ಏಕನಾಥ್ ಶಿಂಧೆಗೆ ಶಿವಸೇನೆಯದ್ದೇ ಚಿಹ್ನೆಯನ್ನು ಪಡೆದುಕೊಳ್ಳುವುದು ಸುಲಭವೇನಿಲ್ಲ...

Update: 2022-06-26 16:40 GMT

ಹೊಸದಿಲ್ಲಿ,ಜೂ.26: ಶಿವಸೇನೆಯ ಹೆಚ್ಚಿನ ಶಾಸಕರ ಬೆಂಬಲದೊಂದಿಗೆ ಆಡಳಿತ ಮಹಾವಿಕಾಸ ಅಘಾಡಿ (ಎಂವಿಎ)ಯ ಸರಕಾರವನ್ನು ಉರುಳಿಸುವ ಬೆದರಿಕೆಯೊಡ್ಡಿರುವ ಮಹಾರಾಷ್ಟ್ರ ಸಚಿವ ಏಕನಾಥ್ ಶಿಂದೆಯವರಿಗೆ ತನ್ನದೇ ‘ನಿಜವಾದ ಶಿವಸೇನೆ’ ಎಂದು ಹಕ್ಕು ಸಾಧಿಸುವುದು ಸುಲಭವಲ್ಲ.

ಶಿಂದೆ ಮತ್ತು ಶಿವಸೇನೆ ಬಂಡುಕೋರರು ಪಕ್ಷಾಂತರ ವಿರೋಧಿ ಕಾಯ್ದೆಯ ಕಾನೂನಾತ್ಮಕ ಅಂಶಗಳನ್ನು ಎದುರಿಸುತ್ತಿರುವಾಗ ಅವರೆದುರು ಇನ್ನೊಂದು ಸಮಸ್ಯೆ ಉಳಿದುಕೊಂಡಿದೆ. ಅದು ಯಾವುದು ನಿಜವಾದ ಶಿವಸೇನೆ ಎನ್ನುವುದನ್ನು ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡುವುದು ಮತ್ತು ಪಕ್ಷದ ಚಿಹ್ನೆಯ ಮೇಲೆ ಯಾರು ಹಕ್ಕನ್ನು ಹೊಂದಲಿದ್ದಾರೆ ಎನ್ನುವುದು. ಇದು ರಾಜ್ಯದಲ್ಲಿಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ನಡುವೆ ಉದ್ಭವಿಸಿರುವ ಪ್ರಶ್ನೆಯಾಗಿದೆ.

