ಆಲ್ಟ್ ನ್ಯೂಸ್‌ ಸಹಸ್ಥಾಪಕ ಝುಬೈರ್‌ ಬಂಧನ ʻಕಳವಳಕಾರಿʼ, ತಕ್ಷಣ ಬಿಡುಗಡೆಗೊಳಿಸಿ: ಎಡಿಟರ್ಸ್‌ ಗಿಲ್ಡ್‌ ಆಗ್ರಹ

Update: 2022-06-28 14:26 GMT

ಹೊಸದಿಲ್ಲಿ,ಜೂ.28: ಸತ್ಯಶೋಧಕ ವೆಬ್ಸೈಟ್ ‘ಆಲ್ಟ್ ನ್ಯೂಸ್’ನ ಸಹಸ್ಥಾಪಕ ಹಾಗೂ ಪತ್ರಕರ್ತ ಮುಹಮ್ಮದ್ ಝುಬೇರ್ ಅವರ ಬಂಧನವನ್ನು ಖಂಡಿಸಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಇದು ಅತ್ಯಂತ ಆತಂಕಕಾರಿಯಾಗಿದೆ ಎಂದು ಬಣ್ಣಿಸಿದೆ. 

ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಅದು ಆಗ್ರಹಿಸಿದೆ. ಆನ್ಲೈನ್ ಮತ್ತು ಆಫ್ಲೈನ್ ವಿಷಯಗಳನ್ನು ರಕ್ಷಿಸುವ ಮೂಲಕ ಪ್ರಜಾಪ್ರಭುತ್ವದ ಸುಸ್ಥಿರತೆಯನ್ನು ಖಚಿತಪಡಿಸಲು ಜರ್ಮನಿಯಲ್ಲಿ ನಡೆದ ಜಿ7 ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವ್ಯಕ್ತಪಡಿಸಿರುವ ಬದ್ಧತೆಗಳನ್ನು ಬೆಟ್ಟು ಮಾಡಿರುವ ಗಿಲ್ಡ್,ಝಬೇರ್ ಬಿಡುಗಡೆಯು ಭಾರತದ ನಿಲುವನ್ನು ಸಮರ್ಥಿಸುತ್ತದೆೆ ಎಂದು ಹೇಳಿದೆ.

ಸಾರ್ವಜನಿಕ ಚರ್ಚೆಗಳು, ಸ್ವತಂತ್ರ ಮತ್ತು ಬಹುತ್ವವಾದ ಮಾಧ್ಯಮಗಳು ಹಾಗೂ ಆನ್ಲೈನ್ ಮತ್ತು ಆಫ್ಲೈನ್ಗಳಲ್ಲಿ ಮಾಹಿತಿಯ ಮುಕ್ತ ಹರಿವು,ನ್ಯಾಯಸಮ್ಮತತೆಯ ಪೋಷಣೆ, ಪಾರದರ್ಶಕತೆ, ನಾಗರಿಕರು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಸಮಾನ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವಗಳಿಗೆ ದೇಶಗಳು ಬದ್ಧವಾಗಿವೆ ಎಂದು ಸೋಮವಾರ ಬಿಡುಗಡೆಗೊಳಿಸಲಾದ ಜಿ7 ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಝುಬೈರ್ ಅವರು 2018ರಲ್ಲಿ ಮಾಡಿದ್ದ ಟ್ವೀಟ್ಗೆ ಸಂಬಂಧಿಸಿದಂತೆ ಧಾರ್ಮಿಕ ಭಾವನೆಗಳಿಗೆ ಚ್ಯುತಿಯನ್ನುಂಟು ಮಾಡಿದ ಆರೋಪದಲ್ಲಿ ಸೋಮವಾರ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.

ಝುಬೇರ್ ಬಂಧನವು ಅತ್ಯಂತ ಆತಂಕಕಾರಿಯಾಗಿದೆ,ಏಕೆಂದರೆ ಝುಬೇರ್ ಮತ್ತು ಅವರ ವೆಬ್ಸೈಟ್ ‘ಆಲ್ಟ್ ನ್ಯೂಸ್’ ಕಳೆದ ಕೆಲವು ವರ್ಷಗಳಿಂದ ಸುಳ್ಳುಸುದ್ದಿಗಳನ್ನು ಗುರುತಿಸುವಲ್ಲಿ ಮತ್ತು ತಪ್ಪುಮಾಹಿತಿ ಅಭಿಯಾನಗಳನ್ನು ಎದುರಿಸುವಲ್ಲಿ ಅತ್ಯಂತ ವಸ್ತುನಿಷ್ಠ ಮತ್ತು ವಾಸ್ತವಿಕ ರೀತಿಯಲ್ಲಿ ಅನುಕರಣೀಯ ಕಾರ್ಯವನ್ನು ಮಾಡಿದ್ದಾರೆ.ವಾಸ್ತವಿಕವಾಗಿ ಝುಬೇರ್ ಅವರು ಟಿವಿ ವಾಹಿನಿಯಲ್ಲಿ ಆಡಳಿತ ಪಕ್ಷದ ವಕ್ತಾರರ ವಿಷಕಾರಿ ಹೇಳಿಕೆಗಳನ್ನು ಬಹಿರಂಗಗೊಳಿಸಿದ್ದರು ಮತ್ತು ಇದು ತಿದ್ದುಪಡಿಗಳನ್ನು ಮಾಡಿಕೊಳ್ಳಲು ಪಕ್ಷಕ್ಕೆ ಅವಕಾಶವನ್ನು ಕಲ್ಪಿಸಿತ್ತು ಎಂದು ಗಿಲ್ಡ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಮಾಜವನ್ನು ಧ್ರುವೀಕರಿಸಲು ಮತ್ತು ರಾಷ್ಟ್ರವಾದಿ ಭಾವನೆಗಳನ್ನು ಕೆರಳಿಸಲು ತಪ್ಪು ಮಾಹಿತಿಯನ್ನು ಸಾಧನವನ್ನಾಗಿ ಬಳಸಿಕೊಳ್ಳುವವರನ್ನು ಟೀಕಿಸಿರುವ ಗಿಲ್ಡ್, ಆಲ್ಟ್ ನ್ಯೂಸ್ ನ ‘ಕಟ್ಟೆಚ್ಚರದ ನಿಗಾ’ ಅವರನ್ನು ಅಸಮಾಧಾನಗೊಳಿಸಿತ್ತು ಎಂದು ಹೇಳಿದೆ.

ಇದಕ್ಕೂ ಮುನ್ನ ಡಿಜಿಟಲ್ ಸುದ್ದಿ ಮಾಧ್ಯಮಗಳ ಸಂಘಟನೆಯು ಝುಬೇರ್ ಬಂಧನವನ್ನು ಖಂಡಿಸಿತ್ತು ಮತ್ತು ಅವರ ವಿರುದ್ಧದ ಪ್ರಕರಣವನ್ನು ತಕ್ಷಣ ಹಿಂದೆಗೆದುಕೊಳ್ಳುವಂತೆ ದಿಲ್ಲಿ ಪೊಲೀಸರನ್ನು ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News