ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆಯ ಸಂಜಯ್‌ ರಾವತ್‌ ಗೆ ಇಡಿ ಸಮನ್ಸ್

Update: 2022-06-27 15:27 GMT

ಹೊಸದಿಲ್ಲಿ,ಜೂ.27: ಮಹಾರಾಷ್ಟ್ರ ವಿಧಾನಸಭೆಯ ಉಪಸ್ಪೀಕರ್ ತಮಗೆ ಅನರ್ಹತೆ ನೋಟಿಸನ್ನು ಜಾರಿಗೊಳಿಸಿರುವುದನ್ನು ಪ್ರಶ್ನಿಸಿ ಏಕನಾಥ ಶಿಂದೆ ಮತ್ತು ಇತರ 15 ಬಂಡುಕೋರ ಶಿವಸೇನೆ ಶಾಸಕರು ಸಲ್ಲಿಸಿರುವ ಅರ್ಜಿಗಳನ್ನು ಸೋಮವಾರ ವಿಚಾರಣೆಗೆ ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು 39 ಶಾಸಕರ ಅನರ್ಹತೆ ಕುರಿತು ಜು.11ರ ಸಂಜೆ 5:30ರವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಂತಿಲ್ಲ ಎಂದು ತಾಕೀತು ಮಾಡಿದೆ. ತನ್ಮೂಲಕ ಶಿಂದೆ ಪಾಳಯಕ್ಕೆ ಸದ್ಯದ ಮಟ್ಟಿಗೆ ನೆಮ್ಮದಿಯನ್ನು ಮೂಡಿಸಿದೆ.

ಬಂಡುಕೋರ ಶಾಸಕರು ಮತ್ತು ಅವರ ಕುಟುಂಬ ಸದಸ್ಯರ ಜೀವ, ಸ್ವಾತಂತ್ರ ಮತ್ತು ಆಸ್ತಿಗಳನ್ನು ರಕ್ಷಿಸುವಂತೆಯೂ ಸರ್ವೋಚ್ಚ ನ್ಯಾಯಾಲಯವು ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದೆ.

ಭಿನ್ನಮತೀಯರ ರಕ್ಷಣೆಗಾಗಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ರಾಜ್ಯದ ವಕೀಲರ ಹೇಳಿಕೆಯನ್ನೂ ದಾಖಲಿಸಿಕೊಂಡ ನ್ಯಾಯಾಲಯವು,ಬಂಡುಕೋರ ಶಾಸಕರು ತನ್ನ ವಿರುದ್ಧ ಸಲ್ಲಿಸಿರುವ ಅವಿಶ್ವಾಸ ನಿರ್ಣಯದ ಕುರಿತು ವಿವರಿಸಿ ಅಫಿಡ್ವಿಟ್ ಸಲ್ಲಿಸುವಂತೆ ಉಪ ಸ್ಪೀಕರ್ಗೆ ನಿರ್ದೇಶ ನೀಡಿತು.

ನ್ಯಾಯಾಲಯವು ಉಪ ಸ್ಪೀಕರ್ ನರಹರಿ ಜಿರ್ವಾಲೆ ಮತ್ತು ಇತರರಿಗೆ ನೋಟಿಸ್ಗಳನ್ನೂ ಹೊರಡಿಸಿತು.
ಜು.11ರವರೆಗೆ ರಾಜ್ಯ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ನಡೆಯಬಾರದು ಎಂದು ಕೋರಿದ್ದ ಅರ್ಜಿಯ ಕುರಿತು ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಜೆ.ಬಿ.ಪರ್ಡಿವಾಲಾ ಅವರ ಪೀಠವು,‘ಬಲಾಬಲ ಪರೀಕ್ಷೆಯ ಕುರಿತು ನಾವು ಆದೇಶವನ್ನು ಹೊರಡಿಸುವಂತಿಲ್ಲ,ಹಾಗೆ ಮಾಡಿದರೆ ಅದು ಅನಗತ್ಯ ತೊಡಕುಗಳನ್ನು ಸೃಷ್ಟಿಸುತ್ತದೆ. ಕಾನೂನುಬಾಹಿರವಾಗಿ ಏನಾದರೂ ನಡೆದರೆ ನೀವು ಯಾವಾಗಲೂ ಈ ನ್ಯಾಯಾಲಯದ ಮೆಟ್ಟಿಲೇರಬಹುದು’ ಎಂದು ಹೇಳಿತು.

  ಉದ್ಧವ ಠಾಕ್ರೆ ಗುಂಪು ಶಾಸಕಾಂಗ ಪಕ್ಷದಲ್ಲಿ ಅಲ್ಪಮತಕ್ಕೆ ಕುಸಿದಿದೆ ಮತ್ತು ಸರಕಾರಿ ಯಂತ್ರವನ್ನು ಬುಡಮೇಲುಗೊಳಿಸುತ್ತಿದೆ ಎಂದು ವಾದಿಸಿದ ಬಂಡುಕೋರ ಶಾಸಕರ ಪರ ಹಿರಿಯ ನ್ಯಾಯವಾದಿ ಎನ್.ಕೆ.ಕೌಲ್ ಅವರು,ಈ ಶಾಸಕರಿಗೆ ಬೆದರಿಕೆಗಳನ್ನು ಒಡ್ಡಲಾಗಿದೆ,ಹೀಗಾಗಿ ಮುಂಬೈನಲ್ಲಿಯ ವಾತಾವರಣ ಅವರಿಗೆ ಪೂರಕವಾಗಿಲ್ಲ ಎಂದು ತಿಳಿಸಿದರು.
ಅರುಣಾಚಲ ಪ್ರದೇಶದ ನಬಮ್ ರೆಬಿಯಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿದ ಅವರು,ಉಪ ಸ್ಪೀಕರ್ ವಜಾ ಕೋರಿರುವ ಅರ್ಜಿಯು ಬಾಕಿಯಿರುವಾಗ ಶಾಸಕರ ಅನರ್ಹತೆ ವಿಷಯವನ್ನು ವ್ಯವಹರಿಸಲು ಅವರು ಅರ್ಹರಲ್ಲ ಎಂದು ವಾದಿಸಿದರು.

39 ಶಾಸಕರು ಒಟ್ಟಾಗಿ ಅಲ್ಪಸಂಖ್ಯಾತ ಗುಂಪಿನ ವಿರುದ್ಧವಾಗಿದ್ದಾರೆ ಎಂದರು.
ಉಪ ಸ್ಪೀಕರ್ ಕ್ರಮವು ಕಾನೂನುಬಾಹಿರ ಮತ್ತು ಅಸಾಂವಿಧಾನಿಕವಾಗಿದೆ ಎಂದು ಬಂಡುಕೋರ ಶಾಸಕರು ತಮ್ಮ ಅರ್ಜಿಗಳಲ್ಲಿ ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News