹಕ್ಕುಗಳ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಬಂಧನವನ್ನು ಆಮ್ನೆಸ್ಟಿ ಇಂಡಿಯಾ ಖಂಡಿಸಿದ್ದು, ಭಾರತೀಯ ಅಧಿಕಾರಿಗಳ ಧೋರಣೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ತನ್ನ ಅಧಿಕೃತ ಟ್ವೀಟ್‌ನಲ್ಲಿ, ತೀಸ್ತಾ ಸೆಟಲ್ವಾಡ್‌ ರ ಬಂಧನವು ನಾಗರಿಕ ಸಮಾಜಕ್ಕೆ ತಣ್ಣನೆಯ ಸಂದೇಶವನ್ನು ಕಳುಹಿಸುತ್ತದೆ ಮತ್ತು ದೇಶದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿನ ಸಾಧ್ಯತೆಯನ್ನು ಕುಗ್ಗಿಸುತ್ತದೆ ಎಂದು ಹೇಳಿದೆ.

2002 ರ ಗುಜರಾತ್ ಗಲಭೆಯ ನಂತರ ರಚಿಸಲಾದ ‘ಸಿಟಿಝನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್’ ಎಂಬ ಎನ್‌ಜಿಒ ನಡೆಸುತ್ತಿರುವ ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಪತ್ರಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಶನಿವಾರ ಮುಂಬೈನಲ್ಲಿ ಬಂಧಿಸಿದೆ.‌

"ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರನ್ನು ಭಾರತೀಯ ಅಧಿಕಾರಿಗಳು ಬಂಧಿಸಿರುವುದು, ಅವರ ಮಾನವ ಹಕ್ಕುಗಳ ದಾಖಲೆಯನ್ನು ಪ್ರಶ್ನಿಸುವ ಧೈರ್ಯವಿರುವವರ ವಿರುದ್ಧದ ನೇರ ಪ್ರತೀಕಾರವಾಗಿದೆ. ಇದು ನಾಗರಿಕ ಸಮಾಜಕ್ಕೆ ತಣ್ಣನೆಯ ಸಂದೇಶವನ್ನು ಕಳುಹಿಸುತ್ತದೆ ಮತ್ತು ದೇಶದಲ್ಲಿ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶವನ್ನು ಮತ್ತಷ್ಟು ಕುಗ್ಗಿಸುತ್ತದೆ. ಭಾರತೀಯ ಅಧಿಕಾರಿಗಳು ತಕ್ಷಣ ತೀಸ್ತಾ ಅವರನ್ನು ಬಿಡುಗಡೆ ಮಾಡಬೇಕು ಮತ್ತು ಭಾರತೀಯ ನಾಗರಿಕ ಸಮಾಜ ಮತ್ತು ಮಾನವ ಹಕ್ಕುಗಳ ರಕ್ಷಕರ ಮೇಲಿನ ಕಿರುಕುಳವನ್ನು ಕೊನೆಗೊಳಿಸಬೇಕು" ಎಂದು ಟ್ವೀಟ್‌ ಮೂಲಕ ಒತ್ತಾಯಿಸಿದೆ.

ಜೂನ್ 24 ರಂದು, ಭಾರತದ ಸರ್ವೋಚ್ಚ ನ್ಯಾಯಾಲಯವು ಗಲಭೆಯಲ್ಲಿ ಕ್ರೂರವಾಗಿ ಕೊಲ್ಲಲ್ಪಟ್ಟ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಅವರು ಮಾಡಿದ "ದೊಡ್ಡ ಪಿತೂರಿ"ಯ ಆರೋಪಗಳನ್ನು ತಳ್ಳಿಹಾಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News