ಬೈಕ್ ತೆರವುಗೊಳಿಸದೆಯೇ ರಸ್ತೆ ನಿರ್ಮಿಸಿದ ಗುತ್ತಿಗೆದಾರ!

Update: 2022-06-30 14:47 GMT
Photo: thenewsminute.com

ವೆಲ್ಲೂರ್: ತಮಿಳುನಾಡಿನ ವೆಲ್ಲೂರಿನಲ್ಲಿ ರಸ್ತೆಯೊಂದರಲ್ಲಿ ನಿಲ್ಲಿಸಲಾಗಿದ್ದ ಮೋಟಾರ್ ಸೈಕಲ್ ಅನ್ನು ಅಲ್ಲಿಂದ ತೆಗೆಯದೆಯೇ ಹೊಸ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ವರದಿಯಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ವೆಲ್ಲೂರು ನಗರಪಾಲಿಕೆಯ ಕಲಿಯಮ್ಮನ್ ಕೊಯಿಲ್ ಪ್ರದೇಶದಲ್ಲಿ ಈ ರಸ್ತೆ ನಿರ್ಮಾಣವಾಗಿದ್ದು ಮೋಟಾರ್ ಸೈಕಲ್ ನಿಂತಿರುವಂತೆಯೇ ರಸ್ತೆ ನಿರ್ಮಿಸಿರುವುದರಿಂದ ಮೋಟಾರ್ ಸೈಕಲ್ ಸುತ್ತಲೂ ಸಿಮೆಂಟ್ ಹರಡಿದೆ.

ಸೋಮವಾರ ತಡರಾತ್ರಿ ನಡೆದ ಈ ರಸ್ತೆ ಕಾಮಗಾರಿ ಬಗ್ಗೆ ತನಗೆ ಮಾಹಿತಿಯಿರಲಿಲ್ಲ ಎಂದು ಬೈಕ್ ಮಾಲಕ ಎಸ್ ಮುರುಗನ್ ಹೇಳಿದ್ದಾರೆ. ಬೆಳಿಗ್ಗೆ ಬಂದು ನೋಡುವಾಗ ರಸ್ತೆಗೆ ಬಲವಾಗಿ ಸಿಮೆಂಟ್‍ನಿಂದ ತಮ್ಮ ಬೈಕ್  ಅಂಟಿಕೊಂಡಿತ್ತು ಎಂದು ಅವರು ಹೇಳಿದ್ದಾರೆ.

ನಂತರ ಪಾಲಿಕೆ ಆಯುಕ್ತರಿಗೆ ದೂರಿದ ನಂತರ ಅವರು ರಸ್ತೆಯನ್ನು ಪರಿಶೀಲಿಸಿದ್ದಾರೆ. ವಾಹನವನ್ನು ಅಲ್ಲಿಂದ ಕೆಲಸಗಾರರಿಂದ ತೆಗೆಸಿ ರಸ್ತೆಗೆ ತೇಪೆ ಹಚ್ಚಲಾಗಿದೆ.

"ಈ ರೀತಿ ರಸ್ತೆ ನಿರ್ಮಾಣ ಮಾಡಿರುವುದನ್ನು ನೋಡಿ ಆಘಾತವಾಯಿತು. ಇದು ನಮ್ಮ ನಗರಪಾಲಿಕೆಗೆ ಕೆಟ್ಟ ಹೆಸರು ತಂದಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ, ಈ ರಸ್ತೆ ನಿರ್ಮಾಣಕ್ಕೆ ಪಾಲಿಕೆ ವತಿಯಿಂದ ಆದೇಶ ನೀಡಲಾಗಿರಲಿಲ್ಲ" ಎಂದು ಆಯುಕ್ತರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News