ಪರಿಶ್ರಮದ ಸಾಧನೆಯ ಮೂಲಕ ಗುರುತಿಸುವಂತಾಗಬೇಕು: ದ.ಕ. ಡಿಸಿ ಡಾ.ರಾಜೇಂದ್ರ

Update: 2022-06-26 15:37 GMT

ಕೊಣಾಜೆ: ವೈದ್ಯಕೀಯ ಕ್ಷೇತ್ರದಲ್ಲಿ ಕಲಿಯುವುದಕ್ಕೆ ಅಂತ್ಯ ಎಂಬುದಿಲ್ಲ. ಪರಿಶ್ರಮದ ಮೂಲಕ ಸಾಧನೆ ಮಾಡುವುದರಿಂದ ಸದಾಕಾಲ ನಮ್ಮನ್ನು ಸ್ಮರಣೀಯವಾಗಿಸಬಹುದು. ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭ ಅವರನ್ನು ಆತ್ಮೀಯವಾಗಿ ಮಾನವೀಯ ನೆಲೆಯಲ್ಲಿ ಕಾಣುವುದು ಮುಖ್ಯ ಎಂದು ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಹೇಳಿದರು.

ದೇರಳಕಟ್ಟೆಯ ಯೆನೆಪೊಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕ್ಯಾಂಪಸ್ ನ ಯೆಂಡೂರೆನ್ಸ್ ಒಳಾಂಗಣ ಸಭಾಂಗಣದಲ್ಲಿ ಶನಿವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಬಾಹ್ಯ, ಸಾಮಾಜಿಕ ಒತ್ತಡಗಳಿಗಿಂತಲೂ ನಮ್ಮ ಮನಸ್ಸಿಗೆ ಅಂದುಕೊಂಡದ್ದನ್ನು ಉದ್ದೇಶಿತ ಗುರಿಯೊಂದಿಗೆ ಶಿಸ್ತುಬದ್ಧವಾಗಿ ಸಾಧಿಸಬೇಕು. ವೈದ್ಯಕೀಯ ವಿಜ್ಞಾನದಲ್ಲಿ ಯಾವುದೇ ವಿಷಯವೂ ಸರಳವಲ್ಲ, ಲಘುವಾಗಿ ಸ್ವೀಕರಿಸುವ ಹಾಗಿಲ್ಲ ಎಲ್ಲವೂ  ನಮ್ಮ ಅಧ್ಯಯನ ಹೊಂದಿಕೊಂಡಿದೆ ಎಂದರು.

ಸಮಾಜದಲ್ಲಿ ಏನನ್ನಾದರೂ ಬದಲಾಯಿಸಬೇಕಿದ್ದರೆ ಸುಧಾರಣೆ ತರಬೇಕಿದ್ದರೆ ಇಂತಹದ್ದೇ ವೃತ್ತಿ ಮುಖ್ಯವಾಗು ವುದಿಲ್ಲ . ನಾವು ನಡೆಯುವ ಪಥ ಮುಖ್ಯ. ಆರ್ಥಿಕವಾಗಿ ಮಾತ್ರ ನಾವು ಮೇಲ್ಮಟ್ಟಕ್ಕೆ ಬರುವುದಕ್ಕೆ ನಮ್ಮ ಜ್ಞಾನ ಸೀಮಿತವಾಗಬಾರದು. ದೇಶ ಭದ್ರವಾಗಿರಬೇಕಾದರೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ನಮ್ಮ ಜವಬ್ದಾರಿ. ಜೀವನವೇ ನಮಗೆ ಅತೀ ದೊಡ್ಡ ಪಾಠ ಎಂದು ಹೇಳಿದರು.

ಕಾಸರಗೋಡು ಸರಕಾರಿ ಆಸ್ಪತ್ರೆಯ ಹಿರಿಯ ವೈದ್ಯಕೀಯ ಸಲಹೆಗಾರ ಡಾ. ವೆಂಕಟಗಿರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಮ್ಮ ವೃತ್ತಿ ಧರ್ಮವನ್ನು ನಿಯತ್ತಿನೊಂದಿಗೆ ಪಾಲಿಸಿಕೊಂಡು ಮುಂದುವರಿದಾಗ ಸಮಾಜ ಸಹಜವಾಗಿಯೇ ನಮ್ಮನ್ನು ಗುರುತಿಸುತ್ತದೆ. ನಮ್ಮ ಕೌಶಲ, ಪರಿಶ್ರಮಗಳೊಂದಿಗೆ ಮಾನವೀಯ ಮೌಲ್ಯಗಳು ಕೂಡಾ ನಮ್ಮ ಜೀವನಕ್ಕೆ ಮುಖ್ಯವಾಗುತ್ತದೆ.

ಯೆನೆಪೊಯ ಪರಿಗಣಿತ ವಿಶ್ವವಿದ್ಯಾಲಯದ ಅಧೀನದ ಯೆನೆಪೋಯ ಮೆಡಿಕಲ್ ಕಾಲೇಜಿನ ಡೀನ್ ಡಾ. ಮೂಸಬ್ಬ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೈದರಾಬಾದ್ ನ ಡಾ. ಸಾಯಿಸಾಗರ್  ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿ ಪುರಸ್ಕಾರದ ಜತೆಗೆ ಏಳು ಚಿನ್ನದ ಪದಕಕ್ಕೆ ಪಾತ್ರರಾದರು. ವೈಸ್ ಡೀನ್ ಡಾ. ಅಭಯ್ ನಿರ್ಗುಡೆ, ಸಹಾಯಕ ಡೀನ್ ಡಾ. ಅಶ್ವಿನಿ ದತ್ ಉಪಸ್ಥಿತರಿದ್ದರು.

ಡಾ. ರಾಘವೇಂದ್ರ ಹಾಗೂ ಡಾ. ಗ್ರೀಷ್ಮಾ ಕಾರ್ಯಕ್ರಮ ನಿರೂಪಿಸಿದರು. ಡಾ. ರಾಘವೇಂದ್ರ ಉಪಾಧ್ಯಯ ಪದವೀಧರರ ಹೆಸರು ವಾಚಿಸಿದರು. ಡಾ. ಶೀತಲ್ ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News