ಬೆಲಾರಸ್‌ಗೆ ಪರಮಾಣು ಅಸ್ತ್ರ ಸಾಗಿಸುವ ಕ್ಷಿಪಣಿ ಪೂರೈಕೆ: ರಶ್ಯ

Update: 2022-06-26 16:37 GMT

ಮಾಸ್ಕೊ, ಜೂ.26: ಆಕ್ರಮಣಕಾರಿ ಪಶ್ಚಿಮವನ್ನು ಎದುರಿಸಲು ಬೆಲಾರಸ್‌ಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವ ಸಾಮರ್ಥ್ಯವಿರುವ ಕ್ಷಿಪಣಿಗಳನ್ನು ಒದಗಿಸಲಾಗುವುದು ಎಂದು ರಶ್ಯ ಹೇಳಿದೆ. ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ಮಧ್ಯೆ ನಡೆದ ಮಾತುಕತೆಯ ಸಂದರ್ಭ ಪುಟಿನ್ ಈ ವಾಗ್ದಾನ ನೀಡಿದರು ಎಂದು ರಶ್ಯದ ವಿದೇಶಾಂಗ ಇಲಾಖೆ ಹೇಳಿದೆ. 

ಉಕ್ರೇನ್ ಮೇಲೆ ರಶ್ಯದ ಆಕ್ರಮಣದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ದೇಶಗಳು ರಶ್ಯದ ವಿರುದ್ಧ ನಿರ್ಬಂಧ ಹೇರಿವೆ. ರಶ್ಯದ ಪರ ವಹಿಸಿರುವ ತನ್ನ ವಿರುದ್ಧ ನೆರೆಯ ದೇಶಗಳಾದ ಲಿಥುವೇನಿಯಾ ಮತ್ತು ಪೋಲಂಡ್ ಘರ್ಷಣೆಯ ನೀತಿ ಪ್ರದರ್ಶಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಬೆಲಾರಸ್ ಅಧ್ಯಕ್ಷ ಲುಕಶೆಂಕೊ, ಇದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಲು ನೆರವಾಗುವಂತೆ ಪುಟಿನ್‌ರನ್ನು ಕೋರಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಪುಟಿನ್, ರಶ್ಯ ನಿರ್ಮಿತ ಎಸ್‌ಯು-25 ಜೆಟ್ ವಿಮಾನಗಳ ಆಧುನೀಕರಣ, ಇಸ್ಕಾಂಡರ್-ಎಂ ಕ್ಷಿಪಣಿ ವ್ಯವಸ್ಥೆಯನ್ನು ಒದಗಿಸುವುದಾಗಿ ಭರವಸೆ ನೀಡಿದರು. ಇಸ್ಕಾಂಡರ್ ಕ್ಷಿಪಣಿ ವ್ಯವಸ್ಥೆಯು 2 ನಿರ್ದೇಶಿತ ಕ್ಷಿಪಣಿಯನ್ನು ಹೊಂದಿದ್ದು 500 ಕಿ.ಮೀ ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News