'ಜ್ಯಾಕ್‌ ಸ್ಪಾರೋ' ಆಗಿ ನಟಿಸಲು ಜಾನಿ ಡೆಪ್‌ಗೆ ಕ್ಷಮೆಯಾಚನೆಯೊಂದಿಗೆ ರೂ. 2,535 ಕೋಟಿ ಆಫರ್‌ ನೀಡಿದ ಡಿಸ್ನಿ

Update: 2022-06-26 11:10 GMT
ಜಾನಿ ಡೆಪ್‌ (PTI)

ಹಾಲಿವುಡ್: ʼಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ʼ ಫ್ರಾಂಚೈಸಿಯ ಜನಪ್ರಿಯ ತಾರೆ ಜಾನಿ ಡೆಪ್ ಅವರನ್ನು ಮರಳಿ ಫ್ರಾಂಚೈಸಿಗೆ ತರುವ ಸಲುವಾಗಿ ಡಿಸ್ನಿ ತನ್ನ ಪ್ರಯತ್ನವನ್ನು ಮಾಡುತ್ತಿದೆ. ಪತ್ನಿ ಪೀಡಕ ಎಂಬ ಆರೋಪ ಜಾನಿ ಡೆಪ್‌ ವಿರುದ್ಧ ಕೇಳಿ ಬಂದ ಬಳಿಕ ಅವರು ಹಲವು ಯೋಜನೆಗಳನ್ನು ಕಳೆದುಕೊಂಡಿದ್ದರು. ಅದರಲ್ಲಿ ಪ್ರಮುಖವಾದದ್ದು ʼಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ʼ ಚಿತ್ರಗಳ ಸರಣಿ. 

ಕಡಲುಗಳ್ಳರ ಕಥೆಯನ್ನು ಹೊಂದಿರುವ ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ ಚಿತ್ರದ ಪ್ರಮುಖ ಜ್ಯಾಕ್‌ ಸ್ಪ್ಯಾರೋ ಪಾತ್ರವು ಜಾನಿ ಡೆಪ್‌ ಅವರಿಗೆ ಇನ್ನಿಲ್ಲದ ಜನಪ್ರಿಯತೆಯನ್ನು ತಂದು ನೀಡಿತ್ತು. ಈ ಚಿತ್ರಗಳ ಸರಣಿಯನ್ನು ಜಾನಿ ಡೆಪ್ ಇಲ್ಲದೆ ಅರಗಿಸಿಕೊಳ್ಳಲೂ ಅಭಿಮಾನಿಗಳು ತಯಾರಿಲ್ಲದಷ್ಟು ಪಾತ್ರಕ್ಕೆ ಜಾನಿ ಡೆಪ್‌ ಹೊಂದಿಕೊಂಡಿದ್ದಾರೆ. ಆದರೆ, ಜಾನಿ ಡೆಪ್‌ ಅವರ ಪತ್ನಿ ಅಂಬರ್‌ ಹರ್ಡ್‌ ಪತಿಯ ವಿರುದ್ಧ ಮಾಡಿರುವ ಆರೋಪದ ಬಳಿಕ ಡಿಸ್ನಿ ಕಂಪೆನಿಯು ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ ಫ್ರಾಂಚೈಸಿಯ ಎಲ್ಲಾ ಚಿತ್ರಗಳಿಂದ ಜಾನಿ ಡೆಪ್‌ ಅವರನ್ನು ಕೈ ಬಿಟ್ಟಿತ್ತು.

ಆದರೆ, ಇತ್ತೀಚೆಗೆ ಅಂಬರ್ ಹರ್ಡ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಗೆದ್ದಾಗಿನಿಂದ, ಜಾನಿ ಡೆಪ್ ತಮ್ಮ ವೃತ್ತಿಜೀವನವನ್ನು ಮತ್ತೆ ಟ್ರ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಪೈರೇಟ್ಸ್ ಆಫ್ ದಿ ಕೆರಿಬಿಯನ್‌ ಚಿತ್ರದಿಂದ ಕೈಬಿಟ್ಟಿರುವುದಕ್ಕೆ ಕ್ಷಮೆಯಾಚಿಸುವಂತೆ ಅಭಿಮಾನಿಗಳು ಡಿಸ್ನಿಯನ್ನು ನಿರಂತರವಾಗಿ ಕೇಳುತ್ತಿರುವ ನಡುವೆಯೇ, ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್ ಫ್ರ್ಯಾಂಚೈಸಿಯಲ್ಲಿ ಜ್ಯಾಕ್ ಸ್ಪ್ಯಾರೋ ಆಗಿ ಹಿಂತಿರುಗಲು 2,535 ಕೋಟಿ ರೂಪಾಯಿಗಳ ಪ್ರಸ್ತಾಪದೊಂದಿಗೆ ಕ್ಷಮೆಯಾಚಿಸುವ ಪತ್ರವನ್ನು ಡಿಸ್ನಿ ಜಾನಿಡೆಪ್‌ ಗೆ ಕಳುಹಿಸಿದೆ ವರದಿಯಾಗಿದೆ.

ಅದಾಗ್ಯೂ, ಡಿಸ್ನಿಯ ಕ್ಷಮೆಯನ್ನು ಜಾನಿ ಡೆಪ್‌ ಒಪ್ಪಿಕೊಂಡು ಸಿನೆಮಾದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆಯೇ ಎಂಬುದು ಇನ್ನೂ ಧೃಡೀಕರಣಗೊಂಡಿಲ್ಲ. ಪತ್ನಿಯ ವಿರುದ್ಧದ ಮಾನನಷ್ಟ ವಿಚಾರಣೆಯ ಸಂದರ್ಭದಲ್ಲಿ, ಡಿಸ್ನಿ ತನಗೆ $300 ಮಿಲಿಯನ್ ಪಾವತಿಸಿದರೂ ತಾನು ಫ್ರಾಂಚೈಸಿಗೆ ಹಿಂತಿರುಗುವುದಿಲ್ಲ ಎಂದು ಜಾನಿ ಡೆಪ್ ಹೇಳಿದ್ದರು. ಆದರೆ, ಅಭಿಮಾನಿಗಳು ಮುಂದಿನ ಪೈರೇಟ್ಸ್ ಆಫ್ ದಿ ಕೆರಿಬಿಯನ್ ಚಿತ್ರದಲ್ಲಿ ಜ್ಯಾಕ್ ಸ್ಪ್ಯಾರೋ ಪಾತ್ರದಲ್ಲಿ ಜಾನಿ ಡೆಪ್‌ ರನ್ನು ನೋಡಲು ತೀವ್ರವಾಗಿ ಬಯಸುತ್ತಿದ್ದಾರೆ. ಹಣಕ್ಕಲ್ಲದಿದ್ದರೂ ಅಭಿಮಾನಿಗಳಿಗೋಸ್ಕರವಾದರೂ ಜಾನಿ ಡೆಪ್‌ ಪೈರೇಟ್‌ ಆಗಿ ಮರಳಿ ಬರಲಿದ್ದಾರೆಯೇ? ಎಂಬ ಚರ್ಚೆ ಈಗ ಜೋರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News