ಶಿವಸೇನೆ ಬಂಡಾಯ ಶಾಸಕರಿಗೆ ವಿಧಾನಸಭೆ ಕಲಾಪಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಲು ಸುಪ್ರೀಂ ಮೊರೆ ಹೋದ ಉದ್ಧವ್ ಠಾಕ್ರೆ

Update: 2022-07-01 05:34 GMT

ಹೊಸದಿಲ್ಲಿ: ತನ್ನ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆಯ ಶಾಸಕರುಗಳು ವಿಧಾನಸಭೆ ಕಲಾಪಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸುವಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಮನವಿ ಮಾಡಿದ್ದಾರೆ.

‘ಪಕ್ಷಾಂತರದ ಸಾಂವಿಧಾನಿಕ ಪಾಪ ಎಸಗುತ್ತಿರುವ ಬಿಜೆಪಿಯ ಅಣತಿಯಂತೆ ನಡೆದುಕೊಳ್ಳುತ್ತಿರುವ ತಪ್ಪಿತಸ್ಥ ಶಾಸಕರು ವಿಧಾನಸಭೆಯ ಸದಸ್ಯರಾಗಿ ಒಂದೇ ಒಂದು ದಿನವೂ ಮುಂದುವರಿಯಲು ಅವಕಾಶ ಬಿಡಬಾರದು' ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಉದ್ಧವ್ ಠಾಕ್ರೆ ಬಳಗ ತಿಳಿಸಿದೆ.

"ಮಧ್ಯಂತರ ಕ್ರಮವಾಗಿ ಅನರ್ಹತೆ ಪ್ರಕ್ರಿಯೆ ಬಾಕಿ ಇರುವ 16 ಬಂಡಾಯ ಶಾಸಕರನ್ನು ಅಮಾನತುಗೊಳಿಸಿ. ವಿಧಾನಸಭೆಯ  ಯಾವುದೇ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಅವರನ್ನು ನಿರ್ಬಂಧಿಸಿ'' ಎಂದು ಠಾಕ್ರೆ ಪರ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ನಂತರ ನ್ಯಾಯಾಲಯವು ಈ ವಿಷಯವನ್ನು ಸೋಮವಾರ ವಿಚಾರಣೆ ನಡೆಸುವುದಾಗಿ ಹೇಳಿದೆ.

ಕಳೆದ ಸೋಮವಾರ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಬಂಡಾಯ ಆರಂಭಿಸಿದ ಬೆನ್ನಲ್ಲೇ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರ ಬೆಂಬಲದೊಂದಿಗೆ ಈಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ಶಿಂಧೆ ಸೇರಿದಂತೆ 16 ಶಾಸಕರನ್ನು ಅನರ್ಹಗೊಳಿಸುವಂತೆ ಠಾಕ್ರೆ ಉಪಸಭಾಪತಿಗೆ ಸೂಚಿಸಿದ್ದರು.

ಬಂಡಾಯ ಶಾಸಕರು ತಮ್ಮನ್ನು ಅನರ್ಹಗೊಳಿಸುವ ಯಾವುದೇ ಕ್ರಮ ಕಾನೂನುಬಾಹಿರ ಎಂದು ಪ್ರತಿಪಾದಿಸಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಅನರ್ಹತೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಸೋಮವಾರಕ್ಕೆ(ಜು.11) ನಿಗದಿಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News