ಉಡುಪಿ: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ; ಆರೋಪಿಗೆ 10 ವರ್ಷ ಜೈಲು ಶಿಕ್ಷೆ

Update: 2022-06-28 16:51 GMT

ಉಡುಪಿ, ಜೂ.28: ಲಾರಿ ಚಾಲಕನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದ ಆರೋಪಿ ಕ್ಲೀನರ್‌ಗೆ 10ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಪೊಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ಕಾಪು ನಿವಾಸಿ ಆದರ್ಶ್(23) ಶಿಕ್ಷೆಗೆ ಗುರಿಯಾಗಿರುವ ಆರೋಪಿ. ಈತ ಬಾಲಕಿಯ ತಂದೆಯ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಆ ಲಾರಿಯಲ್ಲೇ ರಾತ್ರಿ ಸಮಯ ಮಲಗುತ್ತಿದ್ದನು. ಈತ 17ವರ್ಷ ವಯಸ್ಸಿನ ಸಂತ್ರಸ್ತ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ದೈಹಿಕ ಸಂಪರ್ಕ ನಡೆಸಿದ್ದನು. ಈ ವಿಚಾರ ಮನೆಯಲ್ಲಿ ಹೇಳದಂತೆ ಬೆದರಿಸಿದ್ದ ಎಂದು ದೂರಲಾಗಿದೆ.

ನಂತರ ಆರೋಪಿ ಬೇರೆ ಪ್ರಕರಣದಲ್ಲಿ ಶಿವಮೊಗ್ಗದಲ್ಲಿ ಜೈಲುಪಾಲಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದನು. ಬಳಿಕ  ಬಾಲಕಿಯ ತಂದೆಯನ್ನು ಸಂಪರ್ಕಿಸಿ ಬಾಲಕಿಯನ್ನು ಮದುವೆ ಮಾಡಿಕೊಡುವಂತೆ ಕೇಳಿದ್ದನು. ಆದರೆ ಆಕೆ ಅಪ್ರಾಪ್ತೆಯಾಗಿರುವುದರಿಂದ ತಂದೆತಾಯಿ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಅದಕ್ಕಾಗಿ ಆರೋಪಿ ಕೊಲೆ ಬೆದರಿಕೆ ಹಾಕಿದ್ದನು. ನಂತರ ಆರೋಪಿ ಬಾಲಕಿಯನ್ನು ಉಡುಪಿಗೆ ಬರ ಹೇಳಿ ಅಲ್ಲಿಂದ ಅಪಹರಿಸಿ ಕಾಪುವಿಗೆ ಕರೆದುಕೊಂಡು ಹೋಗಿದ್ದನು. ಆ ಬಗ್ಗೆ ಬಾಲಕಿಯ ತಾಯಿ ನೀಡಿದಂತೆ ಪ್ರಕರಣ ದಾಖಲಿಸಿಕೊಂಡ ಬ್ರಹ್ಮಾವರ ಪೊಲೀಸರು, ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದರು. ಪ್ರಕರಣದ ತನಿಖೆ ನಡೆಸಿದ ಆಗಿನ ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ಸಂಪತ್ ಕುಮಾರ್, ಆರೋಪಿ ವಿರುದ್ಧ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು, ನೊಂದ ಬಾಲಕಿಯ ಅಪಹರಣಕ್ಕಾಗಿ ಐದು ವರ್ಷ ಜೈಲುಶಿಕ್ಷೆ ಮತ್ತು 5ಸಾವಿರ ರೂ. ದಂಡ, ಅತ್ಯಾಚಾರ ಎಸಗಿರುವುದಕ್ಕಾಗಿ 10ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 20ಸಾವಿರ ರೂ. ದಂಡ ಹಾಗೂ ಅಪ್ರಾಪ್ತೆ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿ ರುವುದಕ್ಕಾಗಿ 7ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 20ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡದ ಒಟ್ಟು ಮೊತ್ತ 50ಸಾವಿರ ರೂ.ನಲ್ಲಿ 45ಸಾವಿರ ರೂ. ನೊಂದ ಬಾಲಕಿಗೆ ಮತ್ತು 5ಸಾವಿರ ರೂ. ಸರಕಾರಕ್ಕೆ ನೀಡಬೇಕು. ನೊಂದ ಬಾಲಕಿಗೆ 4ಲಕ್ಷ ರೂ. ಪರಿಹಾರವನ್ನು ಸರಕಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಪ್ರಾಸಿಕ್ಯೂಷನ್ ಪರವಾಗಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News