ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿ ಸ್ಥಾನ ಸಂತೋಷದಿಂದ ಸ್ವೀಕರಿಸಿಲ್ಲ: ಶರದ್ ಪವಾರ್

Update: 2022-07-01 04:51 GMT
Photo:PTI

 ಮುಂಬೈ: ಪಕ್ಷದ ಆದೇಶದ ನಂತರ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ  ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು "ಸಂತೋಷದಿಂದ" ಹಾಗೆ ಮಾಡಿರಲಿಕ್ಕಿಲ್ಲ ಎಂದು ಹಿರಿಯ ರಾಜಕಾರಣಿ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.

ಉದ್ಧವ್ ಠಾಕ್ರೆ ಅವರು ಸಿಂ ಹುದ್ದೆಯಿಂದ ಕೆಳಗಿಳಿದ ಕಾರಣ ಮಹಾ ವಿಕಾಸ್ ಅಘಾಡಿಯ ಭಾಗವಾಗಿದ್ದ   ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ನಿನ್ನೆ ಅಧಿಕಾರವನ್ನು ಕಳೆದುಕೊಂಡಿತು.

"ದೇವೇಂದ್ರ ಫಡ್ನವಿಸ್ ಅವರು ಉಪಮುಖ್ಯಮಂತ್ರಿ ಸ್ಥಾನವನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ನಾನು ಭಾವಿಸುವುದಿಲ್ಲ" ಎಂದು  ಪವಾರ್ ಹೇಳಿಕೆ ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

"ಅವರಿಗೆ ಉಪ ಮುಖ್ಯಮಂತ್ರಿಯಾಗಲು ಇಷ್ಟವಿರಲಿಲ್ಲ ಎನ್ನುವುದು ಅವರ  ಮುಖದಲ್ಲಿ ಕಾಣಬಹುದು.  ಆದರೆ ಅವರು ನಾಗ್ಪುರದಲ್ಲಿ ವಾಸಿಸುತ್ತಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿರುವ ಕಾರಣ ಅವರು ಆ ಸ್ಥಾನವನ್ನು ಒಪ್ಪಿಕೊಂಡರು’’ಎಂದು  ಪವಾರ್ ಹೇಳಿದರು.

ಗುರುವಾರ ಬೆಳಗ್ಗೆ  ಫಡ್ನವಿಸ್ ಅವರು ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಘೋಷಿಸಿದ್ದರು. ತಾನು ಸರಕಾರದ ಭಾಗವಾಗುವುದಿಲ್ಲ ಆದರೆ ಹೊರಗಿನಿಂದ ಬೆಂಬಲ ನೀಡುತ್ತೇನೆ ಎಂದು ಅವರು ಹೇಳಿದ್ದರು.ಕಳೆದ ಕೆಲವು ಸಮಯದಿಂದ ಬಿಜೆಪಿ ಸರಕಾರ ರಚನೆಗೆ ತೆರೆಮರೆಯಲ್ಲಿ ಕೆಲಸ ಮಾಡಿದ್ದ ಫಡ್ನವಿಸ್ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ.

ಸರಕಾರದ ಭಾಗವಾಗುವುದಿಲ್ಲ ಎಂದು ಪ್ರಕಟಿಸಿದ ಕೇವಲ ಮೂರು ಗಂಟೆಗಳ ನಂತರ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಫಡ್ನವಿಸ್ ಅವರು ಸಿಂಧೆ ಅವರೊಂದಿಗೆ ಉಪ ಮುಖ್ಯಮಂತ್ರಿ ಆಗಿಪ್ರಮಾಣ ವಚನ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News