ಮುಂಬೈ: 4 ಮಹಡಿಯ ಕಟ್ಟಡ ಕುಸಿತ, ಹಲವು ಮಂದಿ ಸಿಲುಕಿರುವ ಶಂಕೆ

Update: 2022-06-28 01:47 GMT
Photo: Twitter/@ANI

ಮುಂಬೈ: ಪೂರ್ವ ಕುರ್ಲಾದ ನಾಯಕ್‍ನಗರ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ನಾಲ್ಕು ಮಹಡಿಯ ಕಟ್ಟಡ ಕುಸಿದು ಬಿದ್ದಿದ್ದು, ಹಲವು ಮಂದಿ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಕನಿಷ್ಠ ಐದು ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಸ್ಥಳೀಯ ಕಾರ್ಪೊರೇಟರ್ ಪ್ರವೀಣ ಮೊರಾಜ್‍ಕರ್ ಹೇಳಿದ್ದಾರೆ. ಅಗ್ನಿಶಾಮಕ ಇಲಾಖೆಗೆ ರಾತ್ರಿ 11.52ಕ್ಕೆ ಮಾಹಿತಿ ಸಿಕ್ಕಿದ್ದು, ಘಟನೆಯಲ್ಲಿ ಐದು ಮಂದಿಗೆ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.

ಅಗ್ನಿಶಾಮಕ ವಿಭಾಗದ ಐದು ಪರಿಹಾರ ಟ್ರಕ್‍ಗಳು, ಎರಡು ರಕ್ಷಣಾ ವ್ಯಾನ್‍ಗಳು ಹಾಗೂ ಆ್ಯಂಬುಲೆನ್ಸ್ ಗಳನ್ನು ಕಳುಹಿಸಲಾಗಿದೆ. ಕಟ್ಟಡದ ಅವಶೇಷಗಳಡಿ ಸುಮಾರು 20 ಮಂದಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.

"ಇದು ನಾಲ್ಕು ಶಿಥಿಲಾವಸ್ಥೆಯ ಕಟ್ಟಡಗಳ ಕಾಲೋನಿಯಾಗಿದ್ದು, ಇವುಗಳನ್ನು ತೆರವುಗೊಳಿಸುವಂತೆ ಐದಾರು ವರ್ಷದ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಆದರೂ ಜನ ವಾಸವಿದ್ದರು. ಸೋಮವಾರ ರಾತ್ರಿ ಒಂದು ಕಟ್ಟಡ ಕುಸಿದಿದೆ. ಅಗ್ನಿಶಾಮಕದಳ ಆಗಮಿಸುವ ಮುನ್ನವೇ ಅವಶೇಷಗಳಡಿಯಿಂದ ಐದು ಮಂದಿಯನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ" ಎಂದು ಪ್ರವೀಣ್ ವಿವರ ನೀಡಿದ್ದಾರೆ.

ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಘಟನಾ ಸ್ಥಳಕ್ಕೆ ಧಾವಿಸಿದ್ದು, ಕುಸಿತಗೊಂಡ ಕಟ್ಟಡದಲ್ಲಿ ವಾಸಿಸದಂತೆ ನೋಟಿಸ್ ನೀಡಲಾಗಿತ್ತು. ಆದಾಗ್ಯೂ ಜನ ಅಲ್ಲಿ ವಾಸವಿದ್ದರು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News