ನಾಲ್ಕನೇ ಮಹಡಿಯಿಂದ ಹೊರಕ್ಕೆ ಎಸೆದು ಮಹಿಳೆಯ ಹತ್ಯೆ; ಪತಿ ಸೇರಿ ಮೂವರ ಬಂಧನ

Update: 2022-06-26 03:32 GMT

ಆಗ್ರಾ: ಸುಮಾರು 30 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಪತಿ ಹಾಗೂ ಇತರ ನಾಲ್ವರು ಥಳಿಸಿ, ಮನೆಯ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಹೊರಕ್ಕೆಸೆದು ಅಮಾನುಷವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ಮಹಿಳೆ, ಗಂಡನಿಂದ ಬೇರ್ಪಟ್ಟ ಬಳಿಕ ಫೇಸ್‍ಬುಕ್‍ನಲ್ಲಿ ಪರಿಚಯವಾದ ಸ್ನೇಹಿತನ ಜತೆಗೆ ತೇಜ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಮೃತ ಮಹಿಳೆಯ ಪತಿ ಆಕಾಶ್ ಗೌತಮ್ ಸೇರಿದಂತೆ ಮೂವರನ್ನು ಈ ಸಂಬಂಧ ಬಂಧಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಹತ್ಯೆ) ಮತ್ತು 34 (ಸಮಾನ ಉದ್ದೇಶದಿಂದ ಹಲವು ವ್ಯಕ್ತಿಗಳ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

"ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವಂತೆ ವಿವಾಹಿತ ಮಹಿಳೆಯನ್ನು ರಿತಿಕಾ ಸಿಂಗ್ ಎಂದು ಗುರುತಿಸಲಾಗಿದ್ದು, ಈಕೆ ಫೇಸ್‍ಬುಕ್ ಫ್ರೆಂಡ್ ವಿಪುಲ್ ಅಗರ್‍ವಾಲ್ ಜತೆ ನಗ್ಲಾ ಮೆವಾಟಿ ಎಂಬಲ್ಲಿ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು. ಶುಕ್ರವಾರ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ" ಎಂದು ಆಗ್ರಾ ಎಸ್ಪಿ ಸುಧೀರ್ ಕುಮಾರ್ ಸಿಂಗ್ ಹೇಳಿದ್ದಾರೆ.

ಇದಕ್ಕೂ ಮುನ್ನ 2014ರಲ್ಲಿ ಗಾಝಿಯಾಬಾದ್‍ನಲ್ಲಿ ವಾಸವಿದ್ದ ರಿತಿಕಾ, ಅಶೋಕ್ ಗೌತಮ್‍ನನ್ನು ವಿವಾಹವಾಗಿ 2018ರಲ್ಲಿ ಬೇರ್ಪಟ್ಟಿದ್ದರು. ಶುಕ್ರವಾರ ಆಕಾಶ್ ಗೌತಮ್, ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರ ಜತೆ ಅಪಾರ್ಟ್‍ಮೆಂಟ್‍ಗೆ ಬಂದು ರಿತಿಕಾ ಹಾಗೂ ಆಕೆಯ ಪ್ರಿಯಕರನ ಜತೆ ವಾಗ್ವಾದ ನಡೆಸಿ, ಇಬ್ಬರ ಮೇಲೂ ಹಲ್ಲೆ ನಡೆಸಿದರು" ಎಂದು ವಿವರಿಸಿದ್ದಾರೆ.

ಅಗರ್‍ವಾಲ್ ನೀಡಿರುವ ದೂರಿನ ಅನ್ವಯ, ಆರೋಪಿಗಳು ಕೈಗಳನ್ನು ಕಟ್ಟಿ ಬಾತ್‍ರೂಂನಲ್ಲಿ ಅಗರ್‍ವಾಲ್ ಅವರನ್ನು ಕೂಡಿ ಹಾಕಿದ್ದಾರೆ. ರಿತಿಕಾ ಅವರ ಕೈಗಳನ್ನೂ ಕಟ್ಟಿ ಬಾಲ್ಕನಿಯಿಂದ ಹೊರಕ್ಕೆ ಎಸೆದು ಹತ್ಯೆ ಮಾಡಿದರು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News