ಮುಹಮ್ಮದ್ ಝುಬೈರ್‌ರನ್ನು ಕೋರ್ಟ್ ಮುಂದೆ ಹಾಜರುಪಡಿಸಿದ ಪೊಲೀಸರು; 5 ದಿನ ಕಸ್ಟಡಿಗೆ ಕೋರಿಕೆ

Update: 2022-06-28 12:02 GMT

ಹೊಸದಿಲ್ಲಿ: ಪ್ರಚೋದನಕಾರಿ ಟ್ವೀಟ್ ಮಾಡಿದ್ದಾರೆಂಬ ಆರೋಪದ ಮೇಲೆ ಸೋಮವಾರ ದಿಲ್ಲಿ ಪೊಲೀಸರ ಸೈಬರ್ ಘಟಕದಿಂದ ಬಂಧಿಸಲ್ಪಟ್ಟ ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್  ಝುಬೈರ್ ಅವರನ್ನು ದಿಲ್ಲಿಯ ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಲಾಗಿದೆ.

ಝುಬೈರ್ ಪರ ವಾದಿಸಿದ ಹಿರಿಯ ವಕೀಲೆ ವೃಂದಾ ಗ್ರೋವರ್, ಝುಬೈರ್ ಅವರನ್ನು  ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಹಾಗೂ ಇಡೀ ಪ್ರಕರಣ ಅಸಂಬದ್ಧತೆಯಿಂದ ಕೂಡಿದೆ ಎಂದು ಹೇಳಿದರು.

ಝುಬೈರ್ ಒಬ್ಬ ಸತ್ಯ-ಶೋಧಕ ಮತ್ತು ಪತ್ರಕರ್ತ ಎಂದು ಹೇಳಿದ ಗ್ರೋವರ್, ನಕಲಿ ಸುದ್ದಿ ಮತ್ತು ವೀಡಿಯೋಗಳನ್ನು ಹರಡುವವರ ಸತ್ಯವನ್ನು ಜುಬೈರ್ ಅನಾವರಣಗೊಳಿಸುವುದರಿಂದ ಅಂತಹ ಜನರಿಗೆ ಅವರು ಇಷ್ಟವಿಲ್ಲ ಎಂದರು.

ಝುಬೈರ್ ಅವರ ಒಂದು ದಿನದ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಇಂದು ಅವರನ್ನು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಅವರನ್ನು ಐದು ದಿನ ಪೊಲೀಸ್ ಕಸ್ಟಡಿಗೆ ವಹಿಸಬೇಕು ಎಂದು ಪೊಲೀಸರು ಕೋರಿದ್ದಾರೆ.

ಪ್ರಾಸಿಕ್ಯೂಶನ್ ಪರ ವಕೀಲರು ತಮ್ಮ ವಾದ ಮಂಡಿಸಿ "ಝುಬೈರ್ ಅವರ ಉದ್ದೇಶಪೂರ್ವಕ ಕೃತ್ಯ ಎಲ್ಲರ ಮುಂದೆ ಇದೆ. ಅವರ ಪೊಲೀಸ್ ರಿಮಾಂಡ್ ಅಗತ್ಯವಿದೆ, ಅವರು ತನಿಖಾಧಿಕಾರಿಗೆ ಬೆದರಿಸಿದ್ದಾರೆ. ತಮ್ಮ ಲ್ಯಾಪ್‍ಟಾಪ್‍ನ ಎಲ್ಲಾ ಡೇಟಾ ಅಳಿಸಲಾಗುವುದು ಎಂದು ಹೇಳಿದ್ದಾರೆ. ಬ್ಲ್ಯಾಂಕ್ ಫೋನ್ ಹಿಡಿದುಕೊಂಡು ಅವರು ಬಂದಿದ್ದರು" ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News