ಅಸ್ಸಾಂ: ಎಂಟು ದಿನಗಳಿಂದ ಕುಡಿಯುವ ನೀರು, ವಿದ್ಯುತ್ ಇಲ್ಲದೆ ಪರದಾಡುತ್ತಿರುವ ಸಾವಿರಾರು ಜನ

Update: 2022-06-28 07:04 GMT
ಸಾಂದರ್ಭಿಕ ಚಿತ್ರ, Photo:PTI

ಸಿಲ್ಚಾರ್: ದಕ್ಷಿಣ ಅಸ್ಸಾಂನ ಸಿಲ್ಚಾರ್‌ನಲ್ಲಿ ಪ್ರವಾಹ ಪೀಡಿತ ಸಾವಿರಾರು ಜನರು 8 ದಿನಗಳಿಂದ ಕುಡಿಯುವ ನೀರು, ಪರಿಹಾರ ಸಾಮಗ್ರಿಗಳು ಹಾಗೂ  ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಪಟ್ಟಣದ ಹೆಚ್ಚಿನ ಪ್ರದೇಶಗಳು ನೀರಿನಿಂದ ಮುಳುಗಿ ಹೋಗಿದೆ ಹಾಗೂ ಸರಕಾರದ ಯಾವುದೇ ರೀತಿಯ ಪರಿಹಾರ ಉಪಕ್ರಮವು ಇನ್ನೂ ಜನರನ್ನು ತಲುಪಿಲ್ಲ.

 "ಕಳೆದ ಏಳು ದಿನಗಳಿಂದ ನೆರೆ ನೀರಿನಿಂದಾಗಿ ನನ್ನ ಮನೆಯಲ್ಲೇ  ಬಂಧಿಯಾಗಿದ್ದೇನೆ. ಆದರೆ, ಯಾವುದೇ ಪರಿಹಾರ ಸಾಮಗ್ರಿಗಳು ನನಗೆ ತಲುಪಲಿಲ್ಲ. ಸೋಮವಾರ ಮಾತ್ರ ನನ್ನ ಕೆಲವು ಸ್ನೇಹಿತರು ನನ್ನನ್ನು ಭೇಟಿ ಮಾಡಿ ಸ್ವಲ್ಪ ಆಹಾರ ಮತ್ತು ಕುಡಿಯುವ ನೀರನ್ನು ನೀಡಿದರು. ಈ ವಿಚಾರದಲ್ಲಿ ಆಡಳಿತ  ಸಂಪೂರ್ಣ ವಿಫಲವಾಗಿದೆ’’ ಎಂದು ಸಿಲ್ಚಾರ್  ಪಟ್ಟಣದ ಮಾಲುಗ್ರಾಮ್ ಪ್ರದೇಶದ ನಿವಾಸಿ ಸಮಿನ್ ಸೇನ್ ದೇಕಾ ಹೇಳಿದರು.

ಸಿಲ್ಚಾರ್‌ನ ಸರತ್‌ಪಲ್ಲಿ ಪ್ರದೇಶದ ನಿವಾಸಿ ಹಾಗೂ  ಮನೆಕೆಲಸಗಾರ್ತಿ ಸೀಮಾ ದಾಸ್ ಅವರು ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡಿದ್ದಾರೆ.

 "ನನ್ನ ಮನೆ ಕುತ್ತಿಗೆಯ ತನಕದ ಆಳದ ನೀರಿನಲ್ಲಿ ಮುಳುಗಿದೆ. ನಾನು ಕಳೆದ ಎಂಟು ದಿನಗಳಿಂದ ನನ್ನ ನೆರೆಹೊರೆಯವರ ಛಾವಣಿಯ ಮೇಲೆ ವಾಸಿಸುತ್ತಿದ್ದೇನೆ. ಆಹಾರ ಅಥವಾ ಕುಡಿಯುವ ನೀರು ಇಲ್ಲ" ಎಂದು ಸೀಮಾದಾಸ್  ಹೇಳಿದರು.

ಸರಕಾರದ ಪರಿಹಾರ ಉಪಕ್ರಮವು ಜನರನ್ನು ತಲುಪುವಲ್ಲಿ ವಿಫಲವಾಗಿದೆ ಹಾಗೂ  ಕೆಲವು ಎನ್‌ಜಿಒಗಳು ಮಾತ್ರ ಕೈಜೋಡಿಸಿವೆ ಎಂದು ಹೆಚ್ಚು ಪ್ರವಾಹ ಪೀಡಿತ ವಿವೇಕಾನಂದ ರಸ್ತೆ ಪ್ರದೇಶದ ನಿವಾಸಿಯೊಬ್ಬರು ಹೇಳಿದ್ದಾರೆ.

ಕಳೆದ ಎಂಟು ದಿನಗಳಿಂದ ಪಟ್ಟಣದ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಇಲ್ಲವಾಗಿದೆ.

ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಕಳೆದ ವಾರ ಎರಡು ಬಾರಿ ಪ್ರವಾಹ ಪೀಡಿತ ಸಿಲ್ಚಾರ್‌ಗೆ ಭೇಟಿ ನೀಡಿದ್ದಾರೆ. ಅಸ್ಸಾಂನ ಪಿಎಚ್‌ಇ ಸಚಿವ ಜಯಂತ ಮಲ್ಲ ಬರುವಾ ಅವರು ಮಂಗಳವಾರ ಸಿಲ್ಚಾರ್‌ಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News