‌ಉತ್ತರಪ್ರದೇಶ: ಪ್ರವಾದಿ ನಿಂದನೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾದ 30ಕ್ಕೂ ಹೆಚ್ಚು ಮಂದಿಗೆ ʼಮನೆ ನೆಲಸಮʼ ನೋಟಿಸ್

Update: 2022-06-27 07:30 GMT
ಸಾಂದರ್ಭಿಕ ಚಿತ್ರ

ಲಕ್ನೋ: ಉತ್ತರ ಪ್ರದೇಶದ ಪ್ರಯಾಗರಾಜ್ ಮತ್ತು ಸಹರಣಪುರ ನಗರಗಳ ಸ್ಥಳೀಯಾಡಳಿತದ ಪ್ರಾಧಿಕಾರಗಳು ಜೂನ್ 10ರಂದು ಪ್ರವಾದಿ ವಿರುದ್ಧದ ಹೇಳಿಕೆಗಳನ್ನು ಖಂಡಿಸಿ ನಡೆಸಲಾದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಆರೋಪಿಗಳಾಗಿರುವವರು ಮತ್ತವರ ಸಂಬಂಧಿಗಳು ನಿಯಮಗಳನ್ನು ಉಲ್ಲಂಘಿಸಿ ಮನೆಗಳನ್ನು ನಿರ್ಮಿಸಿದ್ದಾರೆಂದು ಹೇಳಿ ಅವರ ಮನೆಗಳನ್ನು ನೆಲಸಮಗೊಳಿಸುವ ಕುರಿತಂತೆ ಶೋಕಾಸ್ ನೋಟಿಸ್ ನೀಡಿವೆ.

ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಸುಮಾರು 30 ಸ್ಥಳೀಯ ನಾಗರಿಕರಿಗೆ ನೋಟಿಸ್ ಜಾರಿಗೊಳಿಸಿದ್ದು ನೋಟಿಸ್ ಪಡೆದವರಲ್ಲಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್  ಪಕ್ಷದ ಜಿಲ್ಲಾಧ್ಯಕ್ಷರ ಹಿರಿಯ ಸಹೋದರ ಕೂಡ ಸೇರಿದ್ದಾರೆ. ಹಿಂಸೆಯಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಉತ್ತರ ಪ್ರದೇಶ ನಗರ ಯೋಜನೆ ಮತ್ತು ಅಭಿವೃದ್ಧಿ ಅಧ್ಯಾದೇಶ  1973 ಅನ್ವಯ ನೋಟಿಸ್ ಜಾರಿಯಾಗಿದೆ. 

ಕಳೆದ ವಾರ ಸ್ಥಳೀಯ ನ್ಯಾಯಾಲಯವೊಂದು ಎಐಎಂಐಎಂ ಪ್ರಯಾಗರಾಜ್ ಘಟಕದ ಅಧ್ಯಕ್ಷ ಶಾಹ್ ಆಲಂ(58) ಅವರ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದ್ದು. ಶಾ ಅವರ ಮನೆ ಅವರ ಹಿರಿಯ ಸಹೋದರ ಸಯೀದ್ ಮಕ್ಸೂದ್ ಅಹ್ಮದ್ ಅವರ ಮನೆಯ ಪಕ್ಕವೇ ಕರೇಲಿ ಠಾಣಾ ವ್ಯಾಪ್ತಿಯ ಗೌಸ್‍ನಗರ್ ಪ್ರದೇಶದಲ್ಲಿದೆ.

ಸಹೋದರರ ಮನೆಗಳು ಪ್ರತ್ಯೇಕ ಜಮೀನುಗಳಲ್ಲಿ ನಿರ್ಮಿಸಲಾಗಿದ್ದರೂ ಆವರಣ ಗೋಡೆಗಳಿಲ್ಲ, ಸಯೀದ್ ಅವರ ಕುಟುಂಬ ವಿದೇಶದಲ್ಲಿರುವುದರಿಂದ ಎರಡೂ ಮನೆಗಳನ್ನು ಶಾಹ್ ಆಲಂ ಮತ್ತವರ ಕುಟುಂಬ ಬಳಸುತ್ತಿದೆ. ಸಯೀದ್ ಮಕ್ಸೂದ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದರೂ ಪರೋಕ್ಷವಾಗಿ ಅದು ಶಾಹ್ ಆಲಂ ಅವರನ್ನು ಗುರಿಯಾಗಿಸಿದೆ ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ.

ಆದರೆ ಎರಡೂ ಮನೆಗಳಿಗೆ ಬೀಗ ಜಡಿಯಲಾಗಿದ್ದು ಅಧಿಕಾರಿಗಳು ಶೋಕಾಸ್ ನೋಟಿಸ್ ಅನ್ನು ಸಯೀದ್ ಮಕ್ಸೂದ್ ಅವರ ಮನೆಯ ಹೊರಗೆ ಅಂಟಿಸಿದ್ದಾರೆ. ಅವರು ಖುದ್ದಾಗಿ ಅಥವಾ ವಕೀಲರ ಮೂಲಕ ವಲಯ ಅಧಿಕಾರಿಯ ಮುಂದೆ ಜೂನ್ 29ರಂದು ಹಾಜರಾಗಿ ಅವರ ನಿರ್ಮಾಣದ ವಿರುದ್ಧ ನೆಲಸಮ ಕಾರ್ಯಾಚರಣೆ ಏಕೆ ಆದೇಶಿಸಬಾರದು ಎಂದು ವಿವರಿಸಬೇಕು ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.

ಎಐಎಂಐಎಂ ರಾಜ್ಯ ವಕ್ತಾರ ಮೊಹಮ್ಮದ್ ಫರ್ಹಾನ್ ಪ್ರತಿಕ್ರಿಯಿಸಿ ಪ್ರಯಾಗರಾಜ್ ಪೊಲೀಸರು ತಮ್ಮ ಜಿಲ್ಲಾಧ್ಯಕ್ಷರ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ ಹಾಗೂ ಅವರ ಸಹೋದರನಿಗೆ ನೋಟಿಸ್ ಜಾರಿಗೊಳಿಸುವ ಮೂಲಕ ಕಿರುಕುಳ ನೀಡುವ ಉದ್ದೇಶ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಆದರೆ ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಿಲ್ಲ.

ಸಹರಣಪುರ ಅಭಿವೃದ್ಧಿ ಪ್ರಾಧಿಕಾರವು  ಜೂನ್ 10 ರ ಹಿಂಸಾಚಾರ ಸಂಬಂಧ ಜೈಲಿನಲ್ಲಿರುವ ಮೆಹ್ರಾಜ್ ಮತ್ತು ಮುಹಮ್ಮದ್ ಆಲಿ ಅವರಿಗೂ ನೋಟಿಸ್ ಜಾರಿಗೊಳಿಸಿದೆ ಹಾಗೂ ಅವರ ಮನೆಗಳು ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಹೇಳಿದೆ. ಆದರೆ ಇಬ್ಬರೂ ಈ ಮನೆಗಳ ನಿಜವಾದ ಮಾಲೀಕರಲ್ಲ ಎಂದು ಅವರ ವಕೀಲರು ಪ್ರಾಧಿಕಾರದ ನೋಟಿಸಿಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News