ಪಂಚಾಂಗ ಬಳಸಿ ರಾಕೆಟ್ ಉಡಾವಣೆ ಎಂದ ನಟ ಮಾಧವನ್: ವ್ಯಾಪಕ ಟ್ರೋಲ್ ಬಳಿಕ ಸ್ಪಷ್ಟೀಕರಣ

Update: 2022-06-26 13:41 GMT

ಚೆನ್ನೈ: ಮಂಗಳ ಗ್ರಹದ ಅಂಗಳಕ್ಕೆ ರಾಕೆಟ್‌ ಕಳಿಸಲು ಇಸ್ರೋ (ISRO)ಗೆ ಹಿಂದೂ ಕ್ಯಾಲೆಂಡರ್‌, ಪಂಚಾಂಗ ನೆರವಾಗಿದೆ ಎಂದು ಹೇಳಿ ವ್ಯಾಪಕ ಟ್ರೋಲ್ ಗೆ ಒಳಗಾಗಿರುವ ಬಹುಭಾಷಾ ನಟ ಮಾಧವನ್‌ ತನ್ನ ಹೇಳಿಕೆ ಅಜ್ಞಾನ ಎಂದು ಒಪ್ಪಿಕೊಂಡಿದ್ದು, ಸ್ಪಷ್ಟನೆ ನೀಡಿದ್ದಾರೆ. 

ತನ್ನ ವಿರುದ್ಧ ವ್ಯಕ್ತವಾಗುತ್ತಿರುವ ಟ್ರೋಲ್ ಗಳ ಸುದ್ದಿಯನ್ನು ಮರು ಟ್ವೀಟ್‌ ಮಾಡಿರುವ ನಟ, “ಅಲ್ಮನಾಕ್‌ ಅನ್ನು ತಮಿಳಿನಲ್ಲಿ ಪಂಚಾಂಗವೆಂದು ಕರೆದ ನಾನು ಇದಕ್ಕೆ ಅರ್ಹನಾಗಿದ್ದೇನೆ. ನನ್ನದು ತುಂಬಾ ಅಜ್ಞಾನ. ಇದು, ಮಂಗಳಯಾನದಲ್ಲಿ ಕೇವಲ 2 ಎಂಜಿನ್‌ಗಳಿಂದ ಏನು ಸಾಧಿಸಿದ್ದೇವೆ ಎಂಬ ಅಂಶದಿಂದ ದೂರವಿಡಲು ಸಾಧ್ಯವಿಲ್ಲ. ಅದೇ ಒಂದು ಸಾಧನೆ. @NambiNOfficial (ಅವರ) ವಿಕಾಸ್‌ ಎಂಜಿನ್ ಒಂದು ರಾಕ್‌ಸ್ಟಾರ್” ಎಂದು ಬರೆದಿದ್ದಾರೆ. 

ಇದನ್ನೂ ಓದಿ: ಇಸ್ರೋದ ಮಂಗಳಯಾನಕ್ಕೆ 'ಪಂಚಾಂಗ' ಸಹಾಯ ಮಾಡಿತು ಎಂದು ಹೇಳಿ ಟ್ರೋಲ್‍ಗೀಡಾದ ನಟ ಆರ್. ಮಾಧವನ್

ಪಂಚಾಂಗದಲ್ಲಿ ನೀಡಲಾದ ಮಾಹಿತಿಯನ್ನು ಬಳಸಿದ್ದರಿಂದ ಇಸ್ರೋ ವಿಜ್ಞಾನಿಗಳು ಮಂಗಳ ಕಕ್ಷೆಯನ್ನು ತಲುಪಲು ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ ಎಂದು ತಮ್ಮ ಚಿತ್ರದ ಪ್ರಚಾರದ ಕಾರ್ಯಕ್ರಮದಲ್ಲಿ ಮಾಧವನ್‌ ಹೇಳಿದ್ದರು. ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟ್ರೋಲ್ ಗೆ ಒಳಗಾಗಿತ್ತು. 

ಆರ್ ಮಾಧವನ್ ಅವರ ಚೊಚ್ಚಲ ನಿರ್ದೇಶನದ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರಲ್ಲಿ ಮಾಧವನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರದ ಮಧ್ಯೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ಮಂಗಳಯಾನದ ಕುರಿತು ನೀಡಿದ್ದ ಹೇಳಿಕೆ ಸಾಕಷ್ಟು ಚರ್ಚೆಗೆ, ವ್ಯಂಗ್ಯಕ್ಕೆ ಗುರಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News