ಕಾಶ್ಮೀರದಲ್ಲಿ ಜಿ-20 ಸಭೆ ನಡೆಸುವ ಭಾರತದ ಯೋಜನೆಗೆ ತಿರಸ್ಕಾರ : ಪಾಕಿಸ್ತಾನ

Update: 2022-06-26 17:39 GMT

ಇಸ್ಲಮಾಬಾದ್, ಜೂ.26: ಕಾಶ್ಮೀರದಲ್ಲಿ ಜಿ-20 ದೇಶಗಳ ಸಭೆ ನಡೆಸುವ ಭಾರತದ ಪ್ರಯತ್ನ ಮತ್ತು ಯೋಜನೆಯನ್ನು ತಿರಸ್ಕರಿಸುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಶನಿವಾರ ಹೇಳಿದ್ದಾರೆ. ಜಿ-20 ಗುಂಪಿನ ಸದಸ್ಯರು ಕಾನೂನು ಮತ್ತು ನ್ಯಾಯದ ಅಗತ್ಯತೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿರುತ್ತಾರೆ ಮತ್ತು ಭಾರತದ ಪ್ರಸ್ತಾಪವನ್ನು ಸಂಪೂರ್ಣವಾಗಿ ವಿರೋಧಿಸುತ್ತಾರೆ ಎಂದು ಆಶಿಸುವುದಾಗಿ ಭುಟ್ಟೊ ಹೇಳಿದ್ದಾರೆ. 

ವಿಶ್ವದ ಪ್ರಮುಖ ಅರ್ಥವ್ಯವಸ್ಥೆಯನ್ನು ಹೊಂದಿರುವ ಪ್ರಭಾವಶಾಲಿ ಜಿ-20 ಗುಂಪಿನ 2023ರ ಸಭೆಯನ್ನು ಜಮ್ಮು ಕಾಶ್ಮೀರದಲ್ಲಿ ಆಯೋಜಿಸಲಾಗಿದೆ. ಈ ಸಭೆಯ ಸಮಗ್ರ ಸಂಯೋಜನೆಯ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಗುರುವಾರ 5 ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಸಂವಿಧಾನದ 370ನೇ ವಿಧಿ ರದ್ದತಿಯ ಬಳಿಕ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರಥಮ ಪ್ರಮುಖ ಅಂತರಾಷ್ಟ್ರೀಯ ಸಮಾವೇಶ ಇದಾಗಲಿದೆ. ಜಮ್ಮು-ಕಾಶ್ಮೀರದಲ್ಲಿ ಜಿ-20 ಸಭೆ ನಡೆಸಲು ಭಾರತ ಯೋಜನೆ ರೂಪಿಸುತ್ತಿದೆ ಎಂಬ ವರದಿಯನ್ನು ಗಮನಿಸಿದ್ದೇವೆ.

ಇಂತಹ ಯೋಜನೆಯನ್ನು ಪಾಕಿಸ್ತಾನ ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ಆಸಿಲ್ ಇಫ್ತಿಕಾರ್ ಅಹ್ಮದ್ ಹೇಳಿದ್ದಾರೆ. ಜಮ್ಮು-ಕಾಶ್ಮೀರವು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಗಣಿಸಲ್ಪಟ್ಟ, ಭಾರತ-ಪಾಕ್ ನಡುವಿನ ವಿವಾದಿತ ಪ್ರದೇಶವಾಗಿದೆ ಮತ್ತು ಹಲವು ದಶಕಗಳಿಂದ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾರ್ಯಸೂಚಿಯಲ್ಲಿ ಉಳಿದುಕೊಂಡಿದೆ. 

ಇಲ್ಲಿ ಜಿ-20 ಸಭೆ ನಡೆಸುವುದು ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ವಿವಾದಿತ ಸ್ಥಾನಮಾನವನ್ನು ಕಡೆಗಣಿಸಿದಂತಾಗುತ್ತದೆ ಮತ್ತು ಇದು ಅಂತರಾಷ್ಟ್ರೀಯ ಸಮುದಾಯ ಯಾವತ್ತೂ ಒಪ್ಪಿಕೊಳ್ಳದ ವಿಡಂಬನೆಯಾಗಿದೆ ಎಂದವರು ಹೇಳಿದ್ದಾರೆ. ಭಾರತದಿಂದ ಅಂತಹ ಯಾವುದೇ ವಿವಾದಾತ್ಮಕ ಪ್ರಸ್ತಾಪದ ಸಂದರ್ಭದಲ್ಲಿ ಜಿ-20 ಸದಸ್ಯರು ಕಾನೂನು ಮತ್ತು ನ್ಯಾಯದ ಅಗತ್ಯತೆಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳುತ್ತಾರೆ ಮತ್ತು ಈ ಪ್ರಸ್ತಾವವನ್ನು ಸಂಪೂರ್ಣವಾಗಿ ತಿರಸ್ಕರಿಸುವ ಭರವಸೆ ಇದೆ. ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದುಪಡಿಸಿದ ತನ್ನ ಕ್ರಮಗಳನ್ನು ಹಿಂಪಡೆದು ಎಲ್ಲಾ ರಾಜಕೀಯ ಬಂಧಿಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಮುದಾಯ ಭಾರತದ ಮೇಲೆ ಒತ್ತಡ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News