1968ರ ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶವು ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವ ಮತ್ತು ಚಿಹ್ನೆಗಳ ಹಂಚಿಕೆಯ ಚುನಾವಣಾ ಆಯೋಗದ ಅಧಿಕಾರದೊಂದಿಗೆ ವ್ಯವಹರಿಸುತ್ತದೆ. ಶಾಸಕಾಂಗದ ಹೊರಗೆ ರಾಜಕೀಯ ಪಕ್ಷದ ವಿಭಜನೆಯ ಪ್ರಶ್ನೆ ಉದ್ಭವಿಸಿದಾಗ ಈ ಆದೇಶದ 15ನೇ ಪ್ಯಾರಾ,‘ಮಾನ್ಯತೆ ಪಡೆದ ರಾಜಕೀಯ ಪಕ್ಷದ ಹಲವಾರು ಬಣಗಳು ಮತ್ತು ಗುಂಪುಗಳಿದ್ದಾಗ ಮತ್ತು ಅವುಗಳ ಪೈಕಿ ಪ್ರತಿಯೊಂದೂ ತಾನೇ ನಿಜವಾದ ಪಕ್ಷವೆಂದು ಹೇಳಿಕೊಳ್ಳುವಾಗ ಆಯೋಗವು ಎಲ್ಲ ಲಭ್ಯ ಅಂಶಗಳನ್ನು ಮತ್ತು ಪ್ರಕರಣದ ಸಂದರ್ಭವನ್ನು ಗಣನೆಗೆ ತೆಗೆದುಕೊಂಡ ಮತ್ತು ಅವುಗಳ ಪ್ರತಿನಿಧಿಗಳು ಮತ್ತು ಇತರ ಆಸಕ್ತ ವ್ಯಕ್ತಿಗಳ ಅಹವಾಲುಗಳನ್ನು ಆಲಿಸಿದ ಬಳಿಕ ಇಂತಹ ಒಂದು ಪ್ರತಿಸ್ಪರ್ಧಿ ಬಣ ಅಥವಾ ಗುಂಪು ಮಾನ್ಯತೆ ಹೊಂದಿರುವ ರಾಜಕೀಯ ಪಕ್ಷವಾಗಿದೆ ಅಥವಾ ಯಾವುದೂ ಈ ಅರ್ಹತೆಯನ್ನು ಪಡೆದಿಲ್ಲ ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳಬಹುದು ಮತ್ತು ಅದರ ಈ ನಿರ್ಧಾರಕ್ಕೆ ಇಂತಹ ಎಲ್ಲ ಪ್ರತಿಸ್ಪರ್ಧಿ ಬಣಗಳು ಮತ್ತು ಗುಂಪುಗಳು ಬದ್ಧವಾಗಿರುತ್ತವೆ ’ ಎಂದು ಹೇಳುತ್ತದೆ.

ಇದು ಮಾನ್ಯತೆ ಹೊಂದಿರುವ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳಲ್ಲಿಯ ವಿವಾದಗಳಿಗೆ ಅನ್ವಯಿಸುತ್ತದೆ. ನೋಂದಾಯಿತ,ಆದರೆ ಮಾನ್ಯತೆ ಹೊಂದಿರದ ಪಕ್ಷಗಳಲ್ಲಿ ಇಂತಹ ವಿಭಜನೆಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಚುನಾವಣಾ ಆಯೋಗವು ಆಂತರಿಕವಾಗಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ಅಥವಾ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸೂಚಿಸುತ್ತದೆ.

ಮಹಾರಾಷ್ಟ್ರದಲ್ಲಿ ಬಂಡಾಯ ಬಣ 41 ಶಾಸಕರ ಬೆಂಬಲವನ್ನು ಹೊಂದಿರುವುದಾಗಿ ಹೇಳಿಕೊಳ್ಳುತ್ತಿದೆ ಮತ್ತು ಶಿವಸೇನೆಯ ಚಿಹ್ನೆಯಾದ ‘ಬಿಲ್ಲು ಮತ್ತು ಬಾಣ’ವನ್ನು ತನ್ನದಾಗಿಸಿಕೊಳ್ಳಲು ಚುನಾವಣಾ ಆಯೋಗದ ಬಾಗಿಲನ್ನು ತಟ್ಟಲಿದೆ. ಪ್ರತಿಸ್ಪರ್ಧಿ ಬಣಗಳು ನೋಂದಾಯಿತ ಮತ್ತು ಮಾನ್ಯತೆ ಹೊಂದಿರುವ ರಾಜಕೀಯ ಪಕ್ಷಕ್ಕೆ ಸೇರಿದ್ದಾಗ ಯಾವುದೇ ಪಕ್ಷದ ಪರವಾಗಿ ಅಥವಾ ಪರವಲ್ಲದೆ ಚುನಾವಣಾ ಆಯೋಗವು ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು 1968ರ ಆದೇಶದ 15ನೇ ಪ್ಯಾರಾ ಹೇಳುತ್ತದೆ.

ಈ ಹಿಂದೆ 1968ಕ್ಕೂ ಮೊದಲು,ಅಂದರೆ 1964ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದಲ್ಲಿ ಒಡಕುಂಟಾಗಿದ್ದಾಗ ತನಗೆ ಸಿಪಿಐ (ಮಾರ್ಕ್ಸ್ವಾದಿ) ಎಂದು ಮಾನ್ಯತೆಯನ್ನು ನೀಡುವಂತೆ ಒಂದು ಬಣವು ಆಯೋಗದ ಮೆಟ್ಟಿಲನ್ನೇರಿತ್ತು. ಅದು ತನ್ನನ್ನು ಬೆಂಬಲಿಸಿದ್ದ ಆಂಧ್ರಪ್ರದೇಶ, ಕೇರಳ ಮತ್ತು ಪ.ಬಂಗಾಳಗಳ ಸಂಸದರು ಮತ್ತು ಶಾಸಕರ ಪಟ್ಟಿಯನ್ನು ಸಲ್ಲಿಸಿತ್ತು. ಈ ಸಂಸದರು ಮತ್ತು ಶಾಸಕರು ಈ ಮೂರೂ ರಾಜ್ಯಗಳಲ್ಲಿ ಶೇ.4ಕ್ಕೂ ಅಧಿಕ ಮತಗಳನ್ನು ಗಳಿಸಿದ್ದಾರೆ ಎನ್ನುವುದನ್ನು ಗಮನಿಸಿದ್ದ ಆಯೋಗವು ಭಿನ್ನಮತೀಯ ಬಣಕ್ಕೆ ಸಿಪಿಐ (ಎಂ) ಎಂದು ಮಾನ್ಯತೆ ನೀಡಿತ್ತು. ಇತ್ತೀಚಿಗೆ 2017ರಲ್ಲಿ ಸಮಾಜವಾದಿ ಪಕ್ಷದಲ್ಲಿ ಒಡಕುಂಟಾದಾಗ ಆಯೋಗವು ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ ಅವರ ಬಳಿಯಲ್ಲಿದ್ದ ಪಕ್ಷದ ಚಿಹ್ನೆ ‘ಸೈಕಲ್’ನ್ನು ಕಿತ್ತುಕೊಂಡು ವಿಭಜನೆಗೊಂಡಿದ್ದ ಬಣದ ನಾಯಕ ಅಖಿಲೇಶ್ ಯಾದವಗೆ ನೀಡಿತ್ತು. ಅದೇ ವರ್ಷ ಎಐಎಡಿಎಂಕೆಯ ಒ.ಪನ್ನೀರ್ ಸೆಲ್ವಂ ಮತ್ತು ವಿ.ಕೆ.ಶಶಿಕಲಾ ನೇತೃತ್ವದ ಬಣಗಳು ‘ಎರಡು ಎಲೆಗಳು’ ಚುನಾವಣೆ ಚಿಹ್ನೆಗಾಗಿ ಕಚ್ಚಾಟವಾಡಿದ್ದು, ಅಂತಿಮವಾಗಿ ಅದು ಪನ್ನೀರ ಸೆಲ್ವಂ ಬಣಕ್ಕೆ ದಕ್ಕಿತ್ತು.
ಕಳೆದ ವರ್ಷ ಚುನಾವಣಾ ಆಯೋಗವು ಪ್ರತಿಸ್ಪರ್ಧಿ ಗುಂಪುಗಳ ನಡುವಿನ ವಿವಾದವನ್ನು ತಾನು ಇತ್ಯರ್ಥಗೊಳಿಸುವವರೆಗೆ ಲೋಕ ಜನಶಕ್ತಿ ಪಾರ್ಟಿಯ ಹೆಸರು ಅಥವಾ ಅದರ ‘ಬಂಗಲೆ ’ಚಿಹ್ನೆಯನ್ನು ಚಿರಾಗ ಪಾಸ್ವಾನ್ ಮತ್ತು ಪಶುಪತಿ ಕುಮಾರ ಪಾರಸ್ ನೇತೃತ್ವದ ಬಣಗಳು ಬಳಸುವುದನ್ನು ನಿಷೇಧಿಸಿತ್ತು.

ಕೃಪೆ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News