ಬಂಧಿತ ಆಲ್ಟ್‌ ನ್ಯೂಸ್‌ ಸಹಸ್ಥಾಪಕ ಮುಹಮ್ಮದ್ ಝುಬೈರ್ ಟ್ವೀಟ್‌ ಪ್ರಚೋದನಕಾರಿ: ದಿಲ್ಲಿ ಪೊಲೀಸರು

Update: 2022-06-28 05:49 GMT

ಹೊಸದಿಲ್ಲಿ: ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೈರ್ ಅವರನ್ನು ಕಳೆದ ರಾತ್ರಿ ಬಂಧಿಸಲು ಕಾರಣವಾದ ಟ್ವೀಟ್ "ತೀವ್ರ ಪ್ರಚೋದನಕಾರಿಯಾಗಿದೆ ಹಾಗೂ ದ್ವೇಷದ ಭಾವನೆ ಹರಡಿಸಬಹುದಾಗಿದೆ'' ಎಂದು ದಿಲ್ಲಿ ಪೊಲೀಸರ ಎಫ್ಐಆರ್‌ನಲ್ಲಿ ಹೇಳಲಾಗಿದೆ.

ಝುಬೈರ್‌ ಅವರು ಮಾರ್ಚ್‌ 2018 ರಲ್ಲಿ ಮಾಡಿದ ಟ್ವೀಟ್‌ಗೆ ಸಂಬಂಧಿಸಿದಂತೆ ಅವರ ಬಂಧನವಾಗಿದೆ. ಖ್ಯಾತ ಚಿತ್ರ ನಿರ್ಮಾಪಕ ಹೃಷಿಕೇಶ್‌ ಮುಖರ್ಜಿ ಅವರ 1983 ಚಲನಚಿತ್ರ ʻಕಿಸೀ ಸೆ ನ ಕೆಹ್ನಾʼ ಇದರ ಒಂದು ಫ್ರೇಮ್‌ ಶೇರ್‌ ಮಾಡಿದ್ದರು.

ಅದರಲ್ಲಿ ಹಿಂದಿಯಲ್ಲಿ ʻಹನುಮಾನ್‌ ಹೊಟೇಲ್‌ʼ ಎಂದು ಬರೆದಿರುವುದು ಕಾಣಿಸುತ್ತದೆ. ಆದರೆ ಹೋಟೆಲ್‌ನ ನಾಮಫಲಕದಲ್ಲಿನ ಪೈಂಟ್‌ ಗಮಿಸಿದಾಗ ಅದು ಹಿಂದೆ ʻಹನಿಮೂನ್ ಹೊಟೇಲ್‌ʼ ಎಂದಾಗಿತ್ತು ಹಾಗೂ ಹನಿಮೂನ್‌ ಅನ್ನು ಹನುಮಾನ್‌ ಎಂದು ಬದಲಿಸಿರುವುದು ಕಾಣಿಸುತ್ತದೆ.

ಇದರ ಕುರಿತು ಝುಬೈರ್‌ ಟ್ವೀಟ್‌ ಮಾಡಿ ʻʻ2014ಗಿಂತ ಮುಂಚೆ ಹನಿಮೂನ್‌ ಹೋಟೆಲ್‌, 2014ರ ನಂತರ ಹನುಮಾನ್‌ ಹೋಟೆಲ್.‌ʼʼ ಎಂದು ಬರೆದಿದ್ದರು.

ಝುಬೈರ್‌ ಅವರನ್ನು ಒಂದು ದಿನದ ಪೊಲೀಸ್‌ ಕಸ್ಟಡಿಗೆ ಕಳುಹಿಸಲಾಗಿದೆ. ದಿಲ್ಲಿ ಪೊಲೀಸ್‌ ಸಬ್‌-ಇನ್‌ಸ್ಪೆಕ್ಟರ್‌ ಅರುಣ್‌ ಕುಮಾರ್‌ ಅವರ ದೂರಿನ ಆಧಾರದಲ್ಲಿ ಈ ಎಫ್‌ಐಆರ್‌ ದಾಖಲಾಗಿದೆ.

ತಾನು ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಟ್ಟಾಗ ಹನುಮಾನ್‌ ಭಕ್ತ್‌ ಹೆಸರಿನ ಟ್ವಿಟರ್ ಖಾತೆಯೊಂದರಲ್ಲಿ  ಒಬ್ಬರು ಝುಬೈರ್‌ ಟ್ವೀಟ್‌ಗೆ ಆಕ್ಷೇಪಿಸಿರುವುದನ್ನು ಗಮನಿಸಿದೆ. ಇದು ಒಂದು ಸಮುದಾಯದ ಭಾವನೆಗೆ ನೋವುಂಟು ಮಾಡಿ ಶಾಂತಿ ಕದಡುವ ಯತ್ನ ಎಂದು ಅವರು ಹೇಳಿದ್ದಾಗಿ ಎಫ್‌ಐಆರ್‌ ಅಲ್ಲಿ ದಾಖಲಾಗಿದೆ.

ಝುಬೈರ್‌ ಅವರನ್ನು 2020 ರ ಪ್ರಕರಣವೊಂದರ ಸಂಬಂಧ ವಿಚಾರಿಸಲು ಠಾಣೆಗೆ  ಸೋಮವಾರ ಕರೆಸಲಾಗಿತ್ತು, ಈ ಪ್ರಕರಣದಲ್ಲಿ ಅವರಿಗೆ ಬಂಧನದಿಂದ ವಿನಾಯಿತಿ ನೀಡಲಾಗಿದೆ, ಆದರೆ ಅವರನ್ನು ಹೊಸ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಆಲ್ಟ್‌ ನ್ಯೂಸ್‌ ಸಹ-ಸ್ಥಾಪಕ ಪ್ರತೀಕ್‌ ಸಿನ್ಹಾ ಹೇಳಿದ್ದಾರೆ. ಸತತ ಮನವಿ ಹೊರತಾಗಿಯೂ ಎಫ್‌ಐಆರ್‌ ಪ್ರತಿ ನೀಡಲಾಗಿಲ್ಲ ಎಂದೂ ಅವರು ಹೇಳಿದ್ದಾರೆ.

ಆಲ್ಟ್‌ ನ್ಯೂಸ್‌ ಸಹ-ಸ್ಥಾಪಕ ಮುಹಮ್ಮದ್‌ ಝುಬೈರ್‌ ಬಂಧನ ಖಂಡಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಶಶಿ ತರೂರ್‌ ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News