ಡಾಲರ್‌ನೆದುರು 78.83ರ ದಾಖಲೆ ಮಟ್ಟಕ್ಕೆ ಕುಸಿದ ಭಾರತದ ರೂಪಾಯಿ

Update: 2022-06-28 17:31 GMT

ಹೊಸದಿಲ್ಲಿ,ಜೂ.28: ಕಚ್ಚಾ ತೈಲಬೆಲೆಗಳ ನಿರಂತರ ಏರಿಕೆಯ ನಡುವೆ ಮಂಗಳವಾರ ಅಮೆರಿಕದ ಡಾಲರ್ನೆದುರು 46 ಪೈಸೆಗಳಷ್ಟು ಕುಸಿದ ಭಾರತೀಯ ರೂಪಾಯಿಯು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 78.83ರಲ್ಲಿ ಮುಕ್ತಾಯಗೊಂಡಿದೆ.

ಬ್ಲೂಮ್ಬರ್ಗ್ ವರದಿಯಂತೆ ದಿನದ ವಹಿವಾಟಿನಲ್ಲಿ ಒಂದು ಹಂತದಲ್ಲಿ ರೂಪಾಯಿ 78.86ಕ್ಕೆ ಇಳಿದಿತ್ತಾದರೆ,78.85ರ ಕನಿಷ್ಠವನ್ನು ತಲುಪಿತ್ತು ಎಂದು ಪಿಟಿಐ ವರದಿ ಮಾಡಿದೆ.

ಮಂಗಳವಾರ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 117.42 ಡಾ.(9,234.25 ರೂ.)ಗೆ ಏರಿಕೆಯಾಗಿದ್ದು,ಇದು ಸೋಮವಾರದ ಬೆಲೆಗಿಂತ ಶೇ.1.76ರಷ್ಟು ಅಧಿಕವಾಗಿದೆ.
ಭಾರತವು ತನ್ನ ತೈಲ ಅಗತ್ಯದ ಶೇ.85ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಅಂತರಾಷ್ಟ್ರೀಯ ಬೆಲೆಗಳಲ್ಲಿ ಏರಿಕೆಯು ದೇಶಿಯ ಹಣದುಬ್ಬರವನ್ನು ಹೆಚ್ಚಿಸುತ್ತದೆ.
ಹೆಚ್ಚಿನ ತೈಲಬೆಲೆಗಳು ದೇಶಿಯ ಕರೆನ್ಸಿಯ ಮೇಲೂ ಪರಿಣಾಮ ಬೀರಬಹುದು,ಹೀಗಾಗಿ ರೂಪಾಯಿಯ ಋಣಾತ್ಮಕ ವಹಿವಾಟು ಮುಂದುವರಿಯುವ ನಿರೀಕ್ಷೆಯಿದೆ ಎಂದು ಬಿಎನ್ಪಿ ಪರಿಬಾಸ್-ಶೇರ್ಖಾನ್ನ ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ ಅಭಿಪ್ರಾಯಿಸಿದ್ದಾರೆ.

ಈ ನಡುವೆ ಭಾರತೀಯ ಶೇರು ಮಾರುಕಟ್ಟೆ ಸೂಚ್ಯಂಕಗಳು ಮಂಗಳವಾರ ಅಲ್ಪಗಳಿಕೆಯೊಂದಿಗೆ ಮುಕ್ತಾಯಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News