ಪತ್ರಕರ್ತರ ಬರಹಗಳಿಗೆ, ಟ್ವೀಟ್‍ಗಳಿಗೆ ಅವರನ್ನು ಬಂಧಿಸಬಾರದು: ಝುಬೈರ್ ಬಂಧನ ಕುರಿತು ವಿಶ್ವ ಸಂಸ್ಥೆಯ ವಕ್ತಾರ

Update: 2022-06-29 14:00 GMT

ಹೊಸದಿಲ್ಲಿ,ಜೂ.29: ಆಲ್ಟ್ ನ್ಯೂಸ್‌ನ ಸಹಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರ ಬಂಧನಕ್ಕೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಅವರು,ಜಗತ್ತಿನಲ್ಲಿ ಎಲ್ಲಿಯೇ ಆಗಲಿ,ಪತ್ರಕರ್ತರನ್ನು ಅವರ ಬರವಣಿಗೆ,ಟ್ವೀಟ್ ಅಥವಾ ಹೇಳಿಕೆಗಾಗಿ ಜೈಲಿಗೆ ತಳ್ಳಬಾರದು ಎಂದು ಹೇಳಿದ್ದಾರೆ.

ಪ್ರಪಂಚದಾದ್ಯಂತ ಯಾವುದೇ ಸ್ಥಳದಲ್ಲಿ ಜನರು ಮತ್ತು ಪತ್ರಕರ್ತರು ಯಾವುದೇ ಕಿರುಕುಳದ ಭೀತಿಯಿಲ್ಲದೆ ಮುಕ್ತವಾಗಿ ತಮ್ಮನ್ನು ಅಭಿವ್ಯಕ್ತಿಸಿಕೊಳ್ಳಲು ಅವಕಾಶವಿರಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಡುಜಾರಿಕ್ ಹೇಳಿದರು.

ಝುಬೈರ್ 2018ರಲ್ಲಿ ಮಾಡಿದ್ದ ಟ್ವೀಟ್‌ಗಾಗಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದಲ್ಲಿ ಅವರನ್ನು ಸೋಮವಾರ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.

ಝುಬೈರ್ ಬಂಧನವನ್ನು ಟೀಕಿಸಿರುವ ಹಲವಾರು ಮಾಧ್ಯಮ ಸಂಘಟನೆಗಳು ಅವರ ಬೇಷರತ್ ಬಿಡುಗಡೆಗೆ ಕರೆ ನೀಡಿವೆ.

ಸರಕಾರವು ಪಂಥೀಯ ವಿಷಯಗಳ ಬಗ್ಗೆ ವರದಿ ಮಾಡುವ ಪತ್ರಕರ್ತರಿಗೆ ಪ್ರತಿಕೂಲ ಮತ್ತು ಅಸುರಕ್ಷಿತ ವಾತಾವರಣವನ್ನು ಸೃಷ್ಟಿಸಿರುವ ಭಾರತದಲ್ಲಿ ಪತ್ರಿಕಾ ಸ್ವಾತಂತ್ರವು ಮತ್ತಷ್ಟು ಕೆಳಮಟ್ಟಕ್ಕೆ ಕುಸಿದಿರುವುದನ್ನು ಝುಬೈರ್ ಬಂಧನವು ಸೂಚಿಸುತ್ತದೆ ಎಂದು ಅಮೆರಿಕದ ಎನ್‌ಜಿಒ ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್’ನ ದಕ್ಷಿಣ ಏಶ್ಯಾ ಕಾರ್ಯಕ್ರಮ ಸಂಯೋಜಕ ಸ್ಟೀವನ್ ಬಟ್ಲರ್ ಹೇಳಿದ್ದರೆ,ತಪ್ಪು ಮಾಹಿತಿಗಳನ್ನು ಎದುರಿಸುವಲ್ಲಿ ಝುಬೈರ್ ಅವರ ನಿರ್ಣಾಯಕ ಕಾರ್ಯಗಳಿಗಾಗಿ ಮತ್ತು ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯಗಳನ್ನು ಖಂಡಿಸಿದ್ದಕ್ಕಾಗಿ ಅಧಿಕಾರಿಗಳು ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಭಾರತದಲ್ಲಿ ಮಾನವ ಹಕ್ಕುಗಳ ರಕ್ಷಕರು ಎದುರಿಸುತ್ತಿರುವ ಅಪಾಯವು ಬಿಕ್ಕಟ್ಟಿನ ಹಂತಕ್ಕೆ ತಲುಪಿರುವುದನ್ನು ಝುಬೈರ್ ಬಂಧನವು ತೋರಿಸಿದೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಮುಖ್ಯಸ್ಥ ಆಕಾರ್ ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News