‘ಕುದುರೆ ರೇಸ್' ಬದಲು ‘ಕುದುರೆ ವ್ಯಾಪಾರ'ದ ಮೇಲೆ ಜಿಎಸ್‍ಟಿ ಎಂದ ವಿತ್ತ ಸಚಿವೆ!

Update: 2022-06-30 12:40 GMT

ಹೊಸದಿಲ್ಲಿ: ಜಿಎಸ್‍ಟಿ ಮಂಡಳಿ ಸಭೆಯ ಬಳಿಕ ಬುಧವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುವ ವೇಳೆ ‘ಕುದುರೆ ರೇಸ್’ ಮೇಲೆ ಜಿಎಸ್‍ಟಿ ಎಂದು ಹೇಳುವ ಬದಲು ‘ಕುದುರೆ ವ್ಯಾಪಾರ' ಎಂದು ಬಾಯ್ತಪ್ಪಿ ಹೇಳಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆಯಲ್ಲದೆ ವಿಪಕ್ಷಗಳಿಗೆ ಸರಕಾರವನ್ನು ಟೀಕಿಸಲು ಒಂದು ಅಸ್ತ್ರವನ್ನು ಒದಗಿಸಿದಂತಾಗಿದೆ.

ಈ ನಿರ್ದಿಷ್ಟ ವೀಡಿಯೋ ತುಣುಕನ್ನು ಶೇರ್ ಮಾಡಿದ ಸಿಪಿಐಎಂ ಪಾಲಿಟ್ ಬ್ಯುರೋ ಸದಸ್ಯರ ಸೀತಾರಾಮ್ ಯೆಚೂರಿ, ಬಿಜೆಪಿ ವಿರುದ್ಧ ಕುದುರೆ ವ್ಯಾಪಾರದ ಆರೋಪ ಹೊರಿಸಿದ್ದಾರೆ.

``ಸತ್ಯ ಹೊರಕ್ಕೆ ಜಿಗಿಯುತ್ತದೆ? ಕುದುರೆ ವ್ಯಾಪಾರದ ಮೇಲೆ ಜಿಎಸ್‍ಟಿ!ದಯವಿಟ್ಟು ಮುಂದುವರಿಯಿರಿ,'' ಎಂದು ಯೆಚೂರಿ ಬರೆದಿದ್ದಾರೆ.

ತಾನು ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಇತರ ಪಕ್ಷಗಳ ಶಾಸಕರನ್ನು ಹಣ ಮತ್ತು ಅಧಿಕಾರದ ಆಮಿಷವೊಡ್ಡಿ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿಕೊಂಡಿದೆ ಎಂಬ ಆರೋಪವನ್ನು ವಿಪಕ್ಷಗಳು ಹಿಂದಿನಿಂದಲೂ ಮಾಡುತ್ತಾ ಬಂದಿವೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯ ಹಲವು ಶಾಸಕರು ಬಂಡಾಯ ಸಾರಿರುವ ಹಾಗೂ ಅವರಿಗೆ ಬಿಜೆಪಿ ಬೆನ್ನುಲುಬಾಗಿ ನಿಂತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲದೇ ಇರುವ ಪ್ರಸಕ್ತ ಸಂದರ್ಭದಲ್ಲಿ ವಿತ್ತ ಸಚಿವೆ ಬಾಯ್ತಪ್ಪಿ ಆಡಿದ `ಕುದುರೆ ವ್ಯಾಪಾರ' ಪದ ಸಾಮಾಜಿಕ ಜಾಲತಾಣಗಳಲ್ಲಿಯೂ ಸ್ವಾರಸ್ಯಕರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ಕ್ಯಾಸಿನೋಗಳು, ಆನ್‍ಲೈನ್ ಗೇಮಿಂಗ್, ಕುದುರೆ ರೇಸ್, ಲಾಟರಿ ಮೇಲೆ ಶೇ 28 ರಷ್ಟು ಜಿಎಸ್‍ಟಿ ವಿಧಿಸುವ ನಿರ್ಣಯವನ್ನು ಜಿಎಸ್‍ಟಿ ಮಂಡಳಿ ಸಭೆ ಇನ್ನಷ್ಟು ಚರ್ಚೆಯ ಅಗತ್ಯವಿದೆ ಎಂದು ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